KPSC ಪರೀಕ್ಷೆ ಲೋಪ: ಆಯೋಗಕ್ಕೆ ಮಹತ್ವದ ಸೂಚನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್ 12: KPSC ಪರೀಕ್ಷೆಯಲ್ಲಿ ಭಾಷಾಂತರದಲ್ಲಿ ಆದ ಲೋಪದ ಕಾರಣಕ್ಕೆ ಅಭ್ಯರ್ಥಿಗಳಿಗೆ ಆಗಿರುವ ಸಮಸ್ಯೆ ಬಗ್ಗೆ ವಿರೋಧ ಪಕ್ಷದ ನಿಲುವಳಿ ಸೂಚನೆ ಮೇಲೆ ಕೆಪಿಎಸ್‌ಸಿ ಕುರಿತ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಉತ್ತರವನ್ನ ನೀಡಿದ್ದಾರೆ. ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಉಂಟಾಗಿರುವ ಲೋಪದೋಷಗಳನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಯೋಗಕ್ಕೆ ಮಹತ್ವದ ಸೂಚನೆಯನ್ನ ನೀಡಿದ್ದಾರೆ.
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಹಾಗೂ ಮರು ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳಲ್ಲಿನ ಕನ್ನಡ ಭಾಷಾಂತರದಲ್ಲಿ ಲೋಪದೋಷಗಳಿಗೆ ಕಾರಣರಾದ ವಿಷಯ ತಜ್ಞರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಅವರ ಮೇಲೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾಷಾಂತರಕಾರರ ಲೋಪವಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.

ಆಯೋಗವು ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿ ತಯಾರಿಸಿ, ನಂತರ ಇಂಗ್ಲೀಷ್ ಬಗ್ಗೆ ಭಾಷಾಂತರ ಮಾಡಲು ಆಯೋಗಕ್ಕೆ ಸೂಚನೆಯನ್ನು ನೀಡಲಾಗುವುದು. ಏನೇ ಆದರೂ ಈಗ ಪ್ರಕರಣವು ಉಚ್ಛ ನ್ಯಾಯಾಲಯ ಹಾಗೂ ಕೆಎಟಿಗಳು ನೀಡುವ ಆದೇಶಗಳನ್ನು ಆಧರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಯಾವುದೇ ಮುಲಾಜುಗಳು ಸರ್ಕಾರಕ್ಕಿಲ್ಲ ಎಂಬುದನ್ನು ಸದನಕ್ಕೆ ತಿಳಿಸಬಯಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ನೇಮಕಾತಿ ಪ್ರಕ್ರಿಯೆ ಸಂಬಂಧಿಸಿದಂತೆ ಕೆಲ ಸುಧಾರಣೆಗಳನ್ನು ತರಲು ಸರ್ಕಾರವು ಮುಂದಾಗಿದೆ. ಕರ್ನಾಟಕ ಲೋಕಸೇವಾ ಆಯೋಗವು ನಡೆಸುವ ಎಲ್ಲಾ ಪರೀಕ್ಷೆಗಳನ್ನು ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಸಲಾಗುತ್ತಿದೆ. ಪ್ರತಿ ಅಭ್ಯರ್ಥಿಗೂ ವೈಯಕ್ತಿಕ ಒಎಂಆರ್ ಹಾಳೆಯನ್ನು ಬಾರ್ ಕೋಡ್ ನೊಂದಿಗೆ ನೀಡಲಾಗುತ್ತಿದ್ದು, ನಂತರ ಅತ್ಯಂತ ಗೌಪ್ಯವಾಗಿ ಸ್ಕಾö್ಯನ್ ಮಾಡಲಾಗುತ್ತಿದೆ. ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 1957ಕ್ಕೆ ಸಮಗ್ರ ತಿದ್ದುಪಡಿಯನ್ನು ತರಲು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಕರ್ನಾಟಕ ಲೋಕಸೇವಾ ಆಯೋಗದ (ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರಗಳು) ಅಧಿನಿಯಮ, 1959ರ ಕಾಯ್ದೆಗೆ ತಿದ್ದುಪಡಿ ತರಲು ಪ್ರಸ್ತಾಪಿಸಲಾಗಿದೆ.
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಎಲ್ಲಾ ಇಲಾಖೆಗಳು ಪ್ರತಿ ವರ್ಷ ಹುದ್ದೆಗಳನ್ನು ಆಯ್ಕೆ ಪ್ರಾಧಿಕಾರಗಳಿಗೆ ನಿಯಮಿತವಾಗಿ ಬಿಡುಗಡೆ ಮಾಡಲು ವಾರ್ಷಿಕ ವೇಳಾಪಟ್ಟಿಯನ್ನು ನಿಗಧಿಪಡಿಸಿ ದಿನಾಂಕ:17.01.2025 ರಂದು ಸುತ್ತೋಲೆ ಹೊರಡಿಸಲಾಗಿದೆ. ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆಯಲ್ಲಿನ ಕನ್ನಡ ಭಾಷಾಂತರವನ್ನು ಸಮರ್ಪಕವಾಗಿ ನಿರ್ವಹಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗಗಳ ಸಹಯೋಗದೊಂದಿಗೆ ಒಂದು ಕನ್ನಡ ಭಾಷಾ ತಜ್ಞರ ತಂಡವನ್ನು ರಚಿಸಲು ಪ್ರಸ್ತಾಪಿಸಿದೆ. ಕೇಂದ್ರ ಲೋಕಸೇವಾ ಆಯೋಗವು ನಡೆಸುವ ನೇಮಕಾತಿ ವಿಧಾನಗಳನ್ನು ಪರಿಶೀಲಿಸಿ, ಕರ್ನಾಟಕ ಲೋಕಸೇವಾ ಆಯೋಗದಲ್ಲಿಯೂ ಅಳವಡಿಸಿಕೊಳ್ಳಲು ಸೂಚನೆಗಳನ್ನು ನೀಡಲಾಗಿದೆ.
KPSC ಸದಸ್ಯರ ಸಂಖ್ಯೆ ಕಡಿಮೆ ಮಾಡುವುದು, ಸದಸ್ಯರ ಆಯ್ಕೆಗೆ ಸರ್ಚ್ ಕಮಿಟಿ ರಚಿಸುವುದು, ಮುಂದೆ ಆದಷ್ಟು ಪ್ರಾಮಾಣಿಕವಾಗಿ ಇರುವವರನ್ನು ನೇಮಕ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡೋಣ. ಮರು ಪರೀಕ್ಷೆ ಮಾಡಿ ಎಂದು ಸೂಚನೆ ಕೊಡಲು ಈಗ ಸಾಧ್ಯವಿಲ್ಲ, ಪ್ರಕರಣ ನ್ಯಾಯಾಲಯದಲ್ಲಿದೆ. ಮರು ಪರೀಕ್ಷೆಗೆ ನ್ಯಾಯಾಲಯ ಸೂಚನೆ ಕೊಟ್ಟರೆ ಮರು ಪರೀಕ್ಷೆ. ಮರು ಪರೀಕ್ಷೆ ಬಗ್ಗೆ ಕೋರ್ಟ್ ಸೂಚನೆ ಬರದಿದ್ದರೆ, ಸರ್ವ ಪಕ್ಷ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ಸಿದ್ದರಾಮಯ್ಯ ಅವರು ಹೇಳಿದರು.












Click it and Unblock the Notifications