ಹಿಂದೂ ಎನ್ನುವುದು ಧರ್ಮವಲ್ಲ: ಲಿಂಗಾಯತವನ್ನು ಸ್ವತಂತ್ರ ಧರ್ಮವನ್ನಾಗಿ ಪರಿಗಣಿಸಲು ಡಾ. ಸಿದ್ದರಾಮ ಸ್ವಾಮೀಜಿ ಆಗ್ರಹ
ಧಾರವಾಡ, ಜುಲೈ 9: ಹಿಂದೂ ಎನ್ನುವುದು ಧರ್ಮವೇ ಅಲ್ಲ, ಲಿಂಗಾಯತವನ್ನು ಸ್ವತಂತ್ರ ಧರ್ಮವೆಂದು ಸರ್ಕಾರ ಘೋಷಿಸಲಿ ಎಂದು ಗದಗ ತೊಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಧಾರವಾಡದ ಸಿದ್ಧರಾಮೇಶ್ವರ ಕಾಲೇಜಿನಲ್ಲಿ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಸಭೆ ಬಳಿಕ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಮಾನ್ಯಾ ಮಾಡಬೇಕು, ನಾವು ಹಿಂದೂ ವಿರೋಧಿಗಳಲ್ಲ, ಜೈನರು, ಸಿಖ್ಖರು, ಬೌದ್ಧರು ಹಿಂದೂ ವಿರೋಧಿಗಳಲ್ಲ, ಹಿಂದೂ ಎನ್ನುವುದು ಧರ್ಮವೇ ಅಲ್ಲ" ಎಂದು ಅಚ್ಚರಿಯ ಹೇಳಿಕೆ ನೀಡಿದರು.

"ಹಿಂದೂ ಎನ್ನುವುದು ಒಂದು ಜೀವನ ಮಾರ್ಗ. ಒಂದು ಧರ್ಮ ಆಗಬೇಕು ಎಂದರೆ ಅದಕ್ಕೆ ಒಬ್ಬರು ಸ್ಥಾಪಕರು ಇರಬೇಕು. ಅದರದ್ದೇ ಆದ ಸಂವಿಧಾನ ಇರಬೇಕು, ಒಂದೇ ದೇವರನ್ನು ಪೂಜಿಸುವಂತಹವರು ಆಗಿರಬೇಕು, ಹಿಂದೂ ಪದ ಇದಕ್ಕೆ ಅನ್ವಯಿಸಲ್ಲ" ಎಂದು ಹೇಳಿದರು.
ಲಿಂಗಾಯತ ಸ್ವತಂತ್ರ ಧರ್ಮ
"ಲಿಂಗಾಯತ ಎನ್ನುವುದು ಒಂದು ಸ್ವತಂತ್ರ ಧರ್ಮ. ಬಸವಣ್ಣ ಈ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ವಚನಗಳು ಲಿಂಗಾಯತ ಧರ್ಮದ ಸಂವಿಧಾನ. ನಾವು ಇಷ್ಟಲಿಂಗವನ್ನು ಪೂಜೆ ಮಾಡುವವರು. ಹಿಂದೂ ಧರ್ಮದಲ್ಲಿ ಯಾವುದೇ ಪ್ರವಾದಿ, ಪ್ರವರ್ತಕ ಇಲ್ಲ. ಅದಕ್ಕೆ ನಿರ್ದಿಷ್ಟ ಗ್ರಂಥ, ದೇವರು ಇಲ್ಲ, 33 ಕೋಟಿ ದೇವತೆಗಳನ್ನು ಪೂಜೆ ಮಾಡುತ್ತಾರೆ. ಅದು ವೈದಿಕ ಧರ್ಮ ಅದಕ್ಕೆ ಈಗ ಹಿಂದೂ ಧರ್ಮ ಎಂದು ಕರೆಯಲಾಗುತ್ತಿದೆ" ಎಂದು ಸ್ಪಷ್ಟನೆ ನೀಡಿದರು.
"ಭಗವದ್ಗೀತೆಯನ್ನು ಹಿಂದೂ ಧರ್ಮಿಯರ ಪವಿತ್ರ ಗ್ರಂಥ ಎನ್ನುತ್ತಾರೆ ಆದರೆ ಭಗವದ್ಗೀತೆ 18 ಅಧ್ಯಾಯಗಳಲ್ಲಿ ಎಲ್ಲೂ ಕೂಡ ಹಿಂದೂ ಎನ್ನುವ ಶಬ್ದವನ್ನು ಬಳಸಿಲ್ಲ. ವೇದ, ಉಪನಿಷತ್‌ಗಳಲ್ಲಿ ಕೂಡ ಹಿಂದೂ ಎನ್ನುವ ಶಬ್ದವನ್ನು ಉಲ್ಲೇಖಿಸಿಲ್ಲ. ಹಿಂದೂ ಎನ್ನುವುದು ಒಂದು ಜೀವನ ಮಾರ್ಗ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆದರೆ ಹಿಂದೂ ಧರ್ಮದ ವಿರೋಧಿಗಳಾಗಲ್ಲ." ಎಂದು ಹೇಳಿದರು.
"ಲಿಂಗಾಯತ ಸ್ವತಂತ್ರ ಧರ್ಮವಾಗಬೇಕು, ಧರ್ಮದ ಮಾನ್ಯತೆ ಕೊಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಮತ್ತೆ ಪ್ರಸ್ತಾವನೆ ಸಲ್ಲಿಸಬೇಕು" ಎಂದು ಒತ್ತಾಯಿಸಿದರು.
"ಲಿಂಗಾಯತ ಒಂದು ಅವೈದಿಕ ಧರ್ಮ, ಇಲ್ಲಿನ ಒಳಪಂಗಡ, ಸಾಮಾಜಿಕ, ಆರ್ಥಿಕತೆಯ ಬಗ್ಗೆ ಅಧ್ಯಯನಗಳು ನಡೆಯಬೇಕು. ಲಿಂಗಾಯತರನ್ನು ಕೇಂದ್ರ, ರಾಜ್ಯ ಸರ್ಕಾರಗಳು ಹಿಂದುಳಿದ ಪಟ್ಟಿಗೆ ಸೇರಿಸಬೇಕು. ವೀರಶೈವ ಲಿಂಗಾಯತ ಒಂದೇ ಎನ್ನುವುದಕ್ಕೆ ಯಾವುದೇ ದಾಖಲೆ ಇಲ್ಲ, ವೀರಶೈವವೇ ಬೇರೆ ಲಿಂಗಾಯತವೇ ಬೇರೆ" ಎಂದು ಹೇಳಿದರು.
"12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪನೆ ಮಾಡಿರುವುದು ಲಿಂಗಾಯತ ಧರ್ಮ. 2016ರಲ್ಲೇ ಸ್ವತಂತ್ರ ಧರ್ಮ ಮಾಡುವಂತೆ ಹೋರಾಟ ಮಾಡಿದ್ದೆವು. ಇನ್ನು ಮುಂದೆಯೂ ಹೋರಾಟ ಮುಂದುವರೆಯಲಿದೆ." ಎಂದು ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ
2016ರಲ್ಲಿ ಹೋರಾಟ ಮಾಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. ನ್ಯಾ. ನಾಗಮೋಹನದಾಸ ನೇತೃತ್ವದಲ್ಲಿ ಆಯೋಗ ರಚನೆ ಮಾಡಿ ವರದಿ ಪಡೆದುಕೊಂಡಿದ್ದರು. ವಿಸ್ತೃತ ವರದಿಯನ್ನು ಸಚಿವ ಸಂಪುಟದಲ್ಲಿ ಪ್ರಸ್ತಾಪಿಸಿ ಲಿಂಗಾಯತ ಸ್ವತಂತ್ರ ಧರ್ಮವಾಗಲು ಅರ್ಹ ಎಂದು ನಿಶ್ಚಯಿಸಲಾಗಿತ್ತು. ಈ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಲಾಗಿತ್ತು, ಆದರೆ ಕೇಂದ್ರ ಸರ್ಕಾರ ವರದಿಯನ್ನು ಪರಿಶೀಲನೆ ಕೂಡ ಮಾಡದೆ ವಾಪಸ್ ಕಳುಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗ ಮತ್ತೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ರಾಜ್ಯ ಸರ್ಕಾರ ಮತ್ತೆ ಈ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಬೇಕು. ಕೇಂದ್ರ ಸರ್ಕಾರ ಕೊಟ್ಟಿದ್ದ ಕಾರಣಕ್ಕೆ ಸೂಕ್ತ ಟಿಪ್ಪಣಿ ಕೊಟ್ಟಿದ್ದೇವೆ. ಈಗ ಮತ್ತೆ ರಾಜ್ಯ ಸರ್ಕಾರಕ್ಕೆ ಮನವಿ ಕೊಡುತ್ತೇವೆ, ಕೇಂದ್ರ ಸರ್ಕಾರಕ್ಕೂ ಮತ್ತೆ ಮನವಿ ಕೊಡುತ್ತೇವೆ ಎಂದು ಹೇಳಿದರು.












Click it and Unblock the Notifications