Siddaganga Mutt: ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿ ಶಾಕಿಂಗ್ ಹೇಳಿಕೆ!
ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಆರೋಪಿಯನ್ನು ಪತ್ತೆ ಮಾಡಲಾಗಿದ್ದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದ ಕಾರಣವನ್ನು ತಿಳಿಸಿದ್ದಾನೆ. ಆರೋಪಿ ಕೊಟ್ಟ ಕಾರಣ ಹೇಳಿ ಒಂದು ಕ್ಷಣ ಪೊಲೀಸರು ಶಾಕ್ ಆಗಿದ್ದಾರೆ.
ಹೌದು... ರಾಜ್ ಶಿವು ಎಂಬ ಆರೋಪಿಯನ್ನು ಈ ಘಟನೆ ಸಂಬಂಧ ಪೊಲೀಸರು ಬಂದಿಸಿದ್ದಾರೆ. ಈತ ಗಿರಿನಗರದ ಬಳಿಯ ವೀರಭದ್ರನಗರ ಬಸ್ ನಿಲ್ದಾಣದ ಬಳಿ ಇರುವ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿದ್ದನು. ಯೇಸು ಕನಸಲ್ಲಿ ಬಂದು ಈ ಪುತ್ಥಳಿಯನ್ನು ಒಡೆಯಲು ಹೇಳಿದ್ದರಂತೆ. ಹೀಗಾಗಿ ತಾನು ಪುತ್ಥಳಿಗೆ ಹಾನಿ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಬ್ಯಾಡರಹಳ್ಳಿಯಲ್ಲಿ ವಾಸಿಸುವ ಆರೋಪಿ ಶಿವು ಕಳೆದ ಏಳು ವರ್ಷಗಳಿಂದ ಹಿಂದೂ ಧರ್ಮವನ್ನು ಬಿಟ್ಟು ಕ್ರೈಸ್ತ ಧರ್ಮವನ್ನು ಅನುಸರಿಸುತ್ತಿದ್ದಾನೆ. ಮತಾಂತರದ ಬಳಿಕ ಹಿಂದೂಗಳನ್ನು ದ್ವೇಷ ಮಾಡಲು ಆರಂಭಿಸಿದ ಶಿವು ಕ್ರೈಸ್ತ ಧರ್ಮದ ಪ್ರಚಾರ ಮಾಡುತ್ತಿದ್ದನು. ಕಳೆದ ಕೆಲ ದಿನಗಳಿಂದ ವಿಚಿತ್ರವಾಗಿ ಆಡುತ್ತಿದ್ದ ಶಿವು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿಗೆ ಹಾನಿ ಮಾಡಿದ್ದಾನೆ.
ಘಟನೆ ನಡೆದಿದ್ದು ಯಾವಾಗ?
ಕಳೆದ ಶನಿವಾರ ರಾತ್ರಿ ಸುತ್ತಿಗೆ ತೆಗೆದುಕೊಂಡು ಬಂದ ಆರೋಪಿ ಶಿವು ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ಒಡೆದು ಎಸ್ಕೇಪ್ ಆಗಿದ್ದನು. ಕೂಡಲೇ ಆರೋಪಿಯನ್ನು ಪತ್ತೆಹಚ್ಚಿ ಅವರ ಮೇಲೆ ಕಾನೂನಿನ ಕ್ರಮಕ್ಕೆ ಮುಂದಾಗಬೇಕೆಂದು ಒತ್ತಾಯಿಸಿ ಸುವರ್ಣ ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದೆ.
ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿರುವ ಶ್ರೀಗಳನ್ನು ಪ್ರತಿಯೊಬ್ಬರೂ ಭಕ್ತಿಯಿಂದ ಗೌರವಿಸುತ್ತಾರೆ. ಶ್ರೀಗಳಿಗೆ ಈ ಅಪಚಾರವೆಸಗಿರುವುದು ದಿಗ್ಬ್ರಮೆ ತರುವ ವಿಷಯವಾಗಿದೆ ಎಂದು ಘಟನೆ ಬಳಿಕ ಸಂಘಟನೆಯ ರಾಜ್ಯಾಧ್ಯಕ್ಷ ಮೋಹನ್‌ಕುಮಾರ್ ಬಸವರಾಜ ಬಸವ, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಅಲ್ಲದೆ ವಿಜಯನಗರ ವಿಧಾನಸಭಾ ಕ್ಷೇತ್ರದ ವೀರಭದ್ರ ನಗರದಲ್ಲಿರುವ ಪುತ್ತಳಿ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವುದರಿಂದ ಇಲ್ಲಿ ದೂರು ದಾಖಲಿಸಲಾಗಿತ್ತು.
ಪುತ್ಥಳಿ ಹಾನಿಗೊಳಿಸಿದ ಸುದ್ದಿ ಗೊತ್ತಾಗುತ್ತಿದ್ದಂತೆ ಶ್ರೀಗಳ ಅಸಂಖ್ಯಾತ ಭಕ್ತರಿಂದ ಆಕ್ರೋಶ ವ್ಯಕ್ತವಾಗಿತ್ತು. ಮಂಡ್ಯದ ಕಾಯಕಯೋಗಿ ಫೌಂಡೇಶನ್‌ನ ಅಧ್ಯಕ್ಷ ಎಂ. ಶಿವಕುಮಾರ್ ಅವರು ಘಟನೆಯನ್ನು ಖಂಡಿಸಿದ್ದರು. 'ಕೋಟ್ಯಾಂತರ ಭಕ್ತರ ಭಾವಕೋಶದಲ್ಲಿ ನೆಲೆಯಾಗಿರುವ ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹ ಮೂರ್ತಿ ಪರಮಪೂಜ್ಯ ಸಿದ್ದಗಂಗಾ ಶ್ರೀಗಳ ಪುತ್ಥಳಿ ವಿರೂಪಗೊಳಿಸಿರುವವರನ್ನು ಬಂಧಿಸಿ ಕಾನೂನು ಕ್ರಮ ಜರಿಗಿಸಬೇಕು. ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾದರೆ ಶ್ರೀಗಳ ಭಕ್ತರು ಕೆರಳುವುದರಲ್ಲಿ ಅನುಮಾನವೇ ಇಲ್ಲ' ಎಂದಿದ್ದರು.
ಹೀಗೆ ಪೊಲೀಸರ ಮೇಲೆ ಒತ್ತಡ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆ ಆರೋಪಿ ಘಟನೆಗೆ ಕಾರಣವನ್ನು ಹೇಳಿದ್ದು, 'ಯೇಸು ಕನಸಿನಲ್ಲಿ ಬಂದು ಪುತ್ಥಳಿ ಒಡೆದು ಹಾಕುವಂತೆ ಸೂಚಿಸಿದ್ದರಿಂದ ಸಿದ್ದಗಂಗಾ ಮಠದ ಶಿವಕುಮಾರಸ್ವಾಮಿ ಪುತ್ಥಳಿ ವಿರೂಪಗೊಳಿಸಿರುವುದಾಗಿ' ಹೇಳಿಕೊಂಡಿದ್ದಾನೆ. ಇದಕ್ಕೆ ಶ್ರೀಗಳ ಭಕ್ತರು ಆಕ್ರೋಶಗೊಂಡಿದ್ದು ಆರೋಪಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications