ಇಂದಿನಿಂದ ಸಿದ್ದರಾಮಯ್ಯ ಬರ ಪ್ರವಾಸ, ವಿವರಗಳು

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 15 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರದಿಂದ ಬರ ಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲ ಹಂತದಲ್ಲಿ ಅವರು ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ.

ಶುಕ್ರವಾರ ಬೆಳಗ್ಗೆ 8 ಗಂಟೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೀದರ್‌ಗೆ ತೆರಳುವ ಮುಖ್ಯಮಂತ್ರಿಗಳು, ಸೋಮವಾರದ ತನಕ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಅವಲೋಕನ ನಡೆಸಿ, ಜಿಲ್ಲಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಿದ್ದಾರೆ. [ಉತ್ತರ ಕರ್ನಾಟಕ ಭಾಗಕ್ಕೆ ಮಹಾರಾಷ್ಟ್ರದಿಂದ 4 ಟಿಎಂಸಿ ನೀರು]

siddaramaiah

ಸಿದ್ದರಾಮಯ್ಯ ಪ್ರವಾಸದ ವಿವರ

* ಶುಕ್ರವಾರ ಬೆಳಗ್ಗೆ ಬೀದರ್‌ಗೆ ಭೇಟಿ, ಬರ ಪರಿಸ್ಥಿತಿ ತೀವ್ರವಾಗಿರುವ ತಾಲೂಕುಗಳಲ್ಲಿ ಅವಲೋಕನ, ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲಿಸುವರು. [ಸುಡುತ್ತಿದೆ ಕರ್ನಾಟಕ, ಬಾ ಮಳೆಯೇ ಬೇಗ ಬಾ]

* ಕಲಬುರಗಿಗೆ ಭೇಟಿ ಗ್ರಾಮಗಳು, ಮೇವು ಬ್ಯಾಂಕ್ ಮತ್ತು ಗೋಶಾಲೆಗಳಿಗೆ ಭೇಟಿ, ಅಧಿಕಾರಿಗಳ ಜೊತೆ ಸಭೆ

* ಶುಕ್ರವಾರ ರಾತ್ರಿ ಕಲಬುರಗಿಯಲ್ಲಿ ವಾಸ್ತವ್ಯ, ಶನಿವಾರ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಭೇಟಿ [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]

* ಭಾನುವಾರ ರಾತ್ರಿ ವಿಜಯಪುರದಲ್ಲಿ ವಾಸ್ತವ್ಯ, ಸೋಮವಾರ ಆ ಜಿಲ್ಲೆಯ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವರು. ಬಾಗಲಕೋಟೆಗೆ ಭೇಟಿ, ರಾತ್ರಿ ಬೆಂಗಳೂರಿಗೆ ವಾಪಸ್

ಜಿಲ್ಲಾಧಿಕಾರಿಗಳ ಜೊತೆ ಸಂವಾದ : ತೀವ್ರ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳು ಇತ್ತೀಚೆಗೆ ಸಂವಾದ ನಡೆಸಿದ್ದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ 2 ದಿನ ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಸ್ಥಳೀಯ ಶಾಸಕರನ್ನು ಭೇಟಿಯಾಗಿ ಸಮಾಲೋಚಿಸಬೇಕು. ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲಿಸಬೇಕು. ಮೇವು ಬ್ಯಾಂಕ್, ಗೋಶಾಲೆಗಳ ಸ್ಥಿತಿಗತಿ ಕುರಿತು ಪರಾಮರ್ಶಿಸಬೇಕು ಎಂದು ಸೂಚಿಸಿದ್ದರು.

ಕುಡಿಯುವ ನೀರು ಪೂರೈಕೆಗಾಗಿ ಸರ್ಕಾರ ಈಗಾಗಲೇ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಿದೆ. 70 ಮೇವು ಬ್ಯಾಂಕ್ ಮತ್ತು 11 ಕಡೆ ಗೋ ಶಾಲೆಗಳನ್ನು ತೆರೆಯಲಾಗಿದೆ. 2015-16ನೇ ಸಾಲಿನಲ್ಲಿ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕಾಗಿ 275 ಕೋಟಿ ರೂ. ಬಿಡುಗಡೆ ಮಾಡಿದ್ದು 175 ಕೋಟಿ ರೂ. ವೆಚ್ಚವಾಗಿದೆ.

ಕರ್ನಾಟಕದಲ್ಲಿ ಈ ಬಾರಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದ್ದು, 120ಕ್ಕೂ ಅಧಿಕ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah will tour drought-hit districts in north Karnataka from April 15, 2016. More than 120 taluks of Karnataka announced as drought-hit this year.
Please Wait while comments are loading...