ನಟ ಶಿವರಾಜ್ ಕುಮಾರ್‌ ಗೆ SIR ನೋಟಿಸ್: ಜಿಲ್ಲಾಡಳಿತದಿಂದ ಬಂತು ಸ್ಪಷ್ಟನೆ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅವರಿಗೆ ವಿಚಾರಣಾ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ಬೆಂಗಳೂರು ನಗರ ಜಿಲ್ಲಾಡಳಿತ ಸ್ಪಷ್ಟನೆ ನೀಡಿದೆ. ನಟ ಶಿವರಾಜ್ ಕುಮಾರ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜು ಪಿ.ಎಸ್. ತಿಳಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ಅದರಂತೆ 2026ರ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಹಾಗೂ ಮತದಾರರ ವಿಚಾರಣೆ ನಡೆಯಲಿದೆ.

shivaraj kumar Not Served Special Intensive Revision Notice Bengaluru DC Clarifies No Mapping Confusion

'No Mapping' ಕಾರಣಕ್ಕೆ ಸಾಫ್ಟ್‌ವೇರ್‌ನಲ್ಲಿ ನೋಟಿಸ್ ಸೃಷ್ಟಿ

152-ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರಾಗಿರುವ ನಟ ಶಿವರಾಜ್ ಕುಮಾರ್ ಅವರು ತಮ್ಮ ಗಣತಿ ನಮೂನೆಯಲ್ಲಿ 2002ರ ಹಿಂದಿನ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ನೀಡದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್‌ನಲ್ಲಿ 'No Mapping' ಎಂದು ಗುರುತಿಸಲಾಗಿದೆ.

ಈ ಕಾರಣದಿಂದ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ವಿಚಾರಣಾ ನೋಟಿಸ್ ಸೃಷ್ಟಿಯಾಗಿದೆ. ಇದನ್ನೇ ಆಧಾರವಾಗಿಸಿಕೊಂಡು ನಟರಿಗೆ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಹರಡಿದೆ. ಆದರೆ ವಾಸ್ತವವಾಗಿ ಅವರಿಗೆ ಯಾವುದೇ ನೋಟಿಸ್ ಜಾರಿಗೊಳಿಸಿಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

shivaraj kumar:ಶಿವರಾಜ್ ಕುಮಾರ್ VIP ಮತದಾರ

ನಟ ಶಿವರಾಜ್ ಕುಮಾರ್ ಅವರನ್ನು ಈಗಾಗಲೇ VIP ಮತದಾರ ಎಂದು ಗುರುತಿಸಲಾಗಿರುವ ಹಿನ್ನೆಲೆಯಲ್ಲಿ ಅವರಿಗೆ ವಿಚಾರಣಾ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಸಂಬಂಧ ಚುನಾವಣಾ ಅಧಿಕಾರಿಗಳು ನಟರನ್ನು ಸಂಪರ್ಕಿಸಿದ್ದು, ಶಿವರಾಜ್ ಕುಮಾರ್ ಅವರು ತಮ್ಮ ಪಾಸ್‌ಪೋರ್ಟ್ ಪ್ರತಿಯನ್ನು ನೀಡಿದ್ದಾರೆ. ಪಾಸ್‌ಪೋರ್ಟ್‌ನಲ್ಲಿ ಅವರ ಹೆಸರು 'ಶಿವಪುಟ್ಟಸ್ವಾಮಿ ಬಿನ್ ಮುತ್ತುರಾಜ್' ಎಂದು ನಮೂದಾಗಿದ್ದು, ಇದೇ ಹೆಸರನ್ನು ಮತದಾರರ ಪಟ್ಟಿಯಲ್ಲೂ ನಮೂದಿಸುವಂತೆ ಅವರು ಮನವಿ ಮಾಡಿದ್ದಾರೆ.

shivaraj kumar:ನಿವಾಸಕ್ಕೆ ತೆರಳಿ ಅಧಿಕಾರಿಗಳಿಂದ ಪರಿಶೀಲನೆ

ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಕಾಂತರಾಜು ಪಿ.ಎಸ್., ಬೆಂಗಳೂರು ಉತ್ತರ ನಗರ ಪಾಲಿಕೆಯ ಜಂಟಿ ಆಯುಕ್ತರು, 152-ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ಬಿಎಲ್‌ಒ ಮೇಲ್ವಿಚಾರಕರು ಸೇರಿದಂತೆ ಅಧಿಕಾರಿಗಳ ತಂಡ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದಲ್ಲಿರುವ ನಟರ ನಿವಾಸಕ್ಕೆ ತೆರಳಿದ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಬದಲಾವಣೆ

ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ನಟ ಶಿವರಾಜ್ ಕುಮಾರ್ ಅವರ ಮನವಿಯಂತೆ ನಮೂನೆ-8ರ ಮೂಲಕ 'ಶಿವಪುಟ್ಟಸ್ವಾಮಿ ಬಿನ್ ಮುತ್ತುರಾಜ್' ಎಂಬ ಹೆಸರನ್ನು ಮತದಾರರ ಪಟ್ಟಿಯಲ್ಲಿ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಹೀಗಾಗಿ, SIR ಪ್ರಕ್ರಿಯೆಯಲ್ಲಿ ಶಿವರಾಜ್ ಕುಮಾರ್ ಅವರಿಗೆ ವಿಚಾರಣಾ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ತಪ್ಪು ಮಾಹಿತಿ. 'No Mapping' ಕಾರಣಕ್ಕೆ ಸಾಫ್ಟ್‌ವೇರ್‌ನಲ್ಲಿ ನೋಟಿಸ್ ಸೃಷ್ಟಿಯಾಗಿದ್ದರೂ, ಅದನ್ನು ನಟರಿಗೆ ಜಾರಿಗೊಳಿಸಲಾಗಿಲ್ಲ ಎಂದು ಬೆಂಗಳೂರು ನಗರ ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಕಿಡಿ

ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿರುವ ಯುವ ಕಾಂಗ್ರೆಸ್, ದೇಶದ ಹಲವು ಗಣ್ಯರನ್ನೂ ಉಲ್ಲೇಖಿಸಿ 'ಇವರೂ ಭಾರತೀಯರಲ್ಲವೇ?' ಎಂಬ ಪ್ರಶ್ನೆಯನ್ನು ಮುಂದಿಟ್ಟಿದೆ.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, ಭಾರತೀಯ ಚುನಾವಣಾ ಆಯೋಗ ಅದ್ಯಾವಾಗನಿಂದ ಬಿಜೆಪಿಯ ಅಂಗಸಂಸ್ಥೆಯಾಯಿತೋ, ಅಂದಿನಿಂದಲೇ ಅವ್ಯವಸ್ಥೆಯ ಕೂಪವಾಯಿತು ಎಂದು ಕಿಡಿಕಾರಿದೆ. ಈ ಮೂಲಕ ಚುನಾವಣಾ ಆಯೋಗದ ಸ್ವಾಯತ್ತತೆ ಮತ್ತು ಅದರ ಕಾರ್ಯವೈಖರಿ ಕುರಿತು ರಾಜಕೀಯ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಪೋಸ್ಟ್‌ನಲ್ಲಿ ಭಾರತರತ್ನ ಪುರಸ್ಕೃತ ವಿಜ್ಞಾನಿ ಡಾ. ಸಿ.ಎನ್.ಆರ್. ರಾವ್ , ಪದ್ಮಭೂಷಣ ಪುರಸ್ಕೃತ ವೈದ್ಯ ಡಾ. ದೇವಿ ಶೆಟ್ಟಿ , ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ , ಹೆಸರಾಂತ ವೈದ್ಯ ಡಾ. ಬಿ.ಎಂ. ಹೆಗ್ಡೆ, ಉದ್ಯಮಿಗಳಾದ ನಂದನ್ ನಿಲೇಕಣಿ, ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.

ಈ ಗಣ್ಯರೆಲ್ಲರೂ ಭಾರತೀಯರಾಗಿದ್ದರೂ ತಮ್ಮ ಭಾರತೀಯತೆಯನ್ನು ಸಾಬೀತುಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಅರ್ಥದಲ್ಲಿ ಯುವ ಕಾಂಗ್ರೆಸ್ ಪ್ರಶ್ನೆ ಎತ್ತಿದೆ. "ಇವರು ಭಾರತೀಯರಲ್ಲವಂತೆ, ತಮ್ಮ ಭಾರತೀಯತೆಯನ್ನು ಸಾಬೀತುಪಡಿಸಬೇಕಂತೆ. ಇದಕ್ಕಿಂತ ಅವಮಾನ ಇನ್ನೊಂದು ಇದೆಯಾ?" ಎಂದು ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+