ಶಿವಮೊಗ್ಗ ಗಲಾಟೆ: 60 ಮಂದಿ ಬಂಧನ, 24 FIR ದಾಖಲು
ಶಿವಮೊಗ್ಗ, ಅಕ್ಟೋಬರ್ 03: ಜಿಲ್ಲೆಯ ಶಾಂತಿನಗರದ ರಾಗಿಗುಡ್ಡದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪರಿಸ್ಥಿತಿ ಉದ್ವಿಗ್ನ ಗೊಂಡಿತು. ನಾಲ್ವರು ಗಾಯಗೊಂಡ ಘಟನೆ ನಡೆದ ಬಳಿಕ ಸುಮಾರು 60 ಮಂದಿಯನ್ನು ಸೋಮವಾರ ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಅನೇಕ ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧಾರ್ಮಿಕ ಕಾರ್ಯಕ್ರಮಗಳ ವೇಳೆ ಗೊಂದಲ ಸೃಷ್ಟಿಸುವುದು ಮತ್ತು ಕಲ್ಲು ತೂರಾಟ ನಡೆಸುವುದು ಕಾನೂನಿಗೆ ವಿರುದ್ಧವಾಗಿದೆ. ಇಂತಹ ಘಟನೆಗಳನ್ನು ತಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ತಿಳಿಸಿದರು.

ಇತ್ತ ಗೃಹ ಸಚಿವರಾದ ಜಿ.ಪರಮೇಶ್ವರ ಅವರು, ಶಿವಮೊಗ್ಗದ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಮುಂದಿನ ಆದೇಶದವರೆಗೆ ಇಡೀ ನಗರಕ್ಕೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ.
ಮನೆಗಳಿಗೂ ಹಾನಿ, ವಾಹನಗಳು ಜಖಂ
ಕಿಡಿಗೇಡಿಗಳ ಗುಂಪು ಕಲ್ಲೆಸೆತದ ಘಟನೆ ಭಾನುವಾರ ನಡೆಯತು. ಈ ಹಿಂಸಾಚಾರದಲ್ಲಿ ನಾಲ್ಕು ಚಕ್ರದ ವಾಹನ, ಆಟೋರಿಕ್ಷಾ ಹಾಗೂ ಎರಡು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಹಲವರ ಮನೆಗಳಿಗೆ ಕಲ್ಲು ಎಸೆದು ಮನೆ ಕಿಟಕಿಗಳು, ಗಾಜುಗಳು ಹಾನಿ ಆಗಿವೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಪೂರ್ವ ವಲಯದ ಐಜಿಪಿ ತ್ಯಾಗರಾಜನ್ ಅವರು ಪಟ್ಟಣದಲ್ಲಿ ಪರಿಸ್ಥಿತಿ ಹದಗೆಡದಂತೆ ಕಟ್ಟೆಚ್ಚರ ವಹಿಸಿದ್ದಾರೆ. ವಾಣಿಜ್ಯ ಪ್ರದೇಶಗಳಲ್ಲಿ, ಮುಖ್ಯವಾಗಿ ಗಾಂಧಿ ಬಜಾರ್ ಮತ್ತು ನೆಹರು ರಸ್ತೆಯಲ್ಲಿ ವ್ಯಾಪಾರ ಸಂಸ್ಥೆಗಳು ಬಂದ್ ಆಗಿದ್ದವು. ಯಾವುದೇ ವ್ಯಾಪಾರ ವಹೀವಾಟು ನಡೆದಿಲ್ಲ.
ತಪ್ಪಿತಸ್ಥರ ವಿರುದ್ಧ 24 FIR ದಾಖಲು
ಇನ್ನೂ ಘಟನೆಗೆ ಕಾರಣವಾದವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಒಟ್ಟು ಸುಮಾರು 24 FIRಗಳು ದಾಖಲಾಗಿವೆ. ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಅವರು ರಾಗಿಗುಡ್ಡದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಗಿಗುಡ್ಡದಲ್ಲಿ ಇನ್ನೂ ಕೆಲವು ದಿನಗಳ ಕಾಲ ಪೊಲೀಸ್ ಬಂದೋಬಸ್ತ್, ಬಿಗಿ ಕ್ರಮಗಳು ಜಾರಿಯಲ್ಲಿರಲಿವೆ ಎಂದರು.
ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಖ್ಯಸ್ಥರು ಮತ್ತು ಸದಸ್ಯರು ಎಸ್‌ಪಿ ಅವರನ್ನು ಸಂಪರ್ಕಿಸಿದ್ದಾರೆ. ತಮ್ಮ ವ್ಯವಹಾರಗಳನ್ನು ಮಾಡಲು ಪೊಲೀಸ್ ಇಲಾಖೆಗೆ ಅವಕಾಶ ನೀಡುವಂತೆ ಕೇಳಿದ್ದಾರೆ.












Click it and Unblock the Notifications