'ನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ' ಮೋದಿ ವಿರುದ್ಧ ಸಿದ್ದರಾಮಯ್ಯ ಟ್ವೀಟ್
'ನೀವು ಬಿಟ್ಟರೂ 40% ಕಮಿಷನ್ ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಫೋಟೋವೊಂದನ್ನು ಹಂಚಿಕೊಂಡು ವ್ಯಂಗ್ಯವಾಡಿದ್ದಾರೆ. ರಾಜ್ಯ ಚುನಾವಣೆ ಪ್ರಚಾರದ ವೇಳೆ ಮೋದಿ ಫೋಟೋದೊಂದಿಗೆ ಅಂಗಡಿಯೊಂದರ ಮೇಲೆ 40% ಎಂದು ಬರೆಯಲಾಗಿದೆ. ಈ ಫೋಟೋವನ್ನು ಹಂಚಿಕೊಂಡ ಸಿದ್ದರಾಮಯ್ಯ ಪ್ರಧಾನಿ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಅಸಲಿಗೆ ಏನಿದು 40% ಕಮಿಷನ್ ಕರ್ಮ. ಮೋದಿ ಹಾಗೂ ಬಿಜೆಪಿ ಸರ್ಕಾರಕ್ಕೆ ಅಂಟಿಕೊಂಡಿರುವ 40% ಕಮಿಷನ್ ಕರ್ಮದ ಹಿಂದಿನ ಕಥೆ ಏನು? ಇದಕ್ಕೆ ಉತ್ತರ ಇಲ್ಲಿದೆ. 40% ಕಮಿಷನ್ ಅನ್ನೋದು ಬಿಜೆಪಿ ದುರಾಡಳಿತಕ್ಕಿರುವ ಹಣೆಪಟ್ಟಿ. ಈ ಪಟ್ಟಿಯನ್ನು ಹಲವರು ಈಗಾಗಲೇ ಬಿಜೆಪಿಗೆ ನೀಡಿದ್ದಾರೆ. ಇದೇ ಅಸ್ತ್ರವನ್ನಾಗಿಸಿಕೊಂಡ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಗೆಲುವಿನ ಬಲೆ ಬೀಸಿವೆ.

ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರಿ ಗುತ್ತಿಗೆಗಳು, ಸರ್ಕಾರಿ ಉದ್ಯೋಗಗಳು, ಆಸ್ಪತ್ರೆಗಳು, ರಸ್ತೆಗಳು, ಶಾಲೆಗಳು, ಸೇತುವೆಗಳು, ಸ್ಮಶಾನ ಮತ್ತು ಕಬರಸ್ತಾನ ಎಲ್ಲೆಡೆ 40% ಕಮಿಷನ್ ಪಡೆದ ಬಳಿಕವಷ್ಟೇ ಕೆಲಸಗಳನ್ನು ಆರಂಭಿಸುತ್ತದೆ ಎನ್ನುವ ಆರೋಪವಿದೆ. ಇದಕ್ಕೆ ಉದಾಹರಣೆಯಾಗಿ ಹಲವು ನಿದರ್ಶನಗಳಿವೆ.
ಈಗಿನ ಬೊಮ್ಮಾಯಿ ಸರ್ಕಾರ ಶೇ.40% ಕಮಿಷನ್ ತೆಗೆದುಕೊಂಡ ನಂತರವೇ ಗುತ್ತಿಗೆ ಕಾಮಗಾರಿ ಮಂಜೂರು ಮಾಡುತ್ತದೆ ಎಂದು ಗುತ್ತಿಗೆದಾರರ ಸಂಘ ಸಾರ್ವಜನಿಕವಾಗಿ ಈ ಹಿಂದೆ ಹೇಳಿಕೆ ನೀಡಿತ್ತು. ಅಷ್ಟೇ ಅಲ್ಲ ಖಾಸಗಿ ಶಾಲೆಗಳ ಸಂಘಟನೆಯಂತೂ 40% ಕಮಿಷನ್ ಬಗ್ಗೆ ನೇರವಾಗಿ ಪ್ರಧಾನಿ ಮೋದಿಗೆ ಮನವಿ ಮಾಡಿತು. ಆದರೆ ಈ ಬಗ್ಗೆ ಇಲ್ಲಿವರೆಗೂ ಮೋದಿ ಸರ್ಕಾರದಿಂದ ಉತ್ತರವೇ ಇಲ್ಲ. ಇದೇ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.
ನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ @narendramodi ಜೀ........ pic.twitter.com/W7YU9kC0E2
— Siddaramaiah (@siddaramaiah) May 6, 2023
ಇಷ್ಟು ಮಾತ್ರವಲ್ಲದೆ ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಪತ್ರವೊಂದನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಕೆ.ಎಸ್ ಈಶ್ವರಪ್ಪ ಕಾರಣ ಎಂದು ಸ್ಪಷ್ಟವಾಗಿ ಆರೋಪಿಸಿದ್ದರು. ಪ್ರಕರಣವು ಅದೇ 40% ಕಮಿಷನ್ನಥೆಯೇ ಆಗಿತ್ತು.
ಇನ್ನೂ ಪಕ್ಷಾಂತರಗೊಂಡು ಸಚಿವ ಸ್ಥಾನ ಪಡೆದಿದ್ದ ರಮೇಶ್ ಜಾರಕಿಹೊಳಿ ಸಿಡಿ ವಿಚಾರವಾಗಿ ದೊಡ್ಡ ಸುದ್ದಿಯಾಗಿದ್ದರು. ಈ ಬಗ್ಗೆ ಬಹಿರಂಗವಾಗಿ ಅವರು ತಪ್ಪನ್ನು ಒಪ್ಪಿಕೊಂಡಿದ್ದರು. ಹೀಗಿದ್ದರೂ ಬಿಜೆಪಿ ಈ ಬಾರಿ ರಮೇಶ್ ಜಾರಕಿಹೊಳಿಗೇ ಟಿಕೆಟ್ ನೀಡಿದೆ. ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಇಷ್ಟು ಮಾತ್ರವಲ್ಲದೆ ಕೊರೊನಾ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಒಂದು ಬೆಡ್, ಒಂದು ಆಕ್ಸಿಜನ್ ಸಿಲಿಂಡರ್ಗಾಗಿ ರೋಗಿಗಳ ಮತ್ತು ಅವರ ಕುಟುಂಬದವರಿಂದ ಪಡೆದ ಕಂತೆ ಕಂತೆ ಹಣವನ್ನು ಬಿಜೆಪಿ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುವಂತೆ ಮಾಡಿತ್ತು. ಇದೆಲ್ಲವೂ ಬಿಜೆಪಿ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಿದೆ. ಇದೇ ಕಾರಣದಿಂದಾಗಿ ಪ್ರತಿಪಕ್ಷಗಳು ಬಿಜೆಪಿಗೆ 40% ಕಮಿಷನ್ ಸರ್ಕಾರ ಎಂಬ ಹಣೆ ಪಟ್ಟಿಯನ್ನು ನೀಡಿವೆ. ಚುನಾವಣೆಗೆ ಇದೇ ವಿಚಾರ ಪ್ರತಿಪಕ್ಷಗಳಿಗೆ ಅಸ್ತ್ರವಾಗಿದ್ದು ಮತಯಾಚನೆಗೆ ಹೋದಲ್ಲಿ ಬಂದಲ್ಲಿ ಇಂತೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಮತಯಾಚನೆಗೆ ಮುಂದಾಗಿವೆ.
ಪ್ರತಿಪಕ್ಷಗಳ ಇಂತೆಲ್ಲಾ ಆರೋಪಗಳು ಬಿಜೆಪಿಗೆ ಈ ಬಾರಿ ಗೆಲುವು ಸಾಧಿಸಲು ಮುಳುವಾಗಿವೆ. ಹೀಗಾಗಿ ಶತಾಯಗತಾಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಶತಪ್ರಯತ್ನವನ್ನು ನಡೆಸಿದೆ. ಇದೆಲ್ಲವನ್ನು ನೋಡುತ್ತಿರುವ ಮತದಾರರು ಯಾರ ಪರ ನಿಲ್ಲುತ್ತಾರೆ, ಯಾರಿಗೆ ಮತ ನೀಡಿ ಗೆಲ್ಲಿಸುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications