ಸಂಚಾರಿ ನಿಯಮ ಪಾಲಿಸದವರ ಲೈಸೆನ್ಸ್ ರದ್ದು: ಸಾರಿಗೆ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ
ಬೆಂಗಳೂರು, ಸೆಪ್ಟೆಂಬರ್ 23: ಸಂಚಾರಿ ನಿಯಮ ಪಾಲಿಸದೆ ವಾಹನ ಓಡಿಸುವವರ, ಕುಡಿದು ವಾಹನ ಚಲಾಯಿಸುವರ ಚಾಲನಾ ಪರವಾನಗಿಯನ್ನು ರದ್ದು ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರಿಗೆ ಖಡಕ್ ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ 65 ಆಧುನಿಕ ಜೀವ ರಕ್ಷಕ ಸವಲತ್ತುಗಳಿರುವ ಆ್ಯಂಬುಲೆನ್ಸ್ ಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿ, ಅಪಘಾತದ ಸಂದರ್ಭದಲ್ಲಿ ಗೋಲ್ಡರ್ ಹವರ್ ಬಹಳ ಮುಖ್ಯ. ಈ ಒಂದು ಗಂಟೆಯಲ್ಲಿ ಅಗತ್ಯ ತುರ್ತು ಚಿಕಿತ್ಸೆ ಸಿಕ್ಕರೆ ನೂರಾರು ಪ್ರಾಣಗಳನ್ನು ಉಳಿಸಲು ಸಾಧ್ಯವಿದೆ. ಈ ಪ್ರಾಣ ಉಳಿಸುವ ಕಾರ್ಯಕ್ಕೆ ಈ ಆ್ಯಂಬುಲೆನ್ಸ್ ಗಳು ನೆರವಾಗುತ್ತವೆ ಎಂದರು.

ಸದ್ಯ 65 ಆಧನಿಕ ಮತ್ತು ಪ್ರಾಥಮಿಕ ಆ್ಯಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯಕ್ಕೆ ಆಧುನಿಕ ಸವಲತ್ತುಗಳಿರುವ ಆ್ಯಂಬುಲೆನ್ಸ್ ಗಳನ್ನು ವಿಸ್ತರಿಸಲಾಗುವುದು ಎಂದರು. ಸಂಚಾರಿ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಬಹುತೇಕ ಅಪಘಾತಗಳು ಸಂಭವಿಸುವುದೇ ಇಲ್ಲ. ಕುಡಿದು ವಾಹನ ಓಡಿಸುವುದನ್ನು ನೂರಕ್ಕೆ ನೂರರಷ್ಟು ನಿಲ್ಲಿಸಿ. ನಿಮ್ಮ ಕುಟುಂಬಗಳನ್ನು ಅನಾಥ ಮಾಡಬೇಡಿ ಎಂದು ಯುವ ಸಮೂಹಕ್ಕೆ ಸಿಎಂ ಕರೆ ನೀಡಿದರು.
ಮೊಬೈಲ್ ಮಾತಾಡಿಕೊಂಡು ವಾಹನ ಓಡಿಸಿದರೆ ಅಪಘಾತಗಳಾಗದೆ ಇರುತ್ತದಾ ಎಂದು ಪ್ರಶ್ನಿಸಿದ ಸಿಎಂ, ನಿಮ್ಮ ಜೀವಕ್ಕೆ ನೀವೇ ಜವಾಬ್ದಾರಿ. ನಿಮ್ಮ ಕುಟುಂಬಕ್ಕೆ ನೀವೇ ಜವಾಬ್ದಾರಿ. ಆದ್ದರಿಂದ ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದರು.
ಆಪತ್ಕಾಲ ಯಾನ ಸೇವೆ ಯೋಜನೆಯಡಿ ಲೋಕಾರ್ಪಣೆಯಾಗಿರುವ 65 ಅತ್ಯಾಧುನಿಕ ಆಂಬ್ಯುಲೆನ್ಸ್ ಗಳ ಸೇವೆಗಳು ಅಪಘಾತಕ್ಕೊಳಗಾದವರ ಜೀವ ಉಳಿಸುವಲ್ಲಿ ಆಪತ್ಕಾಲ ಯಾನ ಸೇವೆ ಸಹಕಾರಿಯಾಗಿವೆ. 26 ಸುಧಾರಿತ ಹಾಗೂ 39 ಬೇಸಿಕ್ ಲೈಫ್ ಸಪೋರ್ಟ್ ಅಂಬ್ಯುಲೆನ್ಸ್ ಗಳನ್ನು ಇಂದು ಜನರ ಸೇವೆಗೆ ಮುಕ್ತಗೊಳಿಸಲಾಗಿದ್ದು, ಇವುಗಳನ್ನು ರಾಜ್ಯದ ವಿವಿದ ಜಿಲ್ಲೆಗಳಿಗೆ ಕಳಿಸಲಾಗುವುದು ಎಂದು ತಿಳಿಸಿದರು.
ರಾಜ್ಯಪಾಲರು ಅರ್ಕಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಹಿಂದೆ ನಾಲ್ಕು ವರ್ಷ ಅವಧಿಯಲ್ಲಿದ್ದಾಗ ವಿಷಯವನ್ನು ಏಕೆ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿಯವರು ರಾಜ್ಯಪಾಲರಿಗೆ ಈಗ ಪತ್ರ ಬರೆದಿದ್ದು, ಹಿಂದೆ ಅವರು ಸಚಿವರಾಗಿದ್ದಾಗ ಕ್ರಮವೇಕೆ ತೆಗೆದುಕೊಳ್ಳಲಿಲ್ಲ ಎಂದು ಮರುಪ್ರಶ್ನಿಸಿದರು. ರಾಜ್ಯಪಾಲರ ಪತ್ರವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯಪಾಲರ ನಡೆಗೆ ಸಂಬಂಧಿಸಿದಂತೆ ಮಾನ್ಯ ರಾಷ್ಟ್ರಪತಿಗಳಿಗೆ ದೂರು ಕೊಡುವ ವಿಚಾರ ಇದೆಯೇ ಎಂಬುದಕ್ಕೆ ಪ್ರತಿಕ್ರಯಿಸಿ, ರಾಜ್ಯಪಾಲರು ಸಣ್ಣ ವಿಷಯಗಳ ಬಗ್ಗೆ ಗಮನ ಕೊಡುತ್ತಿದ್ದಾರೆ. ಕನ್ನಡದಲ್ಲಿ ಸಹಿ ಮಾಡುತ್ತಿಲ್ಲವೆಂಬ ಸಣ್ಣ ವಿಷಯದ ಬಗ್ಗೆಯೂ ರಾಜ್ಯಪಾಲರು ಸರ್ಕಾರಕ್ಕೆ ಪತ್ರ ಬರೆದು ವರದಿ ಕೇಳುವ ಬಗ್ಗೆ ಪ್ರಸ್ತಾಪಿಸಿ, ಕನ್ನಡದಲ್ಲಿರುವ ಪತ್ರಗಳಿಗೆ ಕನ್ನಡದಲ್ಲಿ ಹಾಗೂ ಆಂಗ್ಲದಲ್ಲಿ ಪತ್ರಗಳಿಗೆ ಆಂಗ್ಲದಲ್ಲಿ ಸಹಿ ಮಾಡುವುದು ತಪ್ಪಲ್ಲ. ಇಂತಹ ಕ್ಷುಲ್ಲಕ ವಿಚಾರಗಳ ಬಗ್ಗೆ ರಾಜ್ಯಪಾಲರು ಉತ್ತರ ಕೇಳುವುದು ಸರಿಯಲ್ಲ ಎಂದು ತಿಳಿಸಿದರು.
ಇನ್ನೂ ಈ ವೇಳೆ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ರಾಜ್ಯಾಧ್ಯಕ್ಷರಾದ ಎಚ್.ಎಂ.ರೇವಣ್ಣ ಸೇರಿ ಹಲವು ಮುಖಂಡರು ಮತ್ತು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications