ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಯಾವ ಯಾತ್ರೆ ಬೇಕಾದರೂ ಮಾಡಲಿ, ಜನರಿಗೆ ನರಕ ಕಲ್ಪಿಸುವ ಯಾತ್ರೆ ಮಾಡದಿರಲಿ: ಸಿದ್ದರಾಮಯ್ಯ ಕಿಡಿ

|
Google Oneindia Kannada News

ಬೆಂಗಳೂರು, ನವೆಂಬರ್ 7: ಬಿಜೆಪಿಯವರು ಯಾವ ಯಾತ್ರೆ ಬೇಕಾದರೂ ಮಾಡಲಿ, ಆದರೆ ಜನರಿಗೆ ನರಕ ಕಲ್ಪಿಸುವ ಯಾತ್ರೆಯನ್ನು ಮಾತ್ರ ಮಾಡಬಾರದೆಂದು ಪತ್ರಿಕಾ ಹೇಳಿಕೆ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುವ ಮೊದಲು ರಾಜ್ಯದ ಜನರಿಗೆ ನ್ಯಾಯಯುತವಾಗಿ ನೀಡಬೇಕಾದ್ದನ್ನು ನೀಡಿ, ಜನರ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ತರಲಿ ಎಂದರು. ರಾಜ್ಯ ಬಿಜೆಪಿ ಸರ್ಕಾರವು 'ಜನ ಸಂಕಲ್ಪ' ಯಾತ್ರೆಗಳನ್ನು ಮುಂದುವರೆಸಿದೆ. ಸರ್ಕಾರಕ್ಕೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಚಾರದಲ್ಲಿ ಯಾವುದೇ ಬದ್ಧತೆ ಸಂಕಲ್ಪಗಳಿಲ್ಲದಿರುವಾಗ ಜನಸಂಕಲ್ಪ ಯಾತ್ರೆಗಳನ್ನು ಮಾಡುವುದು ಹಾಸ್ಯಾಸ್ಪದ ಮತ್ತು ನಾಡಿಗೆ ಮಾಡುವ ದ್ರೋಹ, ರಾಜ್ಯ ಬಿಜೆಪಿ ಸರ್ಕಾರಕ್ಕೆ ಅನೇಕ ವಿಚಾರಗಳಲ್ಲಿ ಯಾವ ಸಂಕಲ್ಪವೂ ಇಲ್ಲ ಎಂದರು.

ಕೇಂದ್ರವನ್ನು ಒತ್ತಾಯಿಸಿ ಅಗತ್ಯವಿದ್ದರೆ ಪ್ರತಿಭಟಿಸಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನಗಳನ್ನು ತಂದು ರಾಜ್ಯದ ಅಭಿವೃದ್ಧಿಗೆ ಅದನ್ನು ವಿನಿಯೋಗಿಸಬೇಕು. ದುರಂತವೆಂದರೆ ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎದುರು ನಿಂತು ರಾಜ್ಯದ ಪರವಾಗಿ ಧೈರ್ಯವಾಗಿ ಮಾತನಾಡುವ ಸಂಸದರು ಒಬ್ಬರೂ ಇಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸುತ್ತಾರಾದರೂ ಕರ್ನಾಟಕಕ್ಕೆ ಎಲ್ಲೆಲ್ಲಿ ಅನ್ಯಾಯ ಮಾಡಬಹುದು ಎನ್ನುವುದನ್ನು ಯೋಜಿಸುವುದರಲ್ಲಿಯೇ ಅವರ ಸಮಯ ಮುಗಿದು ಹೋಗುತ್ತಿದೆ.

ಇನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಲಿ, ಇನ್ಯಾರೇ ಸಚಿವರುಗಳಾಗಲೀ ಕೇಂದ್ರ ಸರ್ಕಾರದೊಂದಿಗೆ ಧೈರ್ಯವಾಗಿ ವ್ಯವಹರಿಸುವ ಶಕ್ತಿಯನ್ನು ಹೊಂದಿಲ್ಲ. ಪ್ರಹ್ಲಾದ್ ಜೋಷಿಯವರು ನನ್ನನ್ನು ಹೇಗೆ ಟೀಕಿಸಬಹುದು ಎನ್ನುವುದರಲ್ಲೇ ಸಮಯ ಕಳೆಯುತ್ತಿದ್ದಾರೆ.

2022-23 ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯನ್ನು ನೋಡಿದರೆ ರಾಜ್ಯದ ಸಂಕಲ್ಪ ಯಾವ ಮಟ್ಟಿಗಿದೆ ಎಂದು ಅರ್ಥವಾಗುತ್ತದೆ. ಈ ವರ್ಷ 20352 ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ನೀಡಬೇಕಾಗಿತ್ತುಆದರೆ, ಸರ್ಕಾರದ ದಾಖಲೆಗಳನ್ನು ಗಮನಿಸಿದರೆ ಅಕ್ಟೋಬರ್ ಅಂತ್ಯದ ವೇಳೆಗೆ ಕೇವಲ 5083 ಕೋಟಿ ರೂಗಳನ್ನು (ಶೇ25) ಮಾತ್ರ ಬಿಡುಗಡೆ ಮಾಡಿದೆ.

Siddaramaiah takes on BJPs Jana Sankalpa Yatre

ಈಗಾಗಲೇ ಹಣಕಾಸು ವರ್ಷದ ಮುಕ್ಕಾಲು ಭಾಗ ಮುಗಿದು ಹೋಗಿದೆ. ಈ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ಸಚಿವರುಗಳಾಗಲಿ ಕೇಂದ್ರದ ಮುಂದೆ ನಿಂತು ರಾಜ್ಯಕ್ಕೆ ಅನುದಾನಗಳನ್ನು ತರಲು ಯಾವುದೇ ಸಂಕಲ್ಪ ಮಾಡಿಲ್ಲ ಎಂದರು.

ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ:

ಕೇಂದ್ರ ಸರ್ಕಾರವು ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಡಿ ಇಲಾಖೆಗಳಿಗೆ ಇದುವರೆಗೂ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಉದಾಹರಣೆಗೆ, ವಸತಿ ಇಲಾಖೆಗೆ 473 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಯಾವುದೆ ಅನುದಾನ ಬಿಡುಗಡೆ ಮಾಡಿಲ್ಲವೆಂಬ ದಾಖಲೆಯನ್ನು ಸರ್ಕಾರ ನೀಡಿದೆ.

ಹಿಂದುಳಿದ ವರ್ಗಗಳ ಇಲಾಖೆಗೆ ಕೇಂದ್ರವು ಒಂದು ರೂ.ವನ್ನೂ ಬಿಡುಗಡೆ ಮಾಡಿಲ್ಲವೆಂದು ಸರ್ಕಾರದ ವೆಬ್‍ಸೈಟ್ ಹೇಳುತ್ತಿದೆ. ಉನ್ನತ ಶಿಕ್ಷಣ ಇಲಾಖೆಗೆ 59.22 ಕೋಟಿ ರೂ.ಗಳನ್ನು ನೀಡಬೇಕಾಗಿತ್ತು. ಆದರೆ, ಕೊಟ್ಟದ್ದು ಸೊನ್ನೆ ರೂಪಾಯಿ.

ಸಮಾಜ ಕಲ್ಯಾಣ ಇಲಾಖೆಗೆ 346 ಕೋಟಿ ರೂಗಳಷ್ಟು ಅನುದಾನ ರಾಜ್ಯಕ್ಕೆ ಬರುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 7 ಕೋಟಿ ರೂ.ಮಾತ್ರ. ಕೃಷಿ ಇಲಾಖೆಗೆ 613 ಕೋಟಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 136 ಕೋಟಿ ರೂ ಮಾತ್ರ. ಕೃಷಿ, ಸಮಾಜ ಕಲ್ಯಾಣ ಇಲಾಖೆಗಳನ್ನು ರಾಜ್ಯದಿಂದ ಆಯ್ಕೆಯಾದ ಶೋಭ ಕರಂದ್ಲಾಜೆ ಮತ್ತು ನಾರಾಯಣಸ್ವಾಮಿಯವರು ನಿಭಾಯಿಸುತ್ತಿದ್ದಾರೆ. ಅವರುಗಳೇ ರಾಜ್ಯಕ್ಕೆ ಕೊಡಿಸಬೇಕಾದ ಅನುದಾನವನ್ನು ಕೊಡಿಸಬಾರದೆಂಬ ಸಂಕಲ್ಪ ಮಾಡಿದಂತೆ ಕಾಣುತ್ತಿದೆ.ಇಲ್ಲದಿದ್ದರೆ ಕೊಡಿಸಬೇಕಾದ ಅನುದಾನಗಳನ್ನು ಕೊಡಿಸುತ್ತಿರಲಿಲ್ಲವೇ?

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದರು. ಅವರ ಉನ್ನತ ಶಿಕ್ಷಣ ಇಲಾಖೆಗೆ ಒಂದು ರೂಪಾಯಿಯನ್ನೂ ಕೊಡದೆ ಮೋದಿ ಸರ್ಕಾರ ಅವಮಾನ ಮಾಡಿದೆ. ಹಾಗೆಯೇ, ಕೌಶಲ್ಯಾಭಿವೃದ್ಧಿ ಇಲಾಖೆಯ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರವು ಪದೇ ಪದೇ ಕೊಚ್ಚಿಕೊಳ್ಳುತ್ತಿದೆ. (ಈ ಇಲಾಖೆಯನ್ನು ಸ್ಥಾಪನೆ ಮಾಡಿ ಯಥೇಚ್ಚ ಅನುದಾನಗಳನ್ನು ನೀಡಿ ತರಬೇತಿ ಮತ್ತು ಉದ್ಯೋಗಗಳನ್ನು ಒದಗಿಸಿದ್ದು ನಮ್ಮ ಸರ್ಕಾರ) ಆದರೆ, ಸರ್ಕಾರದ ವೆಬ್‍ಸೈಟ್ ಪ್ರಕಾರ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ 472.5 ಕೋಟಿ ರೂ.ಗಳನ್ನು ನೀಡಬೇಕಾಗಿದ್ದ ಕೇಂದ್ರವು ಇದುವರೆಗೂ ನೀಡಿರುವುದು ಕೇವಲ 3.68 ಕೋಟಿ ಮಾತ್ರ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2152 ಕೋಟಿ ರೂ.ಗಳನ್ನು ಕೊಡಬೇಕಾಗಿತ್ತು. ಕೊಟ್ಟಿರುವುದು ಕೇವಲ 382 ಕೋಟಿ ರೂ. ಮಾತ್ರ.

Siddaramaiah takes on BJPs Jana Sankalpa Yatre

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ 1431 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು. ಆದರೆ, ಇದುವರೆಗೂ ಕೂಡ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ರಾಜ್ಯ ಸರ್ಕಾರದ ದಾಖಲೆಗಳು ಹೇಳುತ್ತಿವೆ. ಆದರೂ ರಾಜ್ಯದ ಈ ಖಾತೆಯ ಸಚಿವರು ವಿವಾದಾತ್ಮಕ ಹೇಳಿಕೆಗಳಲ್ಲೇ ಸಮಯ ಕಳೆಯುತ್ತಿದ್ದಾರೆ.

ಜಲಸಂಪನ್ಮೂಲ ಇಲಾಖೆಗೆ 66 ಕೋಟಿ ರೂ. ಕೊಡಬೇಕಾಗಿತ್ತು. ಇದುವರೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಸಂಕಲ್ಪ ಇದ್ದರೆ ಕೇಂದ್ರವು ರಾಜ್ಯಕ್ಕೆ ಮಾಡುತ್ತಿರುವ ಮೋಸವನ್ನು ಪ್ರತಿಭಟಿಸಿ ರಾಜ್ಯಕ್ಕೆ ದಕ್ಕಬೇಕಾದ ಪ್ರತಿ ಪೈಸೆಯನ್ನೂ ಸಹ ಬಿಡುಗಡೆ ಮಾಡಿಸಬೇಕಾಗಿತ್ತು. ರಾಜ್ಯ ಸರ್ಕಾರದ ಸಂಕಲ್ಪ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕಮಿಷನ್ ದಂಧೆ, ಸರ್ಕಾರಿ ಹುದ್ದೆಗಳ ನೇಮಕಾತಿ , ವರ್ಗಾವಣೆ, ಬಡ್ತಿ ಮುಂತಾದವುಗಳಲ್ಲಿ ಭ್ರಷ್ಟಾಚಾರ ಎಷ್ಟೆಷ್ಟು ನಡೆಸಬಹುದು ಎನ್ನುವುದಕ್ಕೆ ಮಾತ್ರ ಬಿಜೆಪಿ ಸರ್ಕಾರಗಳಿಗೆ ಸಂಕಲ್ಪ ಇದೆಯೇ ಹೊರತು, ಜನರ ಕಲ್ಯಾಣ ಮಾಡಬೇಕೆಂಬ ಬಗ್ಗೆ ಮಾತ್ರ ಯಾವ ಸಂಕಲ್ಪವೂ ಇಲ್ಲ.

ಜನರ ಬದುಕನ್ನು ಸುಧಾರಿಸುವ ಸಂಕಲ್ಪ ಮಾಡದ ಸರ್ಕಾರ ಅತ್ಯಂತ ಹಾಸ್ಪಾಸ್ಪದವಾಗಿ ಜನಸಂಕಲ್ಪ ಯಾತ್ರೆ ಮಾಡಲು ಹೊರಟಿದೆ. ರಾಜ್ಯದ ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ನಡುವೆ ದ್ವೇಷ ಮತ್ತು ಒಡಕನ್ನು ಸೃಷ್ಟಿ ಮಾಡಿ ಜನರನ್ನು ಶಾಶ್ವತವಾಗಿ ವಿಭಜಿಸಿ, ಜನರ ಮನಸ್ಸಿಗೆ ವಿಷ ಉಣಿಸುವ ಮೂಲಕ ಸರ್ಕಾರವೇ ಹಿಂಸೆ ಮತ್ತು ದ್ವೇಷವನ್ನು ಪ್ರೋತ್ಸಾಹಿಸುವುದರಲ್ಲಿ ನಿರತವಾಗಿದೆ.

ಸುಳ್ಳು ಹೇಳುವ ವಿಚಾರದಲ್ಲಿ ಬಿಜೆಪಿ ಸರ್ಕಾರದ ಸಂಕಲ್ಪ, ಬಹುಶಃ ಯಾವ ನಾಗರಿಕ ಸರ್ಕಾರವೂ ಹೇಳದಷ್ಟು ಮಟ್ಟದಲ್ಲಿ ಸಾಧನೆ ಮಾಡಿವೆ. ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 1.5 ಲಕ್ಷ ಕೋಟಿಯಷ್ಟು ಅನುದಾನ ಬರುವುದಾಗಿ ಒಡಂಬಡಿಕೆಯಾದರೂ, 9.82 ಲಕ್ಷ ಕೋಟಿ ಅನುದಾನ ಬರುತ್ತದೆ ಎಂದು ಸುಳ್ಳು ಹೇಳಿದೆ. ಈ ಕುರಿತು "ದ ಹಿಂದು" ಮುಂತಾದ ಪತ್ರಿಕೆಗಳು ಸರ್ಕಾರದ ಸುಳ್ಳನ್ನು ಬಯಲು ಮಾಡಿವೆ.

ಕೊಬ್ಬರಿಯ ಬೆಲೆ ಒಂದೇ ಸಮನೆ ಕುಸಿಯುತ್ತಿದೆ

ರಾಜ್ಯದಲ್ಲಿ ತೆಂಗಿನ ಕಾಯಿ ಮತ್ತು ಕೊಬ್ಬರಿಯ ಬೆಲೆ ಒಂದೇ ಸಮನೆ ಕುಸಿಯುತ್ತಿದೆ. ಅಡಿಕೆ, ಕಾಫಿ, ಮೆಣಸು ಬೆಳೆಯುವವರೂ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವೇ ಹೇಳಿರುವ ಹಾಗೆ ಕಳೆದ ಐದು ವರ್ಷಗಳಲ್ಲಿ 1.36 ಕೋಟಿ ಎಕರೆಗಳಷ್ಟು ಭೂಮಿಯಲ್ಲಿ ರಾಜ್ಯದ ರೈತರು ಬೆಳೆದ ಬೆಳೆ ಹಾಳಾಗಿದೆ. 2.62 ಲಕ್ಷ ಮನೆಗಳಿಗೆ ಹಾನಿಯಾಗಿದೆ. ಆದರೆ ಇದುವರೆಗೂ ರೈತರಿಗೆ ಸಮರ್ಪಕವಾಗಿ ಪರಿಹಾರ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲವೆಂದು ತಿಳಿದು ವಿಶ್ವ ಬ್ಯಾಂಕಿನ ಮುಂದೆ ನೆರವಿಗಾಗಿ ಕೋರಿಕೊಳ್ಳುವಷ್ಟರ ಮಟ್ಟಿಗೆ ಕೇಂದ್ರ-ರಾಜ್ಯ ಸರ್ಕಾರಗಳು ದಿವಾಳಿಯಾಗಿವೆ. ಹಾಗಿದ್ದರೆ ಜನರಿಂದ ದೋಚುತ್ತಿರುವ ತೆರಿಗೆ ಹಣ ಎಲ್ಲಿ ಹೋಯಿತು? ಬಿಜೆಪಿಯವರ ಭ್ರಷ್ಟಾಚಾರದ ಹಗೇವುಗಳ ದಾಹ ತೀರುವುದೆಂದು?

ಬೆಂಗಳೂರು ಮತ್ತು ರಾಜ್ಯದ ರಸ್ತೆಗಳಲ್ಲಿ ಗುಂಡಿಬಿದ್ದು ಮರಣ ಹೊಂದುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಅಪಘಾತಗಳಲ್ಲಿ ಮರಣ ಹೊಂದುವವರ ಕರ್ನಾಟಕ ರಾಜ್ಯ ಎರಡನೇ ಸ್ಥಾನದಲ್ಲಿದೆ. ರಸ್ತೆಗಳ ಗುಂಡಿ ಮುಚ್ಚುವ ಯೋಗ್ಯತೆಯೂ ಸರ್ಕಾರಕ್ಕೆ ಇಲ್ಲವಾಗಿದೆ. ರಾಜ್ಯದ 15 ಜಿಲ್ಲೆಗಳ ಮಕ್ಕಳಿಗೆ ಇನ್ನೂ ಸಮವಸ್ತ್ರ ನೀಡಿಲ್ಲವೆಂದು ಪತ್ರಿಕೆಗಳು ವರದಿ ಮಾಡಿವೆ. ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ವಿದ್ಯಾರ್ಥಿವೇತನ ದೊರಕುತ್ತಿಲ್ಲ.

ಇಷ್ಟೆಲ್ಲಾ ಅವಾಂತರಗಳನ್ನು ಸೃಷ್ಟಿಸಿದ್ದರೂ, ಜನರ ಬದುಕನ್ನು ಬರ್ಬಾದು ಮಾಡಿದ್ದರೂ ಸಹ ಜನಸಂಕಲ್ಪ ಯಾತ್ರೆಯನ್ನು ಮಾಡುತ್ತಿರುವ ದುಷ್ಟತನ ಹಾಗೂ ಭಂಡತನವನ್ನು ಬಿಜೆಪಿ ಸರ್ಕಾರ ಪ್ರದರ್ಶಿಸುತ್ತಿದೆ.

English summary
Let the BJP do whatever yatra it wants, don't do a yatra that creates hell for the people says siddaramaiah,The state BJP government is no determination in many matters, Siddaramaiah,Jana Sankalpa Yatre,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X