ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ, ಪರಮೇಶ್ವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

|
Google Oneindia Kannada News

ಬೆಂಗಳೂರು, ಜುಲೈ 19 : 'ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲದೇ ತನಿಖೆ ನಡೆಯಬೇಕು ಎಂದು ಸಚಿವ ಕೆಜೆ ಜಾರ್ಜ್ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಕಲ್ಲಪ್ಪ ಹಂಡಿಭಾಗ್, ಎಂ.ಕೆ.ಗಣಪತಿ, ಅನುಪಮಾ ಶೆಣೈ ಅವರ ವಿವಾದಗಳ ಬಗ್ಗೆ ಸ್ಪಷ್ಟನೆ ನೀಡಿದರು.[ಜಾರ್ಜ್ ಕಾಡಿದ 5 ಪ್ರಮುಖ ವಿವಾದಗಳು]

Siddaramaiah, Parameshwar joint press conference highlights

'ಜನರ ಮುಂದೆ ನಾವು ಸತ್ಯಾಸತ್ಯತೆಯನ್ನು ನಾವು ತೆರೆದಿಡುತ್ತೇವೆ. ಈ ಪ್ರಕರಣದಲ್ಲಿ ಬಿಜೆಪಿ ಮಾಡುತ್ತಿರುವ ಅಪಪ್ರಚಾರ, ರಾಜಕೀಯವನ್ನು ಜನರಿಗೆ ತಲುಪಿಸುತ್ತೇವೆ' ಎಂದು ಪರಮೇಶ್ವರ ಅವರು ಹೇಳಿದರು.['ನಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ' : ಕೆಜೆ ಜಾರ್ಜ್]

'ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಮತ್ತು ಎಂ.ಕೆ.ಗಣಪತಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಎಂ.ಕೆ.ಗಣಪತಿ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲಾಗಿದೆ' ಎಂದು ಪರಮೇಶ್ವರ ಹೇಳಿದರು.[ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ Timeline]

'ಪ್ರತಿಪಕ್ಷ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಸಿಬಿಐಗೆ ಕೊಟ್ಟರೆ ಸತ್ಯಾಂಶ ಹೊರಬರುತ್ತದೆ ಎಂದು ಹೇಳುವ ಮೂಲಕ ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ. 5 ವರ್ಷದ ಹಿಂದೆ ಬಿಜೆಪಿಗೆ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. ಈಗ ಹೇಗೆ ನಂಬಿಕೆ ಬಂದಿದೆ?' ಎಂದು ಪರಮೇಶ್ವರ ಪ್ರಶ್ನಿಸಿದರು.

'ರಾಜ್ಯದಲ್ಲಿ ಬಿಜೆಪಿ ಅಧಿಕಾರ ನಡೆಸಿದಾಗ ಸಾವಿರಾರು ಕೋಟಿಯ ಗಣಿ ಹಗರಣ ನಡೆಯಿತು, ಅದನ್ನು ಸಿಬಿಐಗೆ ನೀಡಿ ಎಂದು ಒತ್ತಾಯಿಸಿದೆವು. ಆದರೆ, ಆಗ ಅವರಿಗೆ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. 13 ಪ್ರಕರಣಗಳನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರೂ ನೀಡಲಿಲ್ಲ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಬಳಿಕ 8 ಪ್ರಕರಣಗಳನ್ನು ಸಿಬಿಐಗೆ ನೀಡಲಾಗಿದೆ' ಎಂದು ಪರಮೇಶ್ವರ ಟೀಕಿಸಿದರು.[ಜಾರ್ಜ್ ರಾಜೀನಾಮೆ, ಕನ್ನಡ ಪತ್ರಿಕೆಗಳ ಹಣೆಬರಹಗಳು]

ಸಿದ್ದರಾಮಯ್ಯ ಹೇಳಿದ್ದೇನು?

* ಸಚಿವ ಕೆ.ಜೆ.ಜಾರ್ಜ್ ಅವರು ಬಿಜೆಪಿಯವರ ಒತ್ತಾಯಕ್ಕೆ ಮಣಿದು ರಾಜೀನಾಮೆ ಕೊಟ್ಟಿಲ್ಲ. ಸ್ವಯಂ ಪ್ರೇರಿತವಾಗಿ, ತನಿಖೆಗೆ ಸಹಕಾರಿಯಾಗಲಿ ಎಂಬ ಕಾರಣಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. [ಜಾರ್ಜ್ ವಿರುದ್ಧ FIR : ಯಾರು, ಏನು ಹೇಳಿದರು?]

* ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಅನಂತ್ ಕುಮಾರ್, ಕೆ.ಎಸ್.ಈಶ್ವರಪ್ಪ ಅವರು ಸಿಬಿಐಗೆ ವಹಿಸಿ ಎನ್ನುವುದನ್ನು ಬಾಯಿ ಪಾಠ ಮಾಡಿಕೊಂಡಿದ್ದಾರೆ. ನೈತಿಕವಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಿಬಿಐ ತನಿಖೆಗೆ ಒಪ್ಪಿಸುವಂತ ಕೇಳುವ ಹಕ್ಕಿಲ್ಲ.

* ನ್ಯಾಯಾಂಗ, ಸಿಐಡಿ ತನಿಖೆಯಲ್ಲಿ ಇವರಿಗೆ ನಂಬಿಕೆ ಇಲ್ಲ. ಹಿಂದೆ ಸಿಬಿಐ ಮೇಲೆ ನಂಬಿಕೆ ಇರಲಿಲ್ಲ. ಸುಮ್ಮನೇ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಸಿಬಿಐ ಬದಲಾದದ್ದು ಹೇಗೆ?.

* ಸಿಬಿಐ ಬಗ್ಗೆ ನನಗೆ ಭಯವಿಲ್ಲ, ಅಗೌರವವಿಲ್ಲ. ಡಿ.ಕೆ.ರವಿ, ಒಂದಂಕಿ ಲಾಟರಿ, ಮಂಡ್ಯ ಭೂ ಹಗರಣ ಸೇರಿದಂತೆ 8 ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಈ ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿದೆ.

* ಜೆಡಿಎಸ್, ಬಿಜೆಪಿಯವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಗಾಜಿನ ಮನೆಯಲ್ಲಿ ಕುಳಿತು ಮತ್ತೊಬ್ಬರಿಗೆ ಕಲ್ಲು ಹೊಡೆಯುವ ಕೆಲಸವನ್ನು ಅವರು ಮಾಡಬಾರದು. ಸರ್ಕಾರದ ವಿರುದ್ಧ ಆರೋಪ ಮಾಡುವ ಮೊದಲು ಅವರು ಅಧಿಕಾರ ನಡೆಸಿದಾಗ ಏನಾಗಿತ್ತು? ಎಂಬುದನ್ನು ಅವರು ತಿಳಿದುಕೊಳ್ಳಲಿ.

* ಹೈದ್ರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಪ್ರಕರಣದಲ್ಲಿ ಬಿಜೆಪಿ ಸಚಿವರ ಹೆಸರು ಕೇಳಿಬಂದಿದೆ. ಉಮಾ ಭಾರತಿ ಅವರ ಮೇಲೆ 13 ಪ್ರಕರಣಗಳಿವೆ, ಹಲವುಗಳಲ್ಲಿ ಎಫ್‌ಐಆರ್ ಆಗಿದೆ. ಆದರೆ, ಬಿಜೆಪಿ ನಾಯಕರಿಗೆ ಅವರು ಕಾಣವುದಿಲ್ಲವೇ.

* ನರೇಂದ್ರ ಮೋದಿ ಅವರು ಮೊನ್ನೆ 19 ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಂಡರು. ಅವರಲ್ಲಿ 17 ಜನರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ನಿಮಗೆ ಕೆ.ಜೆ.ಜಾರ್ಜ್ ಅವರು ಮಾತ್ರ ಕಾಣುವುದೇ?. ನಿಮ್ಮ ಸುಳ್ಳಿಗೆ ಮಿತಿ ಎಂಬುದೇ ಇಲ್ಲವೇ.

* ನನ್ನ ಮೇಲೆ 5 ಪ್ರಕರಣಗಳಿದ್ದವು. ಅವುಗಳೆಲ್ಲ ಪ್ರತಿಭಟನೆ ಮಾಡುವಾಗ ನನ್ನ ಮೇಲೆ ಹಾಕಿದ ಕೇಸುಗಳು. ಅವುಗಳೆಲ್ಲವೂ 2008ರಲ್ಲಿ ತೀರ್ಮಾನವಾಗಿವೆ. ಆದರೆ, ಬಿಜೆಪಿ ಅದನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ. ಸತ್ತವರ ಶವದ ಮೇಲೆ ರಾಜಕೀಯ ಮಾಡಲು ನಮಗೆ ಬರುವುದಿಲ್ಲ.

* ಕೆಜೆ ಜಾರ್ಜ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನನ್ನಿಂದ ಪಕ್ಷಕ್ಕೆ, ಮುಖ್ಯಮಂತ್ರಿಗಳಿಗೆ ಮುಜುಗರವಾಗಬಾರದು ಎಂದು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿದ್ದಾರೆ. ಅಧಿಕಾರಿಗಳಿಗೂ ಕಡ್ಡಾಯ ರಜೆ ಮೇಲೆ ತೆರಳಲು ನಾವು ಸೂಚನೆ ಕೊಟ್ಟಿಲ್ಲ.

* ಕಾನೂನಿನ ಪ್ರಕಾರ ಎಫ್‌ಐಆರ್ ಆದ ತಕ್ಷಣ ರಾಜೀನಾಮೆ ಕೊಡಬೇಕೆಂದಿಲ್ಲ. ಜೈಲಿಗೆ ಹೋದರೆ ರಾಜೀನಾಮೆ ನೀಡಬೇಕೆಂದಿದೆ. ಎಫ್‌ಐಆರ್ ದಾಖಲಾದ ತಕ್ಷಣ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಇಲ್ಲ. ಕಲ್ಲಪ್ಪ ಹಂಡಿಭಾಗ್ ಅವರನ್ನು ಅಮಾನತು ಮಾಡಿರಲಿಲ್ಲ. ಈ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ.

* ಐಪಿಸಿ, ಸಿಆರ್‌ಪಿಸಿ ಇಡೀ ದೇಶಕ್ಕೆ ಒಂದೇ. ಇವರಿಗೊಂದು ನಮಗೊಂದು ಕಾನೂನು ಇದೆಯೇ?. ನಾವು ಕೆಜೆ ಜಾರ್ಜ್ ರಾಜೀನಾಮೆ ಬಯಸಿರಲಿಲ್ಲ. ಸ್ವಯಂ ಪ್ರೇರಿತವಾಗಿ ಅವರು ನೀಡಿದ್ದಾರೆ. ಅದನ್ನು ನೋವಿನಿಂದ ನಾನು ಒಪ್ಪಿಕೊಂಡಿದ್ದೇನೆ.

*ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವುದಿಲ್ಲ. ಈಗಾಗಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ. ಆದ್ದರಿಂದ, ಸಿಬಿಐಗೆ ಕೊಡುವುದಿಲ್ಲ.

* ಜಿಲ್ಲೆ, ತಾಲೂಕುಗಳಿಗೆ ಹೋಗಿ ಜನರನ್ನು ಭೇಟಿ ಮಾಡುತ್ತೇವೆ. ಪ್ರತಿಪಕ್ಷಗಳ ಗೊಸುಂಬೆ ಬಣ್ಣವನ್ನು ಬಯಲು ಮಾಡುತ್ತೇವೆ. ಪಕ್ಷ ಈ ಬಗ್ಗೆ ಕಾರ್ಯಕ್ರಮವನ್ನು ರೂಪಿಸುತ್ತದೆ.

* ಸಚಿವ ಜಾರ್ಜ್ ರಿಂದ ತೆರವಾದ ಸ್ಥಾನ ನನ್ನ ಬಳಿಯೇ ಇರುತ್ತದೆ. ನನ್ನ ಹತ್ತಿರವೇ ಖಾತೆ ಇರುತ್ತದೆ ಎಂದರೆ ಯಾರನ್ನು ಸಚಿವರಾಗಿ ಮಾಡುವಿರಿ ಎಂದು ಹೇಳುತ್ತೀರಿ. ಒಂದೇ ಪ್ರಶ್ನೆಯನ್ನು ಎಷ್ಟು ಸಲ ಕೇಳುವಿರಿ.

ಮಾಧ್ಯಮದವರಿಗೆಲ್ಲಾ ದೊಡ್ಡ ನಮಸ್ಕಾರ, ಊಟ....ಲಂಚ್ ಇದೆ......ಎಲ್ಲಾ ಊಟ ಮಾಡಿಕೊಂಡು ಹೋಗಿ.....

English summary
Karnataka Chief Minister Siddaramaiah, Home minister and KPCC president Dr.G.Parameshwara addressed joint press conference on July 19, 2016 after the resignation of KJ George, who has been accused in MK Ganapati suicide case. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X