ಪೊಲೀಸರು ಒಂದು ಬಾರಿಯೂ ವಿಚಾರಣೆ ನಡೆಸದೆ ಈಶ್ವರಪ್ಪಗೆ ಕ್ಲೀನ್‌ಚಿಟ್: ಸಿದ್ದರಾಮಯ್ಯ
ಬೆಂಗಳೂರು,ಜುಲೈ.20: ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದೆ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕ್ಲಿನ್ ಚಿಟ್ ಸಿಕ್ಕಿದ್ದು, ಇದರಲ್ಲಿ ಆಶ್ಚರ್ಯವೇನು ಇಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿ, ಪೊಲೀಸರು ಸಲ್ಲಿಸಿರುವ 'ಬಿ ರಿಪೋರ್ಟ್' ನ್ಯಾಯ ಸಿಗಬಹುದೆಂಬ ಭರವಸೆಯಿಂದ ಕಾಯುತ್ತಿದ್ದ ಮೃತನ ಕುಟುಂಬದ ನೋವನ್ನು ಇನ್ನಷ್ಟು ಹೆಚ್ಚಿಸಿದೆ. ಇದೇ ಕಾರಣಕ್ಕಾಗಿ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆ ಎಂದು ಸಿದ್ದರಾಮಯ್ಯ ಟ್ವಿಟ್ ಮಾಡಿದ್ದಾರೆ.
ತನಿಖೆಗೆ ಮೊದಲೇ ಮುಖ್ಯಮಂತ್ರಿಗಳಾದಿಯಾಗಿ ಸಚಿವರು, ಬಿಜೆಪಿಯ ಶಾಸಕರು ಆರೋಪಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಇದನ್ನೇ ಪೊಲೀಸ್ ಇಲಾಖೆ ಸ್ವಲ್ಪ ತಡವಾಗಿ 'ಬಿ ರಿಪೋರ್ಟ್' ರೂಪದಲ್ಲಿ ನೀಡಿದೆ. ಹಾಗಾಗಿ ಇದರಲ್ಲಿ ಆಶ್ಚರ್ಯಪಡುವಂತದ್ದು ಏನಿಲ್ಲ ಎಂದು ಅವರು ಟೀಕೆ ಮಾಡಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಮುನ್ನ ತನ್ನ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾದರೂ, ಆರೋಪಿ ಸ್ಥಾನದಲ್ಲಿರುವ ಈಶ್ವರಪ್ಪ ಅವರನ್ನು ಒಮ್ಮೆಯೂ ವಿಚಾರಣೆ ನಡೆಸದಿರುವುದು ತನಿಖೆಯ ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿರು.

ಕಮಿಷನ್ ಹಪಹಪಿಗೆ ಜೀವ ಬಲಿ
ಆರೋಪಿ ಸ್ಥಾನದಲ್ಲಿರುವ ಮಾಜಿ ಸಚಿವ ಈಶ್ವರಪ್ಪ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ನಡೆಸಿರುವ ಈ ಪೊಲೀಸ್ ತನಿಖೆ ಸರ್ಕಾರದ ಮಾನ ಉಳಿಸಲು ನಡೆಸಿರುವ ನಾಟಕ. ಭ್ರಷ್ಟ ಬಿಜೆಪಿ ಸರ್ಕಾರದ ಕಮಿಷನ್ ಹಪಹಪಿಗೆ ಇನ್ನಷ್ಟು ಜೀವಗಳು ಬಲಿಯಾಗದಿರಲಿ ಎಂದಷ್ಟೇ ಹಾರೈಸಬಲ್ಲೆ ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ನನ್ನ ಸಾವಿಗೆ ಈಶ್ವರಪ್ಪ ಕಾರಣ
ಇದೇ ಏಪ್ರಿಲ್ 12ರಂದು ಗುತ್ತಿಗೆದಾರ ಸಂತೋಷ್ ಎಂಬುವವರು ಉಡುಪಿಯ ಹೋಟೆಲ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಂತೋಷ್ ಅವರು ತಮ್ಮ ಸಾವಿಗೂ ಮೊದಲು ತಮ್ಮ ಸ್ನೇಹಿತರಿಗೆ ಸಂದೇಶ ಕಳಿಸಿ ನನ್ನ ಸಾವಿಗೆ ಆಗ ಸಚಿವರಾಗಿದ್ದ ಈಶ್ವರಪ್ಪ ಕಾರಣ ಎಂದು ಸಂದೇಶ ಕಳುಹಿಸಿದ್ದರು. ಸಂದೇಶದಲ್ಲಿ ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದರು. ಇದು ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿತ್ತು.

ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ
ಪ್ರಕರಣಕ್ಕೆ ಸಂಬಂಧಿಸಿಂತೆ ಉಡುಪಿ ಟೌನ್ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿ ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಿರುವ ಸುದ್ದಿ ಕೇಳಿ ತುಂಬಾ ಸಂತಸವಾಗಿದೆ. ನಾನು ತಪ್ಪು ಮಾಡಿಲ್ಲವೆಂದು ನಮ್ಮ ಮನೆದೇವರು ಚೌಡೇಶ್ವರಿ ಮೇಲೆ ಆಣೆ ಮಾಡಿದ್ದೆ. ಚೌಡೇಶ್ವರಿ ದೇವಿಯ ಆಶೀರ್ವಾದದಿಂದ ಪ್ರಕರಣದಲ್ಲಿ ಖುಲಾಸೆ ಆಗಿದ್ದೇನೆ. ಈ ಆರೋಪದಿಂದ ಮುಕ್ತನಾಗುವ ವಿಶ್ವಾಸ ನನಗೆ ಇತ್ತು ಎಂದು ಕೆ.ಎಸ್.ಈಶ್ವರಪ್ಪ ಈ ಸಂಬಂಧ ಹೇಳಿಕೆ ನೀಡಿದ್ದರು.
|
ಯಾವುದೇ ಜವಾಬ್ದಾರಿ ಕೊಟ್ಟರು ನಿಭಾಯಿಸುತ್ತೇನೆ
ಮುಂದುವರಿದು ನನ್ನ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗೆ ಬಿ ರಿಪೋರ್ಟ್‌ನಿಂದ ಉತ್ತರ ಸಿಕ್ಕಿದೆ. ಆರೋಪ ಬಂದಿದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈಗ ಪಕ್ಷ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ ಎಂದು ಮಾಜಿ ಸಚಿವರಾದ ಈಶ್ವರಪ್ಪ ತಿಳಿಸಿದ್ದರು.











Click it and Unblock the Notifications