ಯಶಸ್ವಿ ಜನಾಶೀರ್ವಾದ ಯಾತ್ರೆಯಿಂದ ನಿಟ್ಟುಸಿರುಬಿಟ್ಟ ಸಿಎಂ
Recommended Video

ಮೈಸೂರು, ಮಾರ್ಚ್ 26: ಕಳೆದ ಕೆಲವು ದಿನಗಳಿಂದ ಕರ್ನಾಟಕದಲ್ಲಿ ಮಿಂಚಿನ ಸಂಚಾರ ಮಾಡುತ್ತಾ, ಸಮಾವೇಶಗಳಲ್ಲಿ ಭಾಷಣ ಬಿಗಿಯುತ್ತಾ ಮುಂದಿನ ಚುನಾವಣೆಗೆ ಈಗಿನಿಂದಲೇ ಪ್ರಚಾರ ಕೈಗೊಂಡಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ. ಮುಖ್ಯಮಂತ್ರಿ ತವರು ಕ್ಷೇತ್ರ ಮೈಸೂರಿನಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು, ನೆರೆದಿದ್ದ ಜನರನ್ನು ಕಂಡು ಸಂತಸದ ನಿಟ್ಟುಸಿರು ಬಿಟ್ಟಿದ್ದರೆ, ಇತ್ತ ತನ್ನ ತಾಕತ್ತೇನು ಎಂಬುದನ್ನು ಹೈಕಮಾಂಡ್ ಮುಂದೆ ಪ್ರದರ್ಶನ ಮಾಡಿದ ಸಂತಸದಲ್ಲಿ ಸಿದ್ದರಾಮಯ್ಯ ಮುಳುಗಿದ್ದಾರೆ.
ಈಗಾಗಲೇ ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿಗೆ ಕರೆಯಿಸಿ ಬೃಹತ್ ಸಮಾವೇಶವನ್ನು ನಡೆಸಿತ್ತು. ಹೀಗಾಗಿ ಮೈಸೂರಿನಲ್ಲಿ ಬಿಜೆಪಿಗಿಂತ ತಾವೇನು ಕಡಿಮೆಯಿಲ್ಲ, ತಮಗೂ ಜನರನ್ನು ಸೇರಿಸುವ ತಾಕತ್ ಇದೆ ಎಂಬುದನ್ನು ಪ್ರದರ್ಶನ ಮಾಡುವುದು ಸಿದ್ದರಾಮಯ್ಯ ಅವರಿಗೆ ಅನಿವಾರ್ಯವಾಗಿತ್ತು.
ಚಿತ್ರಗಳು: ಮೈಸೂರಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ಹೀಗಾಗಿ ಮಾರ್ಚ್ 25ರಂದು ನಡೆದ ಸಮಾವೇಶಕ್ಕೆ ಜನರನ್ನು ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕರೆತಂದು ಖುದ್ದು ರಾಹುಲ್ ಗಾಂಧಿಯೇ ಹುಬ್ಬೇರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೆ ನಾಣಯ್ಯ ಸೇರಿದಂತೆ ಜೆಡಿಎಸ್ ನ ಬಂಡಾಯ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಗೆ ಬಿಸಿ ಮುಟ್ಟಿಸಿದ್ದಾರೆ.

ರಾಹುಲ್ ಬಾಯಲ್ಲಿ ಮೋದಿ ಜಪ, ಸಿದ್ದು ಬಾಯಲ್ಲಿ ಗೌಡರ ಜಪ!
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾ.24ರಿಂದಲೇ ಹಳೆ ಮೈಸೂರು ವ್ಯಾಪ್ತಿಯಲ್ಲಿ ಸಮಾವೇಶ ರೋಡ್ ಶೋ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರಿನಲ್ಲಿ ಎರಡು ದಿನಗಳ ಕಾಲ ಹಲವು ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ರಾಹುಲ್ ಗಾಂಧಿ ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದಕ್ಕಷ್ಟೆ ಸೀಮಿತ ಮಾಡಿಕೊಂಡಿದ್ದಷ್ಟೆ ಕಂಡು ಬಂತು. ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು ಸೇರಿದಂತೆ ಜೆಡಿಎಸ್ ಪಕ್ಷವನ್ನು ಈ ಬಾರಿ ಟಾರ್ಗೆಟ್ ಮಾಡಿದ್ದು ವಿಶೇಷವಾಗಿತ್ತು. ಬಹುತೇಕ ಎಲ್ಲ ಕಡೆಯೂ ಹೇಳಿದ್ದನ್ನೇ ಹೇಳುವ ಮೂಲಕ ಅವರ ಮಾತು ಅಷ್ಟೇನು ಆಸಕ್ತಿ ಮೂಡಿಸಲಿಲ್ಲ. ಜನಸ್ತೋಮವನ್ನು ಕಂಡ ಕಾಂಗ್ರೆಸ್ ರಾಜ್ಯ ನಾಯಕರಲ್ಲಿ ರಣೋತ್ಸಾಹ ಇಮ್ಮಡಿಯಾಗಿತ್ತಲ್ಲದೆ, ನಾಯಕರೆಲ್ಲರೂ ಬಿಜೆಪಿ ಮತ್ತು ಜೆಡಿಎಸ್ ಅನ್ನು ತೆಗಳಿ ತಮ್ಮ ದಾಹ ತೀರಿಸಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದುದ್ದಕ್ಕೂ ದೇವೇಗೌಡರನ್ನೇ ಟಾರ್ಗೆಟ್ ಮಾಡಿದರು.

ಮದ್ಯದಂಗಡಿ ಮುಂದೆ ಸಾಲೋ ಸಾಲು!
ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ಕರೆಯಿಸಿ ಜನಾಶೀರ್ವಾದ ಯಾತ್ರೆಗಳನ್ನು ನಡೆಸಿದರೂ ಮಾಧ್ಯಮಗಳಲ್ಲಿ ಮಾತ್ರ ಚಿಕ್ಕಚಿಕ್ಕ ಎಡವಟ್ಟುಗಳು ದೊಡ್ಡ ಸುದ್ದಿಯಾಗಿ ಪ್ರಚಾರ ಪಡೆದಿದ್ದು ಕಂಡು ಬಂತು. ಗ್ರಾಮೀಣ ಪ್ರದೇಶದಿಂದ ಬಂದವರು ಸಮಾವೇಶದ ಸ್ಥಳದಲ್ಲಿ ಜಮಾಯಿಸುವ ಬದಲು ವೈನ್ ಸ್ಟೋರ್ ಗಳ ಮುಂದೆ ಬೀಡು ಬಿಟ್ಟು ಎಲ್ಲೆಂದರಲ್ಲಿ ಮದ್ಯಸೇವಿಸುತ್ತಿದ್ದ ದೃಶ್ಯ ಕಾಣಸಿಕ್ಕಿತ್ತು. ಮತ್ತೆ ಕೆಲವರು ಬೀದಿ ಬೀದಿಗಳಲ್ಲಿ ಅಡ್ಡಾಡುತ್ತಿದ್ದರು. ಬೆಂಗಳೂರು, ಮಂಡ್ಯ, ಮೈಸೂರು ತಾಲೂಕು ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್, ವ್ಯಾನ್, ಕಾರು ಹೀಗೆ ಸಾವಿರಾರು ವಾಹನಗಳು ಬಂದಿದ್ದರಿಂದ ಅವುಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿದ್ದರಿಂದ ಟ್ರಾಫಿಕ್ ಸಮಸ್ಯೆಯೂ ಎದುರಾಯಿತು.

ಬಂಡಾಯ ಶಾಸಕರೊಂದಿಗೆ ಬೆಂಬಲಿಗರ ದಂಡು
ಕೆಎಸ್ ಆರ್‍ಟಿಸಿ ಸಂಸ್ಥೆಯಿಂದ ಹೆಚ್ಚಿನ ಬಸ್ ಗಳನ್ನು ಪಡೆದಿದ್ದರಿಂದ ದೂರದ ಊರುಗಳಿಗೆ ಸಮರ್ಪಕ ಬಸ್‍ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಕಾಂಗ್ರೆಸ್ ಗೆ ಸೇರ್ಪಡೆಗೊಂಡ ಬಂಡಾಯ ಶಾಸಕರು ಕೂಡ ತಮ್ಮೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತಂದಿದ್ದು, ಅದರಲ್ಲಿ ಜಮೀರ್ ಅಹಮ್ಮದ್ ಅವರನ್ನು ಬೆಂಬಲಿಸಿ ಬಂದವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿತ್ತು. ಇದೆಲ್ಲದರ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳೂ ಆದ ತಮ್ಮ ಪುತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಸಚಿವ ಹೆಚ್.ಸಿ.ಮಹದೇವಪ್ಪರವರ ಪುತ್ರ ಸುನೀಲ್ ಬೋಸ್ ಅವರನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪರಿಚಯ ಮಾಡಿಸಿಕೊಟ್ಟಿದ್ದು ಸುದ್ದಿಗೆ ಗ್ರಾಸವಾಯಿತು.

ಜಿದ್ದಾಜಿದ್ದಿಗೆ ಮುನ್ನುಡಿ
ಒಟ್ಟಾರೆ ಮೈಸೂರಿನಲ್ಲಿ ಅದರಲ್ಲೂ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲೇ ನಡೆದ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆ ಯಶಸ್ವಿಯಾಗಿದ್ದಂತೂ ಸತ್ಯ. ಆ ಮೂಲಕ ಸಿದ್ದರಾಮಯ್ಯ ಅವರು ತಮ್ಮ ತಾಕತ್ತೇನು ಎಂಬುದನ್ನು ಹೈಕಮಾಂಡ್ ಗೆ ಮಾತ್ರವಲ್ಲದೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ತೋರಿಸಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ನಡೆಯಲಿರುವ ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲೀಗ ಬಿಜೆಪಿ ಮತ್ತು ಜೆಡಿಎಸ್ ಎರಡು ಪಕ್ಷಗಳ ಮೇಲೆಯೂ ಯುದ್ಧ ಸಾರಿರುವ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಭಾರೀ ರಾಜಕೀಯ ಸವಾಲುಗಳನ್ನು ಎದುರಿಸಲೇ ಬೇಕಾಗಿದ್ದು, ಎಲ್ಲರನ್ನು ಸದೆಬಡಿದು ರಾಜ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿಯಲೇ ಬೇಕಾಗಿದೆ. ಅದಕ್ಕಾಗಿಯೇ ತಮ್ಮ ರಾಜಕೀಯ ತಂತ್ರಗಳನ್ನು ಒಂದೊಂದಾಗಿ ಹೊರಗೆ ಬಿಡುತ್ತಲೇ ಸಾಗುತ್ತಿದ್ದಾರೆ. ಮುಂದೆ ಏನಾಗಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.












Click it and Unblock the Notifications