Siddaramaiah: ಯತೀಂದ್ರ ತಪ್ಪು ಮಾಡಿಲ್ಲ! ದಾಖಲೆ ಬಹಿರಂಗಪಡಿಸಿದ ಸಿಎಂ ಸಿದ್ದರಾಮಯ್ಯ
ಯತೀಂದ್ರ ಸಿದ್ದರಾಮಯ್ಯ ಅವರ ಫೋನ್ ಸಂಭಾಷಣೆ ವಿಡಿಯೋ ಈಗ ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಚಾರವಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ನಡುವೆ ವಾಗ್ವಾದ ಮುಂದುವರೆದಿದೆ.
ಹೆಚ್‌ಡಿಕೆ ಆರೋಪವನ್ನು ತಳ್ಳಿ ಹಾಕಿರುವ ಸಿಎಂ ಸಿದ್ದರಾಮಯ್ಯ ಈಗ ದಾಖಲೆಯನ್ನು ಬಹಿರಂಗಪಡಿಸಿದ್ದು, ಯತೀಂದ್ರ ಸಿದ್ದರಾಮಯ್ಯ ಯಾವ ವರ್ಗಾವಣೆ ಬಗ್ಗೆ ಕೂಡ ಮಾತನಾಡಿಲ್ಲ, ಶಾಲೆಗಳ ಅಭಿವೃದ್ಧಿ ಪಟ್ಟಿ ಬಗ್ಗೆ ಮಾತನಾಡಿರುವುದು ಎಂದು ಹೇಳಿದ್ದಾರೆ.

ಈ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ತಾ ಕಳ್ಳ ಇತರರ ನಂಬ" ಎಂಬ ಗಾದೆ ಮಾತನ್ನು ಒಬ್ಬ ಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಪೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಹೆಚ್‌ಡಿ ಕುಮಾರಸ್ವಾಮಿ ಅವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿಕ್ಷಣಾಧಿಕಾರಿ ಜೊತೆ ಮಾತು
ಪೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ). ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ಹೇಳಿದ್ದಾರೆ.
‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಪೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ @hd_kumaraswamy ಅವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ.
— Siddaramaiah (@siddaramaiah) November 16, 2023
ಪೋನ್ ಸಂಭಾಷಣೆಯಲ್ಲಿ… pic.twitter.com/xli6QJZ5DJ
ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ ಎಂದು ಸಿದ್ದರಾಮಯ್ಯ ದಾಖಲೆ ನೀಡಿದ್ದಕ್ಕೆ ಕಾರಣ ಕೊಟ್ಟಿದ್ದಾರೆ.
ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ ಎಂದು ಕಾಲೆಳೆದಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರು ಫೋನಿನಲ್ಲಿ ಮಾತನಾಡುವ ವಿಡಿಯೋವನ್ನು ಟ್ವಿಟ್ ಮಾಡಿದ್ದ ಜೆಡಿಎಸ್ ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಆರೋಪಿಸಿದ್ದರು. ಬಿಜೆಪಿ ಕೂಡ ಯತೀಂದ್ರ ಅವರನ್ನು ಶಾಡೋ ಸಿಎಂ ಎಂದು ಕರೆದಿತ್ತು.












Click it and Unblock the Notifications