ಸಂಪುಟ ಪುನರ್ ರಚನೆ ಇಲ್ಲ, ವಿಸ್ತರಣೆ ಮಾತ್ರ
ಬೆಂಗಳೂರು, ಅಕ್ಟೋಬರ್ 28 : ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಷಯ ಕಗ್ಗಂಟಾಗಿಯೇ ಉಳಿದಿದೆ. ಬುಧವಾರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ ಎಂಬ ಸಂದೇಶವನ್ನು ಹೈಕಮಾಂಡ್ ರವಾನಿಸಿದೆ.
ಮಂಗಳವಾರ ಸಂಜೆ ದೆಹಲಿಯ 10 ಜನಪಥ್ ನಿವಾಸದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸಿದ್ದರಾಮಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಸಂಪುಟ ವಿಸ್ತರಣೆ ಕುರಿತಾಗಿ ಯಾವುದೇ ತೀರ್ಮಾನವಾಗಿಲ್ಲ' ಎಂದು ಹೇಳಿದರು.[ಐವರು ಸಂಪುಟ ಸೇರುವ ಸಾಧ್ಯತೆ]

'ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಂಪುಟ ವಿಸ್ತರಣೆಯ ಕುರಿತಾಗಿ ಚರ್ಚಿಸಿದ್ದೇವೆ. ಆದರೆ, ಯಾವುದೇ ತಿರ್ಮಾನ ಕೈಗೊಂಡಿಲ್ಲ. ಬುಧವಾರ ದಿಗ್ವಿಜಯ್ ಸಿಂಗ್ ಅವರ ಜೊತೆ ಮತ್ತೂಂದು ಸುತ್ತಿನ ಮಾತುಕತೆ ನಡೆಸಿ ತೀರ್ಮಾನ ಪ್ರಕಟಿಸುತ್ತೇನೆ' ಎಂದರು. [ದಲಿತ ಸಿಎಂ ಕೂಗು, ಮೌನ ಮುರಿದ ಸಿದ್ದರಾಮಯ್ಯ]
ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಸಂಪುಟ ಪುನರ್ ರಚನೆ ಬಗ್ಗೆ ಮುಖ್ಯಮಂತ್ರಿಗಳು ಹೆಚ್ಚು ಆಸಕ್ತಿ ಹೊಂದಿಲ್ಲ. ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಮತ್ತು ಒಬ್ಬರು ಸಚಿವರಿಂದ ರಾಜೀನಾಮೆ ಪಡೆದು ಒಟ್ಟು ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. [ಸಂಪುಟ ಸೇರಲಿದ್ದಾರೆ ರಮ್ಯಾ?]
ದಿಗ್ವಿಜಯ್ ಸಿಂಗ್ ಹೇಳುವುದೇನು? : ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿರುವ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು, 'ಸಂಪುಟದ ವಿಸ್ತರಣೆ ಅಥವಾ ಪುನರ್ ರಚನೆ ಮುಖ್ಯಮಂತ್ರಿಗಳ ಪರಮಾಧಿಕಾರ' ಎಂದು ಹೇಳಿದ್ದಾರೆ.
ಪರಮೇಶ್ವರ ಅವರಿಗೆ ಮತ್ತೆ ಅಧ್ಯಕ್ಷ ಪಟ್ಟ : ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ಉಪಮುಖ್ಯಮಂತ್ರಿ ಹುದ್ದೆ ಅಥವ ಮತ್ತೊಮ್ಮೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ನೀಡುವಂತೆ ವರಿಷ್ಠರ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಸೋನಿಯಾ ಗಾಂಧಿ ಅವರ ಜೊತೆ ಮಾತುಕತೆ ನಡೆಸುವಾಗ ಪರಮೇಶ್ವರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದ್ದಾರೆ. ಆದರೆ, ಡಿಸಿಎಂ ಹುದ್ದೆ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಪಕ್ಷದ ಅಧ್ಯಕ್ಷ ಹುದ್ದೆ ಅಥವ ಡಿಸಿಎಂ ಹುದ್ದೆ ದೊರೆಯದಿದ್ದರೆ ಸಾಮಾನ್ಯ ಕಾರ್ಯಕರ್ತನಾಗಿ ಉಳಿಯುವುದಾಗಿ ಪರಮೇಶ್ವರ ಅವರು ಸಂದೇಶ ರವಾನಿಸಿದ್ದಾರೆ.












Click it and Unblock the Notifications