ಶಿಂಷಾ ಮರಳಿಗೆ ಹೆಗ್ಗಡೆ ಉಪವಾಸ: ಅಧಿಕಾರಿಗಳ ತಲೆದಂಡ?
ರಾಮನಗರ, ಜ.27: ಚನ್ನಪಟ್ಟಣದಲ್ಲಿ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವಂತೆ ತಾಪಂ ಮಾಜಿ ಅಧ್ಯಕ್ಷ ಸಿದ್ದರಾಮಯ್ಯ ಹೆಗ್ಗಡೆ ನಡೆಸುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ 8ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳ ತಲೆದಂಡ ಪಡೆಯಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ಎಸ್ ದೊರೆಸ್ವಾಮಿ ಅವರು ತಾವು ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದ್ದಂತೆ ಜಿಲ್ಲಾಡಳಿತ ಎಚ್ಚೆತ್ತಿದೆ. ತಾಲೂಕಿನ ಕಂದಾಯ ಮತ್ತು ಪೊಲೀಸ್ ಇಲಾಖೆಯ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಾಲು-ಸಾಲು ಲಾರಿಗಳು ಹಾಗೂ ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಣೆಯಾಗುತ್ತಿದ್ದರೂ ಕಂದಾಯ ಮತ್ತು ಪೊಲೀಸ್ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದು, ಏತನ್ಮಧ್ಯೆ ಮರಳು ತುಂಬಿದ ಎತ್ತಿನ ಗಾಡಿ ಹಿಡಿದು ದಂಡ ಹಾಕಿದ ತಹಸೀಲ್ದಾರ್ ಶಿವರುದ್ರಯ್ಯ ನಗೆಪಾಟಿಲಿಗೆ ಒಳಗಾಗಿದ್ದಾರೆ.
ಈ ನಡುವೆ ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣದಲ್ಲಿ ಅತಿ ವೇಗವಾಗಿ ಬಂದ ಮರಳು ತುಂಬಿನ ಟ್ರ್ಯಾಕ್ಟರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಯುವಕರಿಗೆ ಕಾಲು ಮುರಿದಿದೆ.
ಅಕ್ರಮ ಮರಳು ಗಣಿಗಾರಿಕೆಗೆ ಇತಿಶ್ರೀ ಹಾಡಲೇಬೇಕೆಂದು ಪಣ ತೊಟ್ಟಿರುವ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ತೀವ್ರ ಸ್ವರೂಪದಲ್ಲಿ ಚಳವಳಿ ಹಮ್ಮಿಕೊಳ್ಳಲು ನರ್ಮದಾ ಬಚಾವೋ ಆಂದೋಲನದ ನಾಯಕಿ ಮೇಧಾ ಪಾಟ್ಕರ್, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಸಮಾಜ ಪರಿವರ್ತನ ಸಮುದಾಯದ ಮುಖಂಡ ಹಿರೇಮಠ್ ಹಾಗೂ ಕೆಲವು ಪರಿಸರವಾದಿಗಳನ್ನು ಕರೆತರಲು ಚಿಂತಿಸಿ, ಅವರ ಜತೆ ಮಾತುಕತೆ ನಡೆಸಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಮೂಲಕ ತಿಳಿದ ಜಿಲ್ಲಾಡಳಿತ ಚನ್ನಪಟ್ಟಣ ತಾಲೂಕಿನ ಕೆಲವು ಕಂದಾಯ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಅಮಾನತು ಮಾಡಿ ಮುಜುಗರ ತಪ್ಪಿಸಿಕೊಳ್ಳಲು ಮುಂದಾಗಿದೆ.
ಅದರಂತೆ ತಹಸೀಲ್ದಾರ್, ಮಳೂರು ಹಾಗೂ ವಿರುಪಾಕ್ಷಿಪುರ ಹೋಬಳಿಯ ಕಂದಾಯ ನಿರೀಕ್ಷಕರು ಹಾಗೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಗ್ರಾಮಗಳ ವ್ಯಾಪ್ತಿಯ ಗ್ರಾಮ ಲೆಕ್ಕಿಗರು ಮತ್ತು ಗ್ರಾಮಾಂತರ ಹಾಗೂ ಅಕ್ಕೂರು ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ.
ಅಲ್ಲದೆ, ರೈತ ಸಂಘದ ಜಿಲ್ಲಾ ಮುಖಂಡರ ನಿಯೋಗ ಜಿಲ್ಲೆಯಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ವಿಧಾನಸೌಧದಲ್ಲಿ ಒತ್ತಾಯಿಸಬೇಕೆಂದು ರೈತ ನಾಯಕ ಹಾಗೂ ಶಾಸಕ ಕೆಎಸ್ ಪುಟ್ಟಣ್ಣಯ್ಯ ಅವರಿಗೆ ಮನವಿ ಮಾಡಿದೆ. ಜತೆಗೆ ಚಳವಳಿಗಾರರ ಜೋತೆ ಉದ್ಧಟತನದಿಂದ ವರ್ತಿಸುವ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್ ಅವರನ್ನು ಅಮಾನತು ಮಾಡಿ, ವಿಚಾರಣೆ ನಡೆಸಬೇಕೆಂದು ಸದನದಲ್ಲಿ ಸರಕಾರದ ಗಮನ ಸೆಳೆಯಬೇಕೆಂದು ಮನವವರಿಕೆ ಮಾಡಿಕೊಟ್ಟಿದ್ದಾರೆ.
ಇದರ ಬೆನ್ನಲ್ಲೇ ಮರಳು ಗಣಿಗಾರಿಕೆಗೆ ಸಹಕರಿಸುತ್ತಿರುವ ಅಧಿಕಾರಿಗಳ ಮೇಲೆ ಕೆಂಡಮಂಡಲವಾಗಿರುವ ಶಾಸಕ ಸಿಪಿ ಯೋಗೀಶ್ವರ್ ಕೂಡ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದು, ಸಭೆಯ ಬಗ್ಗೆ ಇದುವರೆವಿಗೂ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications