By-Election 2024: ಆಡಳಿತ, ವಿಪಕ್ಷಗಳಿಗೆ ಪ್ರತಿಷ್ಟೆಯಾಗಲಿರುವ ಉಪಸಮರ ಫಲಿತಾಂಶ..!

ಬೆಂಗಳೂರು, ನವೆಂಬರ್‌ 22: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಬಹುಮುಖ್ಯವಾಗಿದ್ದು, ಈ ಫಲಿತಾಂಶ ಸರ್ಕಾರದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಜತೆಗೆ ಒಂದೂವರೆ ವರ್ಷದ ಆಡಳಿತದ ಮಾಪನವೂ ಆಗಲಿದೆ. ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಮೂರು ಪಕ್ಷಕ್ಕೂ ಒಂದೊಂದು ಅಂಕಗಳನ್ನು ನೀಡಿದ್ದು ಯಥಾ ಸ್ಥಿತಿಯಲ್ಲಿರಲಿದೆ ಎಂದು ಹೇಳಿದರೂ ಅದೇ ಅಂತಿಮವಲ್ಲ. ಹೀಗಾಗಿ ನಾಳಿನ(ನ.23) ಚುನಾವಣಾ ಫಲಿತಾಂಶವನ್ನು ಕಾತರದಿಂದ ಕಾಯುವಂತಾಗಿದ್ದು ಅದೇ ಅಂತಿಮವಾಗಲಿದೆ.

ಮೇಲ್ನೋಟಕ್ಕೆ ನೋಡಿದರೆ ಈ ಉಪಚುನಾವಣೆಯ ಫಲಿತಾಂಶದಿಂದ ಸರ್ಕಾರಕ್ಕೆ ನಷ್ಟವಾಗಲೀ, ವಿಪಕ್ಷಗಳಿಗೆ ಲಾಭವಾಗುವುದಾಗಲೀ ಇಲ್ಲ. ಆದರೆ ಈ ಫಲಿತಾಂಶ ನೀಡುವ ಸಂದೇಶಗಳು ಮಾತ್ರ ನೂರಾರು. ಇಲ್ಲಿ ವಿಪಕ್ಷಗಳು ಗೆದ್ದರೆ ಸರ್ಕಾರದ ವಿರುದ್ಧ ಜನ ನೊಂದಿದ್ದಾರೆ, ಆಡಳಿತ ವಿರೋಧಿ ಅಲೆ ಶುರುವಾಗಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡಬಹುದು ಅಷ್ಟೇ ಅಲ್ಲದೆ ಸರ್ಕಾರವನ್ನು ಹಣಿಯಲು ಬಹುದು. ಆದರೆ ಸರ್ಕಾರ ಇಲ್ಲಿ ಮೂರು ಸ್ಥಾನಗಳನ್ನು ಗೆದ್ದುಕೊಂಡರೆ ಜನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಮೆಚ್ಚಿದ್ದಾರೆ. ಗ್ಯಾರಂಟಿ ಯೋಜನೆಗಳು ಫಲಪ್ರದವಾಗಿವೆ ಎಂದು ಕಾಂಗ್ರೆಸ್ಸಿಗರು ಎದೆಯುಬ್ಬಿಸಿ ಓಡಾಡಬಹುದು.

Shiggaon Channapatna Sandur By-Election Is The Prestige Of The Political Parties Of Karnataka

ಐದು ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರಕ್ಕೆ ಐದು ಗ್ಯಾರಂಟಿಗಳನ್ನು ನೀಡಿ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ನಡೆಸುವುದು ಕಷ್ಟವಾಗಿದೆ. ಆದರೆ ಅದನ್ನು ತೋರಿಸಿಬಿಟ್ಟರೆ ವಿಪಕ್ಷಗಳು ಮುಗಿ ಬೀಳುತ್ತವೆ ಎಂದು ನಮಗೇನು ಕೊರತೆಯಾಗಿಲ್ಲ. ಆರ್ಥಿಕವಾಗಿ ಸುಭದ್ರವಾಗಿದ್ದೇವೆ ಎನ್ನುತ್ತಲೇ ಬೆಲೆ ಏರಿಕೆಗಳನ್ನು ಮಾಡುತ್ತಾ ಹೋಗುತ್ತಿದೆ. ಇದರ ಜತೆಗೆ ವಾಲ್ಮೀಕಿ ಹಗರಣ, ಮುಡಾ ಹಗರಣ, ಅಬಕಾರಿ ಇಲಾಖೆಯಲ್ಲಿನ ಲಂಚದ ಆರೋಪಗಳು ಸರ್ಕಾರದ ಮೇಲೆ ತೂಗು ಕತ್ತಿಯಾಗಿ ನಿಂತಿದೆ. ಇದೆಲ್ಲವನ್ನು ವಿಪಕ್ಷಗಳು ಆರೋಪ ಮಾಡುತ್ತಿದ್ದರೂ ಆಡಳಿತರೂಢ ನಾಯಕರು ಸರ್ಕಾರದ ಪರ ಬ್ಯಾಟ್ ಬೀಸುತ್ತಾ ಏನೂ ಆಗಿಲ್ಲ. ಇದು ವಿಪಕ್ಷಗಳು ಹೊಟ್ಟೆಯುರಿಯಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಪ್ಪೆ ಸಾರಿಸುತ್ತಿದ್ದಾರೆ.

ಆರೋಪಗಳ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ

ಸರ್ಕಾರ ಭ್ರಷ್ಟಚಾರದಲ್ಲಿ ಮುಳುಗಿದೆ, ಲಂಚತಾಂಡವಾಡುತ್ತಿದೆ, ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಮುಖ್ಯಮಂತ್ರಿಯೇ ಹಗರಣದಲ್ಲಿ ಸಿಲುಕಿದ್ದಾರೆ. ಸಚಿವರೊಬ್ಬರು ಹಗರಣದ ಆರೋಪದಡಿ ಜೈಲಿಗೆ ಹೋಗಿ ಬಂದಿದ್ದಾರೆ. ಇದೆಲ್ಲದರ ನಡುವೆ ಬಿಪಿಎಲ್ ರೇಷನ್ ಕಾರ್ಡ್ ವಾಪಾಸ್ ಪಡೆದ ಪ್ರಕರಣಗಳು, ಅದನ್ನು ಮೀರಿ ವಕ್ಫ್ ನಿಂದ ರೈತರಿಗೆ ನೋಟೀಸ್, ಪಹಣಿಗಳಲ್ಲಿ ವಕ್ಫ್ ಹೆಸರನ್ನು ಸೇರಿಸಿರುವುದು ಹೀಗೆ ಪ್ರತಿ ದಿನವೂ ಬೆಳಗ್ಗೆ ಎದ್ದರೆ ಒಂದಲ್ಲ ಒಂದು ರೀತಿಯ ಕಿರಿಕ್ ಗಳನ್ನು ನಡೆಯುತ್ತಲೇ ಇದೆ. ಇದೆಲ್ಲವನ್ನು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಮರ್ಪಕವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದೆ.

Shiggaon Channapatna Sandur By-Election Is The Prestige Of The Political Parties Of Karnataka

ಎಲ್ಲೋ ಒಂದು ಕಡೆ ಹಿಂದೆ ಐದು ವರ್ಷಗಳ ಹಿಂದೆ ಸಿಎಂ ಆಗಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯರಿಗೂ ಈಗ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯರಿಗೂ ವ್ಯತ್ಯಾಸಗಳು ಕಂಡು ಬರುತ್ತಿದೆ. ವಿವೇಚನೆಯುತ ನಿರ್ಧಾರ ಮಾಡದ ಕಾರಣದಿಂದಾಗಿ ಏನೂ ಮಾಡಿದರೂ ಅದು ಉಲ್ಟಾ ಹೊಡೆಯುತ್ತಿದೆ. ಸಮಾಜವಾದಿ ಹಿನ್ನಲೆಯಿಂದ ಬಂದ ಸಿಎಂ ಸಿದ್ದರಾಮಯ್ಯರ ಕೊರಳಿಗೆ ರಾಜಕೀಯ ಸಂಧ್ಯಾಕಾಲದಲ್ಲಿ ಹಗರಣದ ಆರೋಪಗಳು ಸುತ್ತಿಕೊಳ್ಳುತ್ತಿವೆ. ಅದರಿಂದ ಬಿಡಿಸಿ ಕೊಳ್ಳಲು ಅವರು ಹಲವು ರೀತಿಯ ಸರ್ಕಸ್ ಮಾಡುತ್ತಿದ್ದರೂ ಅದ್ಯಾವುದೂ ಫಲಕೊಟ್ಟಂತೆ ಕಾಣುತ್ತಿಲ್ಲ.

ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಗೆಲ್ಲಲೇ ಬೇಕಿದೆ

ಸಿದ್ದರಾಮಯ್ಯರಂತ ಪ್ರಭಾವಿ ನಾಯಕ ಸಿಎಂ ಆಗಿರುವ ಸಮಯದಲ್ಲಿಯೇ ಪಕ್ಷದೊಳಗೆ ಸಿಎಂ ಕೂಗು ಕೇಳಿ ಬರುತ್ತದೆ. ಸ್ವಪಕ್ಷದ ನಾಯಕರೇ ಸಿಎಂ ಬದಲಾವಣೆ ಕುರಿತಂತೆ ಮಾತನಾಡುತ್ತಾರೆ. ಇದು ನಿಜವಾಗಿಯೂ ಸಿದ್ದರಾಮಯ್ಯರಂತಹ ನಾಯಕರಿಗೆ ಮುಜುಗರದ ಸಂಗತಿಯೇ.. ಇಂತಹ ಸಂದಿಗ್ಧ ಕಾಲದಲ್ಲಿ ಉಪಚುನಾವಣೆ ನಡೆದಿದೆ. ಇದು ಕಾಂಗ್ರೆಸ್ ಸರ್ಕಾರದ ಪ್ರತಿಷ್ಟೆ ಎನ್ನುವುದಕ್ಕಿಂತಲೂ ಸಿದ್ದರಾಮಯ್ಯರಿಗೆ ಪ್ರತಿಷ್ಠೆಯಾಗಿದೆ. ಒಂದು ವೇಳೆ ಸಿದ್ದರಾಮಯ್ಯರವರ ಆಡಳಿತ ವೈಖರಿಯನ್ನು ಜನ ಮೆಚ್ಚಿದ್ದಾರೆ. ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯಾಗಿದ್ದಾರೆ ಎನ್ನುವುದೇ ಆದರೆ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲೇ ಬೇಕಾಗುತ್ತದೆ. ಇಲ್ಲಿ ಕಾಂಗ್ರೆಸ್ ನಿರೀಕ್ಷೆಯ ಸಾಧನೆ ಮಾಡದೆ ಹೋದರೆ ಅದರ ಹೊಣೆಯನ್ನು ಸಿಎಂ ಸಿದ್ದರಾಮಯ್ಯರವರೇ ಹೊರಬೇಕಾಗುತ್ತದೆ.

Shiggaon Channapatna Sandur By-Election Is The Prestige Of The Political Parties Of Karnataka

ಸರ್ಕಾರ ರಚನೆ ಆರಂಭವಾದಲ್ಲಿಂದ ಇಲ್ಲಿವರೆಗೆ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಹೋರಾಟ ಮಾಡುತ್ತಲೇ ಬಂದಿದ್ದು, ಸಂದರ್ಭ ಸಿಕ್ಕಾಗಲೆಲ್ಲ ಆಡಳಿತ ಪಕ್ಷವನ್ನು ಹಣಿಯುವ ಕೆಲಸವನ್ನು ಮಾಡಿದ್ದಾರೆ. ಮಾಡುತ್ತಲೇ ಇದ್ದಾರೆ. ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಒಂದಾಗಿ ಹೋರಾಟ ಮಾಡುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸಫಲತೆ ಕಂಡಿದೆ. ಅದು ಇದೀಗ ನಡೆದ ಚುನಾವಣೆಯಲ್ಲೂ ಗಟ್ಟಿಯಾಗಿ ಉಳಿದಿದೆಯಾ ಎನ್ನುವುದು ಉಪಚುನಾವಣೆ ಫಲಿತಾಂಶದಿಂದ ಗೊತ್ತಾಗಬೇಕಾಗಿದೆ.

ಲಾಭ ನಷ್ಟಕ್ಕಿಂತ ಪಕ್ಷಗಳಿಗೆ ಪ್ರತಿಷ್ಟೆ ಮುಖ್ಯ

ಚನ್ನಪಟ್ಟಣದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪ್ರಭಾವ ಮತ್ತು ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳುತ್ತಾರಾ? ಇವರನ್ನು ಪಕ್ಷಕ್ಕೆ ಕರೆ ತಂದು ತಂತ್ರ ರೂಪಿಸಿದ ಡಿಕೆಶಿ ಬ್ರದರ್ಸ್ ಕೈ ಮೇಲಾಗುತ್ತಾ? ಎಂಬ ಪ್ರಶ್ನೆಗಳು ಒಂದೆಡೆಯಾದರೆ, ಜಮೀರ್ ಖಾನ್ ಅವರ ವಿವಾದಿತ ಹೇಳಿಕೆಗಳು ಚುನಾವಣೆ ಮೇಲೆ ಬೀರಿದೆಯಾ ಎಂಬುದು ಕೂಡ ಗೊತ್ತಾಗಲಿದೆ. ಇನ್ನೊಂದೆಡೆ ಎನ್ ಡಿಎ ಅಭ್ಯರ್ಥಿಯಾಗಿ ಜೆಡಿಎಸ್ ನಿಂದ ಸ್ಪರ್ಧಿಸಿರುವ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ಉಳಿವು ಆಗಿದ್ದರೆ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿದೆ. ಜತೆಗೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಹೊಂದಾಣಿಕೆಯಾಗಿದೆಯಾ? ಎಂಬುದಕ್ಕೂ ಉತ್ತರವಾಗಿದೆ.

ಉಳಿದಂತೆ ಶಿಗ್ಗಾಂವಿಯಲ್ಲಿ ಸರ್ಕಾರದ ಪರ ಮತದಾರರು ನಿಂತು ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಜೈ ಎನ್ನುತ್ತಾರಾ ಅಥವಾ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಬಹುಪರಾಕ್ ಹೇಳುತ್ತಾರಾ? ಹಾಗೆಯೇ ಸಂಡೂರಿನಲ್ಲಿ ಕಾಂಗ್ರೆಸ್ ನ ಅನ್ನಪೂರ್ಣ ಅವರನ್ನು ಮತದಾರರು ಗೆಲ್ಲಿಸುತ್ತಾರಾ? ಬಿಜೆಪಿಯ ಬಂಗಾರು ಹನುಮಂತ ಅವರಿಗೆ ಜೈ ಎನ್ನುತ್ತಾರಾ? ಸದ್ಯಕ್ಕೆ ಸಮೀಕ್ಷೆಗಳು ಹೇಳುವ ಪ್ರಕಾರ ಮೂರು ಕ್ಷೇತ್ರಗಳಲ್ಲೂ ಈ ಹಿಂದೆ ಯಾವ ಪಕ್ಷಗಳು ಗೆದ್ದಿದ್ದವೋ ಅದೇ ಪಕ್ಷಗಳು ಉಳಿಯಲಿವೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆದರೆ ಅದನ್ನು ಆಡಳಿತ ಮತ್ತು ವಿಪಕ್ಷಗಳು ಯಾವ ರೀತಿ ಸಮರ್ಥನೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ನಾಳೆ ತನಕ ಕಾದು ನೋಡುವುದು ಅನಿವಾರ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+