ಸಿದ್ದು ಸರಕಾರಕ್ಕೆ ನಾಲ್ಕು ವರ್ಷ: ಕಪ್ಪುಚುಕ್ಕೆಗಳು ಒಂದಾ ಎರಡಾ?

Posted By:
Subscribe to Oneindia Kannada

'ನುಡಿದಂತೆ ನಡೆದಿದ್ದೇವೆ, ಸೌಲಭ್ಯ ವಿತರಣೆಯೇ ಸಂಭ್ರಮ' ಎನ್ನುವ ಜಾಹೀರಾತುಗಳು ರಾಜ್ಯದ ದೈನಿಕಗಳಲ್ಲಿ ಕಳೆದೆರಡು ದಿನಗಳಿಂದ ಪುಟಗಟ್ಟಲೆ ಆವರಿಸಿವೆ. ಇಂದಿಗೆ (ಮೇ 13) ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ ನಾಲ್ಕು ವರ್ಷ.

ಒಡೆದ ಮನೆಯಾಗಿದ್ದ ಬಿಜೆಪಿ, ಯಡಿಯೂರಪ್ಪ ಹುಟ್ಟುಹಾಕಿದ್ದ ಕೆಜೆಪಿಯಿಂದಾಗಿ ಬಿಜೆಪಿಗೆ ಇಬ್ಬಾಗವಾದ ಮತಗಳು, ಪೈಪೋಟಿ ನೀಡದ ಜೆಡಿಎಸ್ ನಿಂದಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್, ಸಲೀಸಾಗಿ ಅಧಿಕಾರದ ಚುಕ್ಕಾಣಿಯನ್ನು ಕಳೆದ ಚುನಾವಣೆಯಲ್ಲಿ ಹಿಡಿದಿತ್ತು.

ದೇವೇಗೌಡ್ರ ಗರಡಿಯಲ್ಲಿ ಪಳಗಿದ ರಾಜಕೀಯ ಅನುಭವ ಮತ್ತು ದೇಶದ ಇತರ ಭಾಗಗಳಲ್ಲಿನ ಸಾಲುಸಾಲು ಸೋಲಿನಿಂದ 'ಕಮಾಂಡ್' ಕಳೆದುಕೊಂಡಿದ್ದ ಹೈಕಮಾಂಡ್ ನಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಟ್ಟಿದ್ದೇ ಹೆಜ್ಜೆ, ನಡೆದಿದ್ದೇ ದಾರಿ ಎನ್ನುವಂತಿತ್ತು, ಎನ್ನುವುದು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.

ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಭಾಗ್ಯ, ಸೌಭಾಗ್ಯಗಳನ್ನು ನೀಡಿರುವ ಸಿದ್ದರಾಮಯ್ಯ ಸರಕಾರಕ್ಕೆ ಹಗರಣಗಳು, ಘಟನೆಗಳು ಕಪ್ಪುಚುಕ್ಕೆಯಾಗಿ ಪರಿಣಮಿಸಿ, ವಿರೋಧ ಪಕ್ಷಗಳಿಗೆ ಆಹಾರವಾದ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ವಿಷಯಗಳು ಒಂದಲ್ಲಾ.. ಎರಡಲ್ಲಾ..

ಜೊತೆಗೆ, ಜನರಿಗೆ ಬೇಡವಾದ ಮತ್ತು ಮಹಾನ್ ಭ್ರಷ್ಟಾಚಾರದ ಶಂಕೆಯಿರುವ ಯೋಜನೆಗಳಿಗೆ ಹಸಿರು ನಿಶಾನೆ ತೋರಿ, ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾದ ನಂತರ ಸಿದ್ದರಾಮಯ್ಯ ಸರಕಾರ ಯೋಜನೆಯನ್ನು ಹಿಂದಕ್ಕೆ ಪಡೆದ ಉದಾಹರಣೆಗಳೂ ಇವೆ.

ಸಿದ್ದರಾಮಯ್ಯ ಸರಕಾರಕ್ಕೆ ಕಳಂಕ, ಅಪವಾದ ತಂದ ಕೆಲವೊಂದು ಕಪ್ಪುಚುಕ್ಕೆಗಳು (ಈ ಕಳೆದ ಒಂದು ವರ್ಷಗಳಲ್ಲಿ), ಮುಂದೆ ಓದಿ..

ಸರಕಾರಕ್ಕೆ ಮುಜುಗರ ತಂದ ಅನುಪಮಾ ಶೆಣೈ ಘಟನೆ

ಸರಕಾರಕ್ಕೆ ಮುಜುಗರ ತಂದ ಅನುಪಮಾ ಶೆಣೈ ಘಟನೆ

ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ನಾಯಕ್ ಅವರ ಜೊತೆಗಿನ ವಾಗ್ವಾದದ ಹಿನ್ನಲೆಯಲ್ಲಿ ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು. ಅನುಪಮಾ ಮತ್ತು ಪರಮೇಶ್ವರ್ ನಾಯಕ್ ನಡುವಿನ ಮೊಬೈಲ್ ಸಂಭಾಷಣೆ ಬಹಿರಂಗಗೊಂಡ ನಂತರ ಈ ವಿಚಾರ ಸಿದ್ದರಾಮಯ್ಯ ಸರಕಾರಕ್ಕೆ ಭಾರೀ ಮುಜುಗರವನ್ನು ತಂದಿತ್ತು. ಅನುಪಮಾ ಶೆಣೈ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಎಚ್ ವೈ ಮೇಟಿ ರಾಸಲೀಲೆ

ಎಚ್ ವೈ ಮೇಟಿ ರಾಸಲೀಲೆ

ಕಚೇರಿಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿದ್ದ ದೃಶ್ಯದ ಸಿಡಿ ಬಹಿರಂಗವಾದ ನಂತರ, ಅಬಕಾರಿ ಸಚಿವರಾಗಿದ್ದ ಎಚ್ ವೈ ಮೇಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿದ್ದರಾಮಯ್ಯ ಸರಕಾರಕ್ಕೆ ಕಳಂಕ ತಂದ ದೊಡ್ಡ ಘಟನೆಯಲ್ಲಿ ಇದೊಂದು.

ಗಣಪತಿ ಆತ್ಮಹತ್ಯೆ ಮತ್ತು ಜಾರ್ಜ್

ಗಣಪತಿ ಆತ್ಮಹತ್ಯೆ ಮತ್ತು ಜಾರ್ಜ್

ಡಿವೈಎಸ್‌ಪಿಯಾಗಿದ್ದ ಎಂ ಕೆ ಗಣಪತಿ ಕರ್ತವ್ಯದ ವೇಳೆಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡೀ ದೇಶದಲ್ಲೇ ಭಾರೀ ಸಂಚಲನ ಮೂಡಿಸಿತ್ತು. ಜೊತೆಗೆ, ಗಣಪತಿ ತಮ್ಮ ಡೆತ್ ನೋಟಿನಲ್ಲಿ ತನ್ನ ಸಾವಿಗೆ ಸಚಿವ ಕೆ ಜೆ ಜಾರ್ಜ್, ಎಡಿಜಿಪಿ ಪ್ರಸಾದ್ ಮತ್ತು ಐಜಿಪಿ ಪ್ರಣವ್‌ ಮೊಹಾಂತಿ ಕಾರಣ ಎಂದು ಆರೋಪ ಮಾಡಿದ್ದರು. ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾದ ನಂತರ ಗೃಹ ಸಚಿವರಾಗಿದ್ದ ಜಾರ್ಜ್ ರಾಜೀನಾಮೆ ನೀಡಿದ್ದರು. ಸರಕಾರ ತನಿಖೆಗೆ ಆದೇಶ ನೀಡಿತ್ತು, ಜಾರ್ಜ್ ಕ್ಲೀನ್ ಚಿಟ್ ಪಡೆದು ಮತ್ತೆ ಮಂತ್ರಿಯಾದರು.

ಎಚ್ದಿಕೆ ಸಿಡಿಸಿದ ಊಬ್ಲೋ ವಾಚ್

ಎಚ್ದಿಕೆ ಸಿಡಿಸಿದ ಊಬ್ಲೋ ವಾಚ್

ಸಿಎಂ ಸ್ನೇಹಿತ ಮತ್ತು ಅನಿವಾಸಿ ಭಾರತೀಯ ಗಿರೀಶ್ ಚಂದ್ರ ಎನ್ನುವವರು ಸಿದ್ದರಾಮಯ್ಯಗೆ ನೀಡಿದ ದುಬಾರಿ ಊಬ್ಲೋ ವಾಚ್ ಭಾರೀ ವಿವಾದ ಹುಟ್ಟುಹಾಕಿತ್ತು. ಸಿದ್ದರಾಮಯ್ಯ ಅವರ ಕೈಯಲ್ಲಿರುವ ವಾಚ್ ವಜ್ರ ಖಚಿತವಾಗಿದ್ದು 50 ರಿಂದ 70 ಲಕ್ಷ ಬೆಲೆ ಬಾಳುತ್ತದೆ ಎಂದು ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು. ಭಾರೀ ವಿವಾದ ಹುಟ್ಟುಹಾಕಿ, ಹೈಕಮಾಂಡ್ ಬಾಗಿಲು ತಟ್ಟಿಬಂದ ಈ ವಾಚ್ ಅನ್ನು ಕೊನೆಗೆ ಸಿದ್ದರಾಮಯ್ಯ ' ರಾಜ್ಯದ ಸ್ವತ್ತು' ಎಂದು ಸರಕರಾದ ಖಚಾನೆಗೆ ಒಪ್ಪಿಸಿದ್ದರು.

ಸುದ್ದಿ ಮಾಡಿದ ಕಪ್ಪ ಹಗರಣ

ಸುದ್ದಿ ಮಾಡಿದ ಕಪ್ಪ ಹಗರಣ

ರಾಜ್ಯ ಸರಕಾರದಿಂದ ಹೈಕಮಾಂಡಿಗೆ ಕಪ್ಪ ನೀಡಲಾಗಿದೆ ಎನ್ನುವ ವಿಚಾರವನ್ನು ದಾಖಲೆ ಸಮೇತ ಬಿಜೆಪಿ ಬಿಡುಗೊಡೆಗೊಳಿಸಿತ್ತು. ಡೈರಿಯಲ್ಲಿ ಸೋನಿಯಾ, ರಾಹುಲ್, ದಿಗ್ವಿಜಯ್, ಅಹಮದ್ ಪಟೇಲ್ ಹೀಗೆ ಹಲವು ಹೆಸರುಗಳು ದಾಖಲಾಗಿದ್ದವು. ಆದರೆ, ನಾವೂ ಹೈಕಮಾಂಡಿಗೆ ದುಡ್ಡು ನೀಡಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅನಂತ್ ಕುಮಾರ್ ಮತ್ತು ಬಿಎಸ್ವೈ ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿ ಬಿಜೆಪಿಗೆ ಮುಜುಗರವನ್ನು ತಂದಿಟ್ಟ ಘಟನೆ ನಡೆಯಿತು.

ಸ್ಟೀಲ್ ಬ್ರಿಡ್ಜ್ ಮೇಲೆ ಕೋಟಿ ಕೋಟಿ

ಸ್ಟೀಲ್ ಬ್ರಿಡ್ಜ್ ಮೇಲೆ ಕೋಟಿ ಕೋಟಿ

ರಾಜ್ಯ ಸರ್ಕಾರ ಹಾಗೂ ಬಿಡಿಎ ಜಂಟಿಯಾಗಿ ಬೆಂಗಳೂರು ಹೆಬ್ಬಾಳದಿಂದ ಚಾಲುಕ್ಯ ವೃತ್ತದವರೆಗೆ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಕ್ಯಾಬಿನೆಟ್ ಅನುಮತಿ ಪಡೆದುಕೊಂಡಿತ್ತು. ಸಾರ್ವಜನಿಕರ ಮತ್ತು ಹಲವು ಸಂಘಟನೆಗಳ ತೀವ್ರ ವಿರೋಧದ ನಂತರ ಈ ಯೋಜನೆಯನ್ನು ಸರಕಾರ ಕೈಬಿಟ್ಟಿತ್ತು. ಇದಕ್ಕೆ ಬಿಜೆಪಿ ಬಿಡುಗಡೆಗೊಳಿಸಿದ ಡೈರಿ ಎಫೆಕ್ಟ್ ಕಾರಣ ಎನ್ನಲಾಗುತ್ತಿತ್ತು.

ತನ್ವೀರ್ ಸೇಠ್ ವಿಡಿಯೋ

ತನ್ವೀರ್ ಸೇಠ್ ವಿಡಿಯೋ

ಕಳೆದ ನವೆಂಬರ್ 10 ರಂದು ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ತನ್ವೀರ್ ಸೇಠ್ ಅಶ್ಲೀಲ ಚಿತ್ರ ವೀಕ್ಷಿಸಿದ್ದು ಭಾರೀ ಟೀಕೆಗೆ ವ್ಯಕ್ತವಾಗಿತ್ತು. ಉದ್ದೇಶಪೂರ್ವಕವಾಗಿ ನೋಡಿಲ್ಲ. ಟಿಪ್ಪು ಜಯಂತಿ ವಿರೋಧಿಸಿ ಗಲಾಟೆ, ಬೆಳವಣಿಗೆಗಳ ಬಗ್ಗೆ ವಾಟ್ಸಾಪ್ ಬಂದ ಸಂದೇಶಗಳನ್ನು ನೋಡುತ್ತಿದ್ದೆ ಎಂದು ಸೇಠ್ ಸ್ಪಷ್ಟನೆ ನೀಡಿದ್ದರು. ಸಿಐಡಿ ಸೈಬರ್ ದಳದಿಂದ ವಿಚಾರಣೆ ನಡೆಸಿ ತನ್ವೀರ್ ಸೇಠ್ ಗೆ ಕ್ಲೀನ್ ಚಿಟ್ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Chief Minister Siddaramaiah government completing 4 years on May 13. Some of the major incidents which has given bad remarks to the government.
Please Wait while comments are loading...