Shivaraj Tangadagi Profile: ಗೆದ್ದಾಗಲೆಲ್ಲಾ ಸಚಿವ ಸ್ಥಾನ ಪಡೆಯುತ್ತಿರುವ ಶಿವರಾಜ ತಂಗಡಗಿ!
ಕನಕಗಿರಿ ಎಸ್‌ಸಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಶಿವರಾಜ್ ಸಂಗಪ್ಪ ತಂಗಡಗಿ ಈ ಹಿಂದೆ ಗೆದ್ದ ಎರಡು ಬಾರಿಯೂ ಮಂತ್ರಿಗಿರಿ ಭಾಗ್ಯ ಪಡೆದ ಅದೃಷ್ಟವಂತ ರಾಜಕಾರಣಿ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದರೂ ಸಚಿವ ಸ್ಥಾನ ಅವರನ್ನು ಹುಡುಕಿಕೊಂಡು ಬಂದಿತ್ತು. ಅದಾದ ಬಳಿಕ ಆದ ರಾಜಕೀಯ ಸ್ಥಿತ್ಯಂತರಗಳಿಂದ ಕಾಂಗ್ರೆಸ್ ಸೇರಿದ ಶಿವರಾಜ್ ತಂಗಡಗಿ ಕಾಂಗ್ರೆಸ್‌ನಿಂದಲೂ ಗೆದ್ದು ಸಚಿವರಾಗಿದ್ದರು. ಈಗ ಮೂರನೇ ಬಾರಿ ಕನಕಗಿರಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದು, ಮತ್ತೊಂದು ಬಾರಿ ಸಚಿವ ಸ್ಥಾನದ ಭಾಗ್ಯ ಒಲಿದು ಬಂದಿದೆ.
ಭೋವಿ ಸಮಾಜಕ್ಕೆ ಸೇರಿರುವ ಶಿವರಾಜ ತಂಗಡಗಿ ಅವರ ತಂದೆ ಸಂಗಪ್ಪ ತಂಗಡಗಿ ತಾಯಿ ಹುಲಿಗೆಮ್ಮ ಅವರಾಗಿದ್ದು, ಶಿವರಾಜ ತಂಗಡಗಿ ಅವರು ಜೂನ್ 10, 1971ರಲ್ಲಿ ಜನಿಸಿದ್ದಾರೆ. ವಿದ್ಯಾ ಎಂಬುವವರನ್ನು ವಿವಾಹವಾಗಿದ್ದು, ಶಶಾಂಕ್, ಕಿರಣ್ ಹಾಗೂ ತನುಶ್ರೀ ಎಂಬ ಮೂರು ಮಕ್ಕಳನ್ನು ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಲಕಲ್‌ನ ಎಸ್‌ವಿಎಂ ಕಾಲೇಜಿನಲ್ಲಿ 1992ರಲ್ಲಿ ಬಿಎಸ್‌ಸಿ ಪದವಿಯನ್ನು ಪಡೆದಿದ್ದಾರೆ.

ರಾಜಕೀಯ ಜೀವನ: 2008ರ ವಿಧಾನಸಭಾ ಚುನಾವಣೆಯಲ್ಲಿ ಕನಕಗಿರಿ ಕ್ಷೇತ್ರದಿಂದ ಪಕ್ಷೇತರರಾಗಿ ಶಿವರಾಜ್ ತಂಗಡಿಗಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸುತ್ತಾರೆ. ಆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಟಿಕೆಟ್ ನಿರಾಕರಿಸಿದಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಚನೆಯಾದ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರು ಆಗಿದ್ದರು.
ಬಿಎಸ್ ಯಡಿಯೂರಪ್ಪ ಅವರ ಕ್ಯಾಬಿನೆಟ್‌ನಲ್ಲಿ ಸುಮಾರು 3 ವರ್ಷ 2 ತಿಂಗಳು ವಿವಿಧ ಖಾತೆಗಳನ್ನು ಶಿವರಾಜ್ ತಂಗಡಗಿ ನಿರ್ವಹಿಸಿದ್ದರು. ಮೊದಲು ಕೃಷಿ ಮಾರುಕಟ್ಟೆ, ಸಕ್ಕರೆ ಖಾತೆಯ ಸಚಿವರಾಗಿದ್ದರು. 2 ವರ್ಷ ನಾಲ್ಕು ತಿಂಗಳ ಬಳಿಕ ಸಕ್ಕರೆ ಖಾತೆಯ ಬದಲಾಗಿ ಸಣ್ಣ ಕೈಗಾರಿಕಾ ಖಾತೆಯನ್ನು ನೀಡಲಾಗಿತ್ತು.

ಆದರೆ, 2010ರಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂದು ಅಂದಿನ ಸ್ಪೀಕರ್ ಕೆಜೆ ಬೋಪಯ್ಯ ಶಿವರಾಜ್ ತಂಗಡಗಿ ಸೇರಿ ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿದ್ದರು. ಇದಲ್ಲದೇ 11 ಬಿಜೆಪಿ ಶಾಸಕರು ಕೂಡ ಅನರ್ಹರಾಗಿದ್ದರು. ಆಗ ಸುಪ್ರೀಂ ಕೋರ್ಟ್ 2011 ಮೇ 13ರಂದು ಶಾಸಕರ ಅನರ್ಹತೆಯನ್ನು ರದ್ದುಮಾಡಿತ್ತು. ಬಳಿಕ ಪಕ್ಷೇತರ ಶಾಸಕರಾಗಿ ಉಳಿದ ಶಿವರಾಜ್ ತಂಗಡಗಿ 2013ರ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರಿದ್ದರು.
2013ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಶಿವರಾಜ್ ತಂಗಡಗಿ ಗೆಲ್ಲುವುದರ ಮೂಲಕ ಸತತ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, 2016ರ ಜೂನ್‌ನಲ್ಲಿ ಶಿವರಾಜ್ ತಂಗಡಗಿ ಅವರನ್ನು ಸಿದ್ದರಾಮಯ್ಯ ಸಂಪುಟದಿಂದ ಕೈಬಿಡಲಾಗಿತ್ತು.
ಬಳಿಕ 2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶಿವರಾಜ್ ತಂಗಡಗಿ ಬಿಜೆಪಿ ಅಭ್ಯರ್ಥಿ ಬಸವರಾಜ ದಡೇಸುಗೂರು ವಿರುದ್ಧ ಸೋಲು ಅನುಭವಿಸಿದರು. ಇದಾದ ಬಳಿಕ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಿದ್ದರು. ಈ ಸಲದ 2023ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.












Click it and Unblock the Notifications