• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಭಾಷಾ ಮಾಧ್ಯಮ ಕಡ್ಡಾಯ: ಸಿಎಂ ಸಿದ್ದರಾಮಯ್ಯ

By Mahesh
|

ಮತ್ತೊಂದು ವಿಶೇಷವೆಂದರೆ, ನಮ್ಮ ಸರ್ಕಾರದ ಭಾಗ್ಯವೆಂಬಂತೆ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬುತ್ತಿದೆ. ಈ ನೂರು ವರ್ಷದ ಸಂಭ್ರಮಾಚರಣೆಯನ್ನು ಆಚರಿಸಲು ಬೇಕಾಗುವ ಎಲ್ಲಾ ಧನಸಹಾಯವನ್ನೂ ನಮ್ಮ ಸರ್ಕಾರ ಪರಿಷತ್ತಿಗೆ ನೀಡುತ್ತಿದೆ.

ಪರಿಷತ್ ಸಂಭ್ರಮಕ್ಕೆ ಅನುದಾನ: ನಮ್ಮ ಸರ್ಕಾರ ತನ್ನ ಸಾಂಸ್ಕೃತಿಕ ಕರ್ತವ್ಯ ನೆರವೇರಿಸುವಲ್ಲಿ ಎಂದಿಗೂ ಹಿಂದೆ ಬೀಳುವುದಿಲ್ಲ. ಸಾಹಿತ್ಯ-ಸಾಂಸ್ಕೃತಿಕ ಸಂವರ್ಧನೆಗೆ ಪೂರಕವಾಗುವಂತಹ ಕಾರ್ಯಕ್ರಮಗಳಿಗೆ 250 ಕೋಟಿ ರೂ. ಗಳಿಗೂ ಹೆಚ್ಚು ವಾರ್ಷಿಕ ಆಯವ್ಯಯ ಅನುದಾನವನ್ನು ನಮ್ಮ ಸರ್ಕಾರ ನೀಡಿದೆ. ಇದು ಈ ದೇಶದಲ್ಲಿಯೇ ಇತರೆ ರಾಜ್ಯಗಳು ಕೊಡುವ ಅನುದಾನಕ್ಕಿಂತ ಹೆಚ್ಚಾಗಿರುವುದು ಸ್ಪಷ್ಟವಾಗಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸಿನ ಬೆಂಬಲವನ್ನು ನಮ್ಮ ಸರ್ಕಾರ ನೀಡಿದೆ. ಮುಂದೆಯೂ ಯಾವುದೇ ಲೋಪಕ್ಕೆ ಎಡೆಗೊಡದಂತೆ ನಡೆದುಕೊಳ್ಳುವ ಭರವಸೆ ನೀಡುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಕ್ರಿಯಾ ಯೋಜನೆ ಸಲ್ಲಿಸಿದ್ದು, ಸರ್ಕಾರ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸುತ್ತೇನೆ.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ ಐದು ಲಕ್ಷದ ರೂಪಾಯಿಗಳ ಅನುದಾನವನ್ನು ಸರ್ಕಾರ ನೀಡುತ್ತಿದೆ. ಅಷ್ಟೇ ಅಲ್ಲದೆ, ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಿಗೂ ಅನುದಾನ ನೀಡಲಾಗುತ್ತಿದೆ. ಅದನ್ನೂ ಸರ್ಕಾರ ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುತ್ತಿದ್ದೇನೆ.

ಈ ಸಮ್ಮೇಳನದ ವಿಶಿಷ್ಟತೆಯ ಬಗ್ಗೆ ಎರಡು ಮಾತುಗಳನ್ನು ಹೇಳಲೇಬೇಕು:

ಮೊದಲನೆಯದು ಹಾಸನ ಜಿಲ್ಲೆ. ಕನ್ನಡ ಸಾರಸ್ವತ ಲೋಕಕ್ಕೆ ಗೊರೂರು ರಾಮಸ್ವಾಮಿ ಅಯ್ಯಂಗಾರ್, ರಾಜಾರಾವ್, ಡಾ ಎಸ್.ಎಲ್. ಭೈರಪ್ಪ, ಡಾ ಹೆಚ್. ಜೆ. ಲಕ್ಕಪ್ಪ ಗೌಡ, ಬಾನು ಮುಷ್ತಾಕ್ ಅಂತಹ ಪ್ರತಿಭೆಗಳನ್ನು ಕೊಡುಗೆ ನೀಡಿದೆ.

ಎರಡನೆಯದು ಶ್ರವಣಬೆಳಗೊಳ. ಇದೊಂದು ಧಾರ್ಮಿಕ ಕ್ಷೇತ್ರ. ಜಗತ್ತಿನಲ್ಲಿಯೇ ಮಹಾದ್ಭುತಗಳಲ್ಲಿ ಒಂದೆನಿಸಿದ ಬಾಹುಬಲಿ ಗೊಮ್ಮಟಸ್ವಾಮಿಯು ನೆಲೆಗೊಂಡಿರುವ ಕ್ಷೇತ್ರ. ಜೈನ ಧರ್ಮ ಅತ್ಯಂತ ಪ್ರಾಚೀನ ಕಾಲದಲ್ಲಿಯೇ ಇಲ್ಲಿಗೆ ಬಂದು ಬೇರೂರಿ ತನ್ನ ಪ್ರಭಾವವನ್ನು ಈ ಜನತೆಯ ಮೇಲೆ ಅಚ್ಚಳಿಯದ ರೀತಿಯಲ್ಲಿ ಬೀರಿದೆ. ಕನ್ನಡ ಸಾಹಿತ್ಯ ಪ್ರಾರಂಭವಾಗುವುದೇ ಜೈನ ಯುಗದ ಮುಖೇನ.

ಕನ್ನಡದ ಆದಿಕವಿ ಪಂಪ ಜೈನಧರ್ಮಕ್ಕೆ ಸೇರಿದವನು. ರನ್ನ, ಪೊನ್ನ, ನಾಗಚಂದ್ರ ಇವರೆಲ್ಲರೂ ಕನ್ನಡದ ಮಹತ್ವದ ಕವಿಗಳು. ತಮ್ಮ ಕಾವ್ಯ ರಚನೆಗೆ ಸಂಸ್ಕೃತ ಪ್ರಾಕೃತ ಭಾಷೆಗಳನ್ನು ಅವಲಂಭಿಸುವುದು ಬಿಟ್ಟು ಈ ನೆಲದ ಜನರ ಭಾಷೆಯಾದ ಕನ್ನಡವನ್ನು ಆಶ್ರಯಿಸಿ ಜೈನ ಧರ್ಮದ ಕಾವ್ಯ ಕೃತಿಗಳನ್ನು ಬರೆದರು. ಜೈನ ಕವಿಗಳು ಒಂದು ಧಾರ್ಮಿಕ ಕಾವ್ಯವನ್ನು ಬರೆದರೆ ಮತ್ತೊಂದು ಲೌಕಿಕ ಕಾವ್ಯವನ್ನು ಬರೆದರು. ಪಂಪ, ರನ್ನ, ಪೊನ್ನರನ್ನು ಕನ್ನಡದ ರತ್ನತ್ರಯರೆಂದು ಕರೆಯುತ್ತಾರೆ. ಆ ಮೂವರೂ ಜೈನಧರ್ಮಕ್ಕೆ ಸೇರಿದ ಮಹನೀಯರು.

ಮತ್ತೊಂದು ವಿಶೇಷವೆಂದರೆ ಆದಿಕವಿ ಪಂಪ ಮನುಷ್ಯ ಜಾತಿ ತಾನೊಂದೆ ವಲಂ ಎಂದು ವಿಶ್ವ ಮಾನವತ್ವವನ್ನು ಮೆರೆದ ಕವಿ. ಗೊಮ್ಮಟೇಶ್ವರ ಅರ್ಥಾತ್ ಬಾಹುಬಲಿ ಜಗತ್ತಿನ ಚರಿತ್ರೆಯಲ್ಲಿ ವಿಶೇಷವಾದ ವ್ಯಕ್ತಿ ಸಂಪನ್ನತೆಯನ್ನು ಮೆರೆದ ಮಹಾನುಭಾವ. ಯುದ್ಧದಲ್ಲಿ ಗೆದ್ದರೂ ಸೋತವನಿಗೆ ನಮಸ್ಕರಿಸಿ, ಅವನಿಗೆ ತನ್ನ ಸಾಮ್ರಾಜ್ಯವನ್ನು ಒಪ್ಪಿಸಿ, ತಪಸ್ಸಿಗೆ ತೆರಳಿದ ತ್ಯಾಗಮೂರ್ತಿ ಬಾಹುಬಲಿ. ಜಗತ್ತಿನ ಯಾವ ಚರಿತ್ರೆಯಲ್ಲಿಯೂ ಗೆದ್ದವನು ಸೋತವನಿಗೆ ಸಾಮ್ರಾಜ್ಯ ಒಪ್ಪಿಸಿದ ಉದಾಹರಣೆಯಿಲ್ಲ. ಇದು ಈ ದೇಶದ ಚರಿತ್ರೆಯಲ್ಲಿ ಘಟಿಸಿದ ಮಹತ್ವದ ಘಟನೆ.

ಧರ್ಮಗಳ ಉದ್ದೇಶ ಮಾನವ ಕಲ್ಯಾಣ: ಇಂತಹ ನೆಲದಲ್ಲಿ ಸಾಹಿತ್ಯ ಸಮ್ಮೇಳನ ಜರುಗುತ್ತಿದೆ. ನಮ್ಮ ಸಾಹಿತ್ಯ ನೀಡುವ ಲೋಕದರ್ಶನಕ್ಕೂ ಜೈನ ಧರ್ಮ ಸಾರುವ ಲೋಕದರ್ಶನಕ್ಕೂ ಇರುವ ಸಾಮ್ಯತೆ ಈ ಸಮ್ಮೇಳನದ ಯಶಸ್ಸಿನ ಪರಿಣಾಮವಾಗಬೇಕು ಎಂಬುದು ನಮ್ಮ ಆಶಯ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ-ಮನುಷ್ಯರ ನಡುವೆ ಧರ್ಮ-ಧರ್ಮಗಳ ನಡುವೆ ಜಾತಿ-ಜಾತಿಗಳ ನಡುವೆ ದ್ವೇಷವನ್ನು ಹುಟ್ಟುಹಾಕುವ ವಿದ್ಯಮಾನಗಳು ಎಗ್ಗಿಲ್ಲದೆ ನಡೆಯುತ್ತಿವೆ.

ಜೈನ ಧರ್ಮವೂ ಸೇರಿದಂತೆ ಎಲ್ಲ ಧರ್ಮಗಳ ಮೂಲ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ಆದರೆ ಈ ಧರ್ಮಗಳ ಅನುಯಾಯಿಗಳೆಲ್ಲರೂ ತಮ್ಮ ಧರ್ಮಗಳ ಮೂಲ ಆಶಯಕ್ಕೆ ಅನುಗುಣವಾಗಿಯೇ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗದು. ಇದು ಬಹಳ ಆತಂಕಕಾರಿ ಸಂಗತಿ. ಯಾವುದೇ ಪ್ರಜ್ಞಾವಂತ ವ್ಯಕ್ತಿಗೆ ಹೆಚ್ಚು ಸಂಕಟವನ್ನು ಉಂಟು ಮಾಡುವ ವಿಚಾರ. ಇಂತಹ ಆತಂಕಗಳ ನಿವಾರಣೆಗೆ ಸಮ್ಮೇಳನಗಳು ಆತ್ಮಾವಲೋಕನದ ವೇದಿಕೆಗಳಾಗಬೇಕು. ಅದು ಈ ಸಮ್ಮೇಳನದಲ್ಲಿ ಧರ್ಮಕ್ಷೇತ್ರದಲ್ಲಿ ಆಗುತ್ತದೆನ್ನುವ ನಂಬಿಕೆ ನಮ್ಮದಾಗಿದೆ.

ಕನ್ನಡ ಭಾಷಾ ಮಾಧ್ಯಮ: ಇನ್ನು ಕನ್ನಡ ಭಾಷೆಗೆ ಸಂಬಂಧಿಸಿದಂತೆ ನಾನು ಪ್ರಸ್ತಾಪಿಸಲೇಬೇಕಾದ ಕೆಲವು ಮುಖ್ಯ ಸಂಗತಿಗಳಿವೆ. ಇಂದು ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲಾ ಪ್ರಾದೇಶಿಕ ಭಾಷೆಗಳು ಬಹುದೊಡ್ಡ ಆತಂಕಗಳನ್ನು ಎದುರಿಸುತ್ತಿವೆ. ಅವುಗಳ ಅಸ್ತಿತ್ವಕ್ಕೆ ಧಕ್ಕೆ ತರುವ ರೀತಿಯೊಳಗೆ ವಿದ್ಯಮಾನಗಳು ಬೆಳೆಯುತ್ತಿವೆ. ಇತ್ತೀಚೆಗೆ ಭಾರತ ಸರ್ವೋಚ್ಛ ನ್ಯಾಯಾಲಯವೂ ಕೂಡಾ ಮಗು ಯಾವ ಭಾಷೆಯಲ್ಲಿ ಕಲಿಯಬೇಕೆಂಬ ತೀರ್ಮಾನ ಪಾಲಕರಿಗೆ ಸೇರಿದ್ದು ಎಂಬ ತೀರ್ಪು ನೀಡಿದೆ. ಇದು ಕೇವಲ ಕನ್ನಡ ಭಾಷೆಗೆ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯ ಭಾಷೆಗಳಿಗೆ ಬಂದಿರುವ ಕುತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು.

ನಮ್ಮದು ಬಹುತ್ವದ ವ್ಯವಸ್ಥೆ. ಇಲ್ಲಿ ಬಹು ಭಾಷೆಗಳಿವೆ, ಬಹು ಸಂಸ್ಕೃತಿಗಳಿವೆ. ಬಹು ಮಾದರಿಯ ಜನಾಂಗಗಳಿವೆ. ಈ ಎಲ್ಲಾ ಸಮುದಾಯಗಳು ತಮ್ಮ ಸಾಮುದಾಯಿಕ ಅನನ್ಯತೆಯನ್ನು ಉಳಿಸಿಕೊಂಡೇ ಸಂವಿಧಾನಬದ್ಧವಾದ ಗಣತಂತ್ರ ವ್ಯವಸ್ಥೆಯನ್ನು ಗೌರವಿಸುವ ರೀತಿಯಲ್ಲಿ ಬದುಕನ್ನು ಕಟ್ಟಿಕೊಂಡಿವೆ. ಇಂತಹ ಬಹುತ್ವದ ಸ್ಥಳೀಯತೆಯನ್ನು ಗೌರವಿಸುವ ಹಾಗು ಒಕ್ಕೂಟದ ಭಾವೈಕ್ಯತೆಯನ್ನು ಬಲಗೊಳಿಸುವ ಮಾದರಿಯಲ್ಲಿ ನಮ್ಮ ಸಂವಿಧಾನ ರಚನೆಗೊಂಡಿದೆ. ಈ ಸಂವಿಧಾನದ ಆಶಯಕ್ಕೆ ಅನುಗುಣವಾಗಿಯೇ ಭಾಷಾವಾರು ಪ್ರಾಂತ್ಯಗಳ ವಿಂಗಡನೆಯಾಗಿದೆ.

ಪ್ರತಿಯೊಂದು ರಾಜ್ಯದ ರಾಜ್ಯಭಾಷೆಯು ಆ ನೆಲದ ಸಾರ್ವಭೌಮ ಭಾಷೆ. ಇದನ್ನು ಸಂವಿಧಾನ ಅಂಗೀಕರಿಸಿದೆ. ಮಾನ್ಯ ಮಾಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಆಯಾ ರಾಜ್ಯಗಳ ರಾಜ್ಯಭಾಷೆ ಸಾರ್ವಭೌಮ ಭಾಷೆಯಾಗಬೇಕು. ಬೇರಾವುದೇ ಭಾಷೆ ಆ ನೆಲದ ಬದುಕಿನ ಮೇಲೆ ಅಧಿಪತ್ಯವನ್ನು ಮೆರೆಯುವುದು ಭಾಷಾವಾರು ಪ್ರಾಂತ್ಯ ರಚನೆಯ ನೀತಿಗೆ ವಿರುದ್ಧವಾದುದು. ಸಂವಿಧಾನವೂ ಇದನ್ನು ಒಪ್ಪುವುದಿಲ್ಲ. ಸ್ಥಳೀಯತ್ವವನ್ನು ಉಳಿಸಿಕೊಂಡೇ, ಅರ್ಥಾತ್ ಸ್ಥಳೀಯ ಭಾಷೆಯ ಸ್ವಾಯತ್ತತೆಯನ್ನು ಉಳಿಸಿಕೊಂಡೇ, ಅನ್ಯಭಾಷೆಗಳನ್ನು ಕಲಿಯುವುದಕ್ಕೆ ಅವಕಾಶ ಕೊಡಬೇಕಾದ್ದು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ಸಂಹಿತೆ.

ಆದರೆ ಇಂದು ಇಂಗ್ಲೀಷ್ ಭಾಷೆಯ ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಡೆಸುತ್ತಿರುವ ಹಲ್ಲೆ, ರಾಜ್ಯ ಭಾಷೆಗಳ ಅಳಿವಿಗೆ ಬೀಸಿದ ಪ್ರಹಾರವಾಗಿದೆ. ಕರ್ನಾಟಕದೊಳಗೆ ಈ ಎಲ್ಲಾ ಭಾಷೆಗಳನ್ನಾಡುವ ಭಾಷಿಕ ಸಮುದಾಯಗಳಿವೆ. ಇಂಗ್ಲೀಷ್ ಈ ನೆಲದ ಮಾತೃಭಾಷೆಯಲ್ಲ. ಅಕಸ್ಮಾತ್ ಮಾತೃ ಭಾಷೆಯನ್ನಾಗಿ ಇರುವವರು ಯಾರಾದರೂ ಇದ್ದರೆ, ಅವರು ಆಂಗ್ಲೊಇಂಡಿಯನ್ನರು. ಶೇಕಡಾ 0.5 ರಷ್ಟಕ್ಕೂ ಕಡಿಮೆ ಇರುವವರು. ಆದರೆ ಇಂಗ್ಲೀಷನ್ನೇ ಮಾತೃ ಭಾಷೆ ಎಂದು ಘೋಷಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರುವ ಸಂಖ್ಯಾ ಪ್ರಮಾಣವನ್ನು ನೋಡಿದರೆ ಈ ಮಹಾಸುಳ್ಳನ್ನೇ ಸತ್ಯವೆಂದು ಒಪ್ಪಿ ಅಂಗೀಕರಿಸುವುದನ್ನು ನೋಡಿದಾಗ ನ್ಯಾಯ ಎಲ್ಲಿದೆ ? ಎಂದು ಯೋಚಿಸಬೇಕಾಗಿದೆ.

ನನ್ನ ಬಹುಕಾಲದ ಸ್ನೇಹಿತರೂ, ಗೌರವಾನ್ವಿತ ಸಾಹಿತಿಗಳಾದ ದೇವನೂರ ಮಹದೇವ ಅವರು ಭಾಷಾ ಮಾಧ್ಯಮದ ಬಗ್ಗೆ ಬಹು ಮುಖ್ಯವಾದ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಾಡು-ನುಡಿಯ ಬಗ್ಗೆ ಅವರಿಗೆ ಇರುವ ಕಾಳಜಿ ಸಾಟಿ ಇಲ್ಲದ್ದು. ಅವರ ಅಭಿಪ್ರಾಯಕ್ಕೆ ಸರ್ಕಾರದ ಸಮ್ಮತಿಯೂ ಇದೆ. ಆದರೆ ಈಗಿನ ಸಮಸ್ಯೆ ಕೇವಲ ರಾಜ್ಯ ಸರ್ಕಾರದ ನಿರ್ಧಾರದಿಂದ ಪರಿಹಾರವಾಗುವಂತಹುದಲ್ಲ. ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ದೇಶದ ಎಲ್ಲಾ ಜನಭಾಷೆಗಳ ಅಸ್ತಿತ್ವ ಡೋಲಾಯಮಾನವಾಗಿದೆ.

ಶಿಕ್ಷಣದ ವ್ಯಾಪಾರೀಕರಣದ ದಂಧೆಯಿಂದ ಪ್ರಾದೇಶಿಕ ಭಾಷೆಗಳನ್ನು ರಕ್ಷಿಸಬೇಕಾಗಿದೆ. ಅದಕ್ಕಾಗಿ ಶಾಸನಬದ್ಧವಾಗಿ ಹೊಸ ಕಾನೂನನ್ನು ತರಬೇಕಾಗಿದೆ. ಅಗತ್ಯವಾದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗಬಹುದು. ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಸರ್ವಪಕ್ಷಗಳ ನಿಯೋಗದೊಂದಿಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ. ಈ ಬಗ್ಗೆ ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೂ ಪತ್ರ ಬರೆದಿದ್ದೇನೆ.

ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ನೀಡುವುದನ್ನು ಕಡ್ಡಾಯಗೊಳಿಸುವುದಕ್ಕೆ ಪೂರಕವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2012ಕ್ಕೆ ತಿದ್ದುಪಡಿ ತರುವ ದಿಟ್ಟ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಇಲ್ಲಿಯವರೆಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಮಕ್ಕಳ ಮಾತೃ ಭಾಷೆಯಲ್ಲಿಯೇ ಇರಬೇಕು ಎಂಬ ಒಕ್ಕಣಿಕೆ ಇತ್ತು. ಅದನ್ನು ಒಂದನೆ ತರಗತಿಯಿಂದ ಐದನೇ ತರಗತಿವರೆಗಿನ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರತಕ್ಕದ್ದು ಎಂದು ತಿದ್ದುಪಡಿ ಮಾಡಲಾಗಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯಗೊಳಿಸಿರುವ ಆದೇಶವನ್ನು ರದ್ದುಮಾಡಿರುವ ತೀರ್ಪು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಪರಿಹಾರತ್ಮಕ ಅರ್ಜಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮೊಕದ್ದಮೆಗಳನ್ನು ಎದುರಿಸುವುದಕ್ಕಾಗಿ ಈ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ತಮಿಳುನಾಡು ಸರ್ಕಾರ ಸ್ಥಳೀಯ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಇತ್ತೀಚೆಗೆ ದೇಶದ ಪ್ರಸಿದ್ಧ ಭಾಷಾ ತಜ್ಞರನ್ನು ಕರೆಸಿ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದಿದೆ. ಇದರ ಆಧಾರದಲ್ಲಿ ನಮ್ಮ ಮುಂದಿನ ಕಾನೂನಿನ ಮತ್ತು ರಾಜಕೀಯ ಹೋರಾಟದ ಸ್ವರೂಪವನ್ನು ನಿರ್ಧರಿಸಲಾಗುವುದು. ಕನ್ನಡದ ಭಾಷೆ, ನೆಲ ಮತ್ತು ಜಲದ ರಕ್ಷಣೆ ಬಗ್ಗೆ ನಮ್ಮ ಸರ್ಕಾರದ ಬದ್ಧತೆ ರಾಜಿ ಇಲ್ಲದ್ದು. ಈ ಬಗ್ಗೆ ಅನುಮಾನವೇ ಬೇಡ.

ಪ್ರತಿಯೊಂದು ಸಾಹಿತ್ಯ ಸಮ್ಮೇಳನಕ್ಕೂ ನಾಡು, ನುಡಿ ಕುರಿತಾದ ಜ್ವಲಂತ ಸಮಸ್ಯೆಗಳನ್ನು ಚರ್ಚಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಸಲಹೆಗಳನ್ನು ಸರ್ಕಾರಕ್ಕೆ ನೀಡುವುದು ಸೂಕ್ತವಾಗಿದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಂಡ ನಿರ್ಣಯಗಳನ್ನೆಲ್ಲಾ ಅನುಷ್ಠಾನಕ್ಕೆ ತರಲು ನಿರ್ಣಯವನ್ನು ಕೈಗೊಳ್ಳುವುದಾಗಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಸಾಧ್ಯವಾದಷ್ಟು ಈ ನಿರ್ಣಯಗಳನ್ನು ಪುನರ್ ಪರಿಶೀಲಿಸಿ ಅನುಷ್ಠಾನಗೊಳಿಸುವ ಬಗ್ಗೆ ಕ್ರಮ ಜರುಗಿಸುವುದು. ಅವುಗಳ ಅನುಷ್ಠಾನಕ್ಕೆ ಪೂರಕವಾದ ವಿಧಿ ವಿಧಾನಗಳನ್ನು ಕಾರ್ಯಗತಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲು ಇಚ್ಛಿಸುತ್ತೇನೆ.

ಕನ್ನಡ ನಾಡಿನ ಜನತೆಯ ಹಿತರಕ್ಷಣೆ, ಜನತೆಯ ಬದುಕು ಹಸನಾದರೆ, ಆ ಜನರು ಆಡುವ ಭಾಷೆ, ಸಂಸ್ಕೃತಿ, ಆ ಜನರ ಭವಿಷ್ಯ ಉಜ್ವಲಗೊಳ್ಳುತ್ತದೆ. ನಾವು ಈ ಕುರಿತು ವಿಶೇಷ ಹಾಗೂ ದಿಟ್ಟ ಹೆಜ್ಜೆಯನ್ನು ಇಟ್ಟಿದ್ದೇವೆ. ಈ ಸಮ್ಮೇಳನದಲ್ಲಿ ಮೂರು ದಿನ ನಾಡು ಮತ್ತು ನುಡಿಯ ಬೆಳವಣಿಗೆಗೆ ಪೂರಕವಾದ ವಿವಿಧ ವಿಷಯಗಳ ಬಗ್ಗೆ ವಿದ್ವತ್ ಗೋಷ್ಠಿಗಳಿವೆ. ಅವುಗಳ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ ಎಂದು ಸಾಹಿತ್ಯಾಸಕ್ತರಲ್ಲಿ ಮನವಿ ಮಾಡುತ್ತೇನೆ.

ಈ ಸಮ್ಮೇಳನದ ಎಲ್ಲಾ ಕಾರ್ಯಕ್ರಮಗಳೂ ಯಶಸ್ವಿಯಾಗಿ ನೆರವೇರಲಿ. ಕನ್ನಡ ಜನಮನದಲ್ಲಿ ಹೊಸ ಸ್ಫೂರ್ತಿ ತುಂಬಲಿ ಎಂದು ಹೃದಯಾಂತರಾಳದಿಂದ ಶುಭ ಕೋರುತ್ತಾ, ಕವಿ ನಿಸಾರ್ ಅಹಮದ್ ಅವರ ಈ ಸಾಲುಗಳೊಂದಿಗೆ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಕನ್ನಡವಲ್ಲ ತಿಂಗಳು ನಡೆಸುವ ಗುಲ್ಲಿನ ಕಾಮನಬಿಲ್ಲು

ರವಿಶಶಿ ತಾರೆಯ ನಿತ್ಯೋತ್ಸವವಿದು

ಸರಸ್ವತಿ ವೀಣೆಯ ಸೊಲ್ಲು

ಜೈ ಹಿಂದ್ ! ಜೈ ಕರ್ನಾಟಕ !

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The three day Kannada Sahitya Sammelana inaugurated by CM of Karnataka Siddaramaiah on Feb.1. Eminent Kannada writer and poet Siddalingaiah is the President for 81st Kannada Sahitya Sammelana, Shravanabelagola, Hassan. Siddaramaiah in his speech highlighted need for Kannada medium schools.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more