ಶಿರಾಡಿ ಘಾಟ್ ರಸ್ತೆ ರಿಪೇರಿಗೆ ಹೊಸ ಡೆಡ್‌ಲೈನ್
ಹಾಸನ, ಜೂ. 08 : ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯ ಕಾಂಕ್ರಿಟ್ ಕಾಮಗಾರಿಯನ್ನು ಜೂನ್ 20ರೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಹೇಳಿದ್ದಾರೆ. ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಯಿತು ಎಂದು ಅವರು ತಿಳಿಸಿದ್ದಾರೆ.
ಹಾಸನದಲ್ಲಿ ಭಾನುವಾರ ಮಾತನಾಡಿದ ಸಚಿವ ಎಚ್.ಸಿ.ಮಹಾದೇವಪ್ಪ ಅವರು, ಶಿರಾಡಿ ಘಾಟ್‌ನ ಒಟ್ಟು 26 ಕಿ.ಮೀ ಉದ್ದದ ರಸ್ತೆಯನ್ನು 13 ಕಿ.ಮೀ ನಂತೆ ಎರಡು ಭಾಗಗಳನ್ನಾಗಿ ಮಾಡಿಕೊಂಡು ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಕೆಂಪುಹೊಳೆ ಚೆಕ್‌ಪೋಸ್ಟ್‌ನಿಂದ ಮಾರನಹಳ್ಳಿವರೆಗಿನ 13 ಕಿ.ಮೀ ರಸ್ತೆಯ ಕಾಮಗಾರಿ ನಡೆಯುತ್ತಿದೆ ಎಂದರು. [ಶಿರಾಡಿ ಘಾಟ್ ಕಾಮಗಾರಿ ಚಿತ್ರಗಳು]

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗಿದೆ. ಮಳೆಯಿಂದಾಗಿ ಸುಮಾರು 20 ದಿನಗಳ ಕಾಮಗಾರಿಗೆ ತೊಂದರೆ ಆಗಿದೆ ಎಂದು ಸಚಿವರು ವಿವರಣೆ ನೀಡಿದರು. ಸರ್ಕಾರ ಕಾಮಗಾರಿಯ ಗುಣಮಟ್ಟದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಜೂನ್ 20ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು. [ಶಿರಾಡಿ ಘಾಟ್ ರಸ್ತೆ, ಸಚಿವರು ಕೊಟ್ಟ ಗಡುವು ಮುಗಿಯಿತು]
ಒಟ್ಟು 13 ಕಿ.ಮೀ. ಮಾರ್ಗದ ಕಾಮಗಾರಿ ನಡೆಯುತ್ತಿದೆ. ಇದರಲ್ಲಿ 8 ಕಿ.ಮೀ.ಮಾರ್ಗದ ಕಾಂಕ್ರಿಟ್ ಕಾಮಗಾರಿ ಪೂರ್ಣಗೊಂಡಿದೆ. 2 ಕಿ.ಮೀ.ಉದ್ದದ ಮಾರ್ಗದಲ್ಲಿ ಒಂದು ಕಡೆ ಕಾಂಕ್ರಿಟ್ ಹಾಕಲಾಗಿದೆ. ಜೂನ್ 20ರೊಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಸಚಿವರು ವಿವರಿಸಿದರು.
ಪರ್ಯಾಯ ರಸ್ತೆ ಅಭಿವೃದ್ಧಿ : ಶಿರಾಡಿ ಘಾಟ್‌ಗೆ ಪರ್ಯಾಯವಾಗಿ ಶಿಶಿಲ-ಬೈರಾಪುರ ನಡುವಿನ 12 ಕಿ.ಮೀ.ರಸ್ತೆಯನ್ನು ಅಭಿವೃದ್ಧಿಪಡಿಸಲು ಇಲಾಖೆ ಮುಂದಾಗಿದೆ. ಸಕಲೇಶಪುರ, ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಬಿಸಿಲೆ ಘಾಟ್ ರಸ್ತೆಯನ್ನು 24 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.












Click it and Unblock the Notifications