Siddaramaiah: 5 ವರ್ಷವೂ ನಾನೇ ಸಿಎಂ, ಇದರಲ್ಲಿ ಅನುಮಾನವೇನು? ಸಿದ್ದರಾಮಯ್ಯ ಸ್ಪಷ್ಟನೆ
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವು ಜೋರಾಗಿ ಚರ್ಚೆಯಾಗುತ್ತಿದೆ. ಇದು ಹೈಕಮಾಂಡ್ ನಾಯಕರವೆರೆಗೂ ಹೋಗಿದ್ದು, ಸಿಎಂ ಬದಲಾವಣೆ ವಿಚಾರದ ಬಗ್ಗೆ ಬಾಯಿ ಮುಚ್ಚಿಕೊಂಡಿರಬೇಕು ಎಂದು ಖಡಕ್ ಎಚ್ಚರಿಕೆಯೂ ನೀಡಲಾಗಿದೆ. ಕೆಲವರು ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈಗ ಇದೇ ವಿಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಮುಂದೆ ಯಾರು ಸಿಎಂ ಆಗಿರುತ್ತಾರೆ ಎಂಬುದನ್ನೂ ಅವರೇ ಸ್ಪಷ್ಟಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ ನಂದಿಬೆಟ್ಟದಲ್ಲಿ ಸಂಪುಟ ಸಭೆಗೂ ಮುನ್ನ ಭೋಗನಂದೀಶ್ವರ ದೇವಸ್ಥಾನದ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹೌದು ಐದು ವರ್ಷವೂ ನಾನೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ನಿಮಗೆ ಯಾಕೆ ಅನುಮಾನ ಬಂದಿದೆ? ನಮ್ಮ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಬಂಡೆಯಂತೆ ದೃಢವಾಗಿ ನಿಲ್ಲುತ್ತದೆ. ಬಿಜೆಪಿ ನಾಯಕರು ಹಗಲುಗನಸು ಕಾಣುತ್ತಿದ್ದಾರೆ. ಅವರು ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಬದಲಾಗಿ ಅವರು ಸುಳ್ಳು ನಿರೂಪಣೆಗಳಿಂದ ಜನರನ್ನು ಬೇರೆಡೆಗೆ ತಿರುಗಿಸುತ್ತಾರೆ ಎಂದು ಹರಿಹಾಯ್ದಿದ್ದಾರೆ.

ಇಲ್ಲಿ ಸಿಎಂ ಬಗ್ಗೆ ಬಗ್ಗೆ ಮಾತನಾಡಲು ಬಿಜೆಪಿ ಹಾಗೂ ಜೆಡಿಎಸ್‌ನವರು ನಮ್ಮ ಹೈಕಮಾಂಡಾ? ಆರ್.ಅಶೋಕ ಹಾಗೂ ವಿಜಯೇಂದ್ರ, ನಾರಾಯಣಸ್ವಾಮಿ ಬಿಜೆಪಿ ಪಕ್ಷದವರು. ಅವರು ಹೇಳಿದ ತಕ್ಷಣ ನಂಬುತ್ತೀರಾ? ಪರಿಶೀಲನೆ ಮಾಡಬೇಕಲ್ವಾ? ನಾನು ಹೇಳಿದ್ದನ್ನ ಬರೀರಿ ಎಂದು ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ.
ನಂದಿಬೆಟ್ಟದಲ್ಲಿ ನಡೆಯಲಿರುವ ವಿಶೇಷ ಸಂಪುಟ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಶ್ರೀಭೋಗ ನಂದೀಶ್ವರ ದೇವಸ್ಥಾನಕ್ಕೆ ಸಂಪುಟ ಸಹದ್ಯೋಗಿಗಳ ಜೊತೆ ಭೇಟಿ ನೀಡಿ ನಂದೀಶ್ವರನ ದರ್ಶನ ಪಡೆದು, ಪೂಜೆ ಸಲ್ಲಿಸಿದೆ. ನಾಡಿನಲ್ಲಿ ಮಳೆ, ಬೆಳೆ ಸಮೃದ್ಧಿಯಾಗಿ, ಸರ್ವರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನನ್ನ ಬಳಿ ಬೇರೆ ಆಯ್ಕೆಗಳಿಲ್ಲ: ಡಿಕೆಶಿ
ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ನನ್ನ ಮುಂದೆ ಬೇರೆ ಆಯ್ಕೆಗಳಿಲ್ಲ. ನಾನು ಸಿದ್ದರಾಮಯ್ಯ ಅವರ ಜೊತೆ ನಿಲ್ಲಬೇಕು, ಅವರನ್ನು ಬೆಂಬಲಿಸಬೇಕು. ಇದಕ್ಕೆ ನನ್ನ ಯಾವುದೇ ಅಭ್ಯಂತರವೂ ಇಲ್ಲ. ಪಕ್ಷ ಹಾಗೂ ಹೈಕಮಾಂಡ್ ಏನು ಹೇಳುತ್ತೋ? ಅವರು ಏನು ನಿರ್ಧಾರಗಳನ್ನು ತೆಗೆದುಕೊಳ್ತಾರೋ? ಅದೇ ನಡೆಯುತ್ತೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಲಕ್ಷಾಂತರ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ತರಲು ಶ್ರಮ ಪಟ್ಟಿದ್ದು, ಅವರ ಬಗ್ಗೆ ಯೋಚಿಸಬೇಕು ಎಂದಿದ್ದಾರೆ.
ಪಕ್ಷದಲ್ಲಿ ಶಿಸ್ತು ತುಂಬಾ ಮುಖ್ಯ. ಶಿಸ್ತು ಉಲ್ಲಂಘಿಸಿದವರಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದೂ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನನ್ನ ಹೆಸರು ಹೇಳಿ, ನನ್ನನ್ನು ಸಿಎಂ ಮಾಡಿ ಎಂದು ಹೇಳುವ ಅವಶ್ಯಕತೆಯಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಇರುವಾಗ ಬೇರೆ ಹೆಸರು ಏಕೆ? ನಾನೊಬ್ಬನೇ ಪಕ್ಷ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನರು ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ ಎಂದು ಹೇಳಿದ್ದಾರೆ.












Click it and Unblock the Notifications