ಮೋದಿ ಹೇಳಿದ್ದೇನು ? ಮಾಡಿದ್ದೇನು?: ಮಹಾರಾಷ್ಟ್ರ ಬಿಜೆಪಿಯ ಸುಳ್ಳು ಜಾಹೀರಾತಿಗೆ ಅವರದೇ ಶೈಲಿಯಲ್ಲಿ ಸಿದ್ದರಾಮಯ್ಯ ಗುದ್ದು
ಬಳ್ಳಾರಿ, ನವೆಂಬರ್ 07: ಮಹಾರಾಷ್ಟ್ರದ ಬಿಜೆಪಿ "ಕರ್ನಾಟಕ ಸರ್ಕಾರ ವಾದಾ ಕಿಯಾ: ಧೋಖಾ ದಿಯಾ" ಎಂದು ಸುಳ್ಳು ಜಾಹಿರಾತು ನೀಡಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭರವಸೆ ನೀಡಿತ್ತು. ಭರವಸೆ ಈಡೇರಿಸದೇ, ಯೋಜನೆಯನ್ನೇ ಇನ್ನೂ ಆರಂಭಿಸದೆ ವಂಚಿಸಿದೆ ಎನ್ನುವ ಅರ್ಥದ ಪರಮ ಸುಳ್ಳಿನ ಜಾಹಿರಾತುಗಳನ್ನು ಪುಟಗಟ್ಟಲೆ ನೀಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸುಳ್ಳಿನ ಜಾಹಿರಾತನ್ನು ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ ಅವರು ಅವರದೇ ಶೈಲಿಯಲ್ಲಿ ಉತ್ತರಿಸಿ, "ವಾದಾ ದಿಯಾ ಪೂರಾ ಕಿಯಾ" ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು. ವಾದಾ ದಿಯಾ: ಪೂರಾ ಕಿಯಾ ಎಂದು ಸಿ.ಎಂ.ಸಿದ್ದರಾಮಯ್ಯ ಅವರು ಬಿಜೆಪಿಯ ಸುಳ್ಳು ಜಾಹಿರಾತಿಗೆ ಕಪಾಳಮೋಕ್ಷ ಮಾಡಿದರು.

ಬಿಜೆಪಿಯವರಿಗೆ ಸುಳ್ಳೇ ಮನೆ ದೇವರು. ರಾಜ್ಯದಲ್ಲಿ ಶಕ್ತಿ ಯೋಜನೆ ಸೇರಿದಂತೆ ಐದಕ್ಕೆ ಐದೂ ಗ್ಯಾರಂಟಿಗಳು ಯಶಸ್ವಿಯಾಗಿ ನಡೆದುಕೊಂಡು ಹೋಗುತ್ತಿದೆ. ಗೃಹಲಕ್ಷ್ಮಿಯ ಮುಂದಿನ ಕಂತಿನ ಹಣ ಒಂದೆರಡು ದಿನಗಳಲ್ಲೇ ಬಿಡುಗಡೆ ಕೂಡ ಆಗುತ್ತದೆ. ಆದರೆ ಬಿಜೆಪಿಯವರು ಸುಳ್ಳುಗಳನ್ನು ಹರಡಿಸುತ್ತಾ, ಸುಳ್ಳುಗಳನ್ನು ಹರಡುವುದಕ್ಕೇ ಕೋಟಿ ಕೋಟಿ ಖರ್ಚು ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೇಳಿದ್ದೇನು ? ಮಾಡಿದ್ದೇನು?
ವಿದೇಶದಲ್ಲಿರುವ ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಕೊಡ್ತೀವಿ ಅಂತ ಹೇಳಿದ್ರಲ್ಲಾ ಮೋದಿಯವರೇ ಕೊಟ್ರೇನ್ರೀ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ, ಉದ್ಯೋಗ ಸೃಷ್ಟಿ ಮಾಡಿದ್ರಾ ? ಎಲ್ರೀ ಸ್ವಾಮಿ ನಿಮ್ಮ ಅಚ್ಚೆ ದಿನ್? ರೈತರ ಆದಾಯ ದುಪ್ಪಟ್ಟು ಮಾಡ್ತೀನಿ ಅಂದ್ರಲ್ಲಾ ಮೋದಿಯವರೇ ಮಾಡಿದ್ರಾ ? ಮೋದಿ ಪ್ರಧಾನಿ ಆಗುವ ಮೊದಲು ದೇಶದ ಸಾಲ ಇದ್ದದ್ದು 54 ಲಕ್ಷ ಕೋಟಿ ಮಾತ್ರ ಇತ್ತು. ಈಗ ನಿಮ್ಮ ಅವಧಿಯಲ್ಲಿ ದೇಶದ ಸಾಲವನ್ನು 185 ಲಕ್ಷ ಕೋಟಿಗೆ ಏರಿಸಿದ್ದೀರಿ. ಇದೇನಾ ಸ್ವಾಮಿ ನಿಮ್ಮ ಅಚ್ಚೆ ದಿನ್ ಎಂದು ವ್ಯಂಗ್ಯವಾಡಿದರು.
ಮೂರೂವರೆ ವರ್ಷ ನಮ್ಮದೇ ಸರ್ಕಾರ ಇರತ್ತೆ, ಸಂಡೂರಿನ ಅಭಿವೃದ್ಧಿ ಜೋರಾಗತ್ತೆ. ಕಾಂಗ್ರೆಸ್ ಗೆಲ್ಲಿಸಿ ಕಳುಹಿಸಿ. ಈ.ತುಕಾರಾಮ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಕಾತರಿಸುತ್ತಾ ಕೆಲಸ ಮಾಡುವ ಶಾಸಕರಾಗಿದ್ದರು, ಈಗ ಸಂಸದರಾಗಿದ್ದಾರೆ. ಸಂಡೂರಿನಲ್ಲಿ ಈಗ ಆಗಿರುವ ಎಲ್ಲಾ ಅಭಿವೃದ್ಧಿಗಳೂ ಈ.ತುಕಾರಾಮ್ ಮತ್ತು ಸಂತೋಷ್ ಲಾಡ್ ಅವರ ಅವಧಿಯಲ್ಲಿ ಆಗಿರುವಂಥವು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟದ ಅವಧಿಯಿಂದಲೂ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಪರವಾಗಿದೆ. ಬಿಜೆಪಿ ಸ್ವಾತಂತ್ರ್ಯ ಹೋರಾಟದಲ್ಲೂ ಜನರ ಪರವಾಗಿ ಇರಲಿಲ್ಲ. ಈಗಲೂ ಇಲ್ಲ.
ಪ್ರಧಾನಿ ನರೇಂದ್ರ ಮೋದಿಯವರು "ನಾ ಖಾವೋಂಗಾ-ನಾ ಖಾನೆ ದೂಂಗಾ" ಎಂದು ಭಾಷಣ ಮಾಡುತ್ತಾರೆ. ಆದರೆ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಜನಾರ್ದನ ರೆಡ್ಡಿಯನ್ನು ನ್ಯಾಯಲಯವೇ ಅಪರಾಧಿ ಎಂದು ಘೋಷಿಸಿ ಜೈಲಿಗೆ ಹಾಕಿತ್ತು. ಬಿಜೆಪಿಗಾಗಲಿ, ಮೋದಿಗಾಗಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರದಲ್ಲಿದ್ದಷ್ಟೂ ದಿನ ಸಂಡೂರಿಗೆ ಒಂದೇ ಒಂದು ಮನೆ ಕೊಡುವ ಯೋಗ್ಯತೆ ಇರಲಿಲ್ಲ. ಆಪರೇಷನ್ ಕಮಲದ ಮೂಲಕ ಜನ ಗೆಲ್ಲಿಸಿದ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಲೂಟಿ ಮಾಡಿಕೊಂಡು ಹೋದರು. ಅದಕ್ಕೇ ಆಪರೇಷನ್ ಕಮಲದ ಸರ್ಕಾರವನ್ನು ಜನ ಸೋಲಿಸಿ ನಮ್ಮ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತಂದರು.
ನಾವು ಅಧಿಕಾರಕ್ಕೆ ಬಂದ 8 ತಿಂಗಳಲ್ಲೇ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳ ಯಜಮಾನಿ ಮಹಿಳೆಯರಿಗೆ ಪ್ರತೀ ತಿಂಗಳು 2000 ರೂಪಾಯಿ ಕೊಡ್ತಾ ಇರೋದು ನಮ್ಮ ಸರ್ಕಾರ. 1 ಕೋಟಿ 61 ಲಕ್ಷ ಕುಟುಂಬಗಳಿಗೆ ಉಚಿತ ಕರೆಂಟ್ ಕೊಡ್ತಾ ಇರೋದು ನಾವು. ಐದು ಕೆಜಿ ಅಕ್ಕಿ ಜೊತೆಗೆ ಐದು ಕೆಜಿ ಅಕ್ಕಿಯ ಹಣವನ್ನೂ ಕೊಡ್ತಾ ಇರೋದು ನಾವು. ಹೀಗೆ ಐದಕ್ಕೆ ಐದೂ ಗ್ಯಾರಂಟಿಗಳ ಮೂಲಕ ಸಂಡೂರಿನ ಜನರಿಗೆ, ರಾಜ್ಯದ ಜನರಿಗೆ ಆರ್ಥಿಕ ಶಕ್ತಿ ಕೊಡ್ತಾ ಇರೋದು ನಾವು. ನಮ್ಮ ಕಾಂಗ್ರೆಸ್ ಸರ್ಕಾರ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯಗಳಲ್ಲೂ BJP ಏಕೆ ಜಾರಿ ಮಾಡಿಲ್ಲ ಎನ್ನುವುದನ್ನು ಜನರಿಗೆ ಉತ್ತರಿಸಬೇಕು ಎಂದರು.












Click it and Unblock the Notifications