ಅಗತ್ಯವಿದ್ದರೆ ಶೀರೂರು ಶ್ರೀಗಳ ಸಾವಿನ ಬಗ್ಗೆ ತನಿಖೆ : ಕುಮಾರಸ್ವಾಮಿ
ಬೆಂಗಳೂರು, ಜುಲೈ 19 : 'ಉಡುಪಿಯ ಶೀರೂರು ಲಕ್ಷ್ಮೀವರ ತೀರ್ಥರ ಸಾವಿನ ಬಗ್ಗೆ ಅಗತ್ಯ ಎನಿಸಿದರೆ ತನಿಖೆಗೆ ಅದೇಶ ನೀಡಲಾಗುತ್ತದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಕೆಲವು ವ್ಯಕ್ತಿಗಳು ಲಕ್ಷ್ಮೀವರ ತೀರ್ಥರ ಸಾವು ಅಸಹಜ ಎಂದು ಹೇಳುತ್ತಿದ್ದಾರೆ. ಅಗತ್ಯ ಎಂದು ಅನ್ನಿಸಿದರೆ ತನಿಖೆಗೆ ಆದೇಶಿಸುತ್ತೇವೆ' ಎಂದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು, 'ಲಕ್ಷ್ಮೀವರ ತೀರ್ಥರ ಸಾವಿಗೆ ವಿಷ ಪ್ರಾಶನ ಕಾರಣ ಎಂದು ಕೆಲವರು ಆರೋಪ ಮಾಡುತ್ತಿದ್ದಾರೆ. ಆದರೆ, ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ' ಎಂದು ಸ್ಪಷ್ಟಪಡಿಸಿದರು.

ಉಡುಪಿಯ ಶೀರೂರು ಲಕ್ಷ್ಮೀವರ ತೀರ್ಥರು ಗುರುವಾರ ಬೆಳಗ್ಗೆ ಮಣಿಪಾಲಿನ ಕಸ್ತೂರ ಬಾ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಸದ್ಯ, ಮರಣೋತ್ತರ ಪರೀಕ್ಷೆ ನಡೆಸಿ ಮಠದ ಸಿಬ್ಬಂದಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.
ಸಹಜ ಸಾವು : ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಪೇಜಾವರ ಶ್ರೀಗಳು, 'ಶೀರೂರು ಲಕ್ಷ್ಮೀವರ ತೀರ್ಥರ ಅಗಲಿಕೆ ದುಖಃ ತಂದಿದೆ. ವಿಷ ಪ್ರಾಶನದ ಬಗ್ಗೆ ಮಾಹಿತಿ ಇಲ್ಲ' ಎಂದು ಹೇಳಿದ್ದಾರೆ.
'ವಿಷ ನೀಡುವ ಪ್ರಮೇಯವೇ ಇಲ್ಲ. ಸ್ವಾಮೀಜಿಗಳನ್ನು ಯಾರೂ ಕೊಲೆ ಮಾಡುವುದಿಲ್ಲ. ಅರದ್ದು ಕೊಲೆ ಎಂಬುದು ಶುದ್ಧ ಸುಳ್ಳು. ಅವರದು ಸಹಜ ಸಾವು, ಸಾವಿನ ಬಗ್ಗೆ ಸಂಶಯ ಪಡುವುದು ಸರಿಯಲ್ಲ' ಎಂದರು.












Click it and Unblock the Notifications