ಕರ್ನಾಟಕ ಸಾರಿಗೆ ಅಭಿವೃದ್ಧಿಗೆ ಬಿಜೆಪಿಯಿಂದ ಹಿನ್ನಡೆ: ಶೂನ್ಯ ಸಾಧನೆ ಪಟ್ಟಿ ಕೊಟ್ಟ ರಾಮಲಿಂಗಾ ರೆಡ್ಡಿ
ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವ 'ಶಕ್ತಿ ಯೋಜನೆ'ಯಿಂದ ರಾಜ್ಯ ನಾಲ್ಕು ಸಾರಿಗೆ ನಿಗಮಗಳ ಶಕ್ತಿ ಕುಂದಿದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಆರೋಪ ಮುಂದುವರಿಸಿರುವ ಬಿಜೆಪಿಗೆ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ತಮ್ಮದೇ ಆದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.
'ರಾಜ್ಯದ ಸಾರಿಗೆಯನ್ನು ಕೋಮಾಗೆ ತಳ್ಳಿದ ತಮ್ಮ ಹಿಂದಿನ (ಬಿಜೆಪಿ) ಸರ್ಕಾರದ ಬಗ್ಗೆ ತಮಗೆ ಮಾಹಿತಿ ನೀಡಬೇಕೆಂದು ಕೇಳುತ್ತಿರುವ ಬಗ್ಗೆ ನಮಗೆ ಅರ್ಥವಾಯಿತು. ತಮ್ಮ ಆಡಳಿತದ ಸಾಧನೆ ಶೂನ್ಯದಿಂದ ಕೋಮವರೆಗೆ ಎಂಬುದು ರಾಜ್ಯಕ್ಕೆ ತಿಳಿದಿದೆ' ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಟಾಂಗ್ ನೀಡಿದ್ದಾರೆ.

ಬಿಜೆಪಿ ಇದ್ದಾಗ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಶೂನ್ಯ ನೇಮಕಾತಿ, ಶೂನ್ಯ ಹೊಸ ಬಸ್ಸುಗಳ ಸೇರ್ಪಡೆ, ಎಲ್ಲಾ ಶೂನ್ಯಗಳಿಂದ ಕೋಮಕ್ಕೆ ತಲುಪಿಸಿದ ಶ್ರೇಯ ತಮ್ಮದೇ ಎಂದು ಕುಟುಕಿದ್ದಾರೆ. ಜೊತೆಗೆ ಅಂದು ಸಾರಿಗೆ ಅಭಿವೃದ್ಧಿಗೆ ಬಿಜೆಪಿಯಿಂದ ಯಾವ ಕಾರ್ಯಗಳಾಗಿಲ್ಲ ಎಂದಿರುವ ಅವರು ಪಟ್ಟಿ ಸಮೇತ ವಿವರಿಸಿದ್ದಾರೆ.
* ಬಸ್ಸುಗಳು ರಸ್ತೆ ರಸ್ತೆಯಲ್ಲಿ ನಿಲ್ಲಲು ಪ್ರಮುಖ ಕಾರಣ ತಮ್ಮ ಅವಧಿಯಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ತಡೆ ನೀಡಿದ ಫಲಶೃತಿ.
* ತಮ್ಮ ಆಡಳಿತದ ಅವಧಿಯಲ್ಲಿ ಶೇ.60 ಕ್ಕೂ ಹೆಚ್ಚು ಬಸ್ಸುಗಳು ನಿಷ್ಕ್ರಿಯಗೊಂಡಿದ್ದರೂ ಸಹ ಕಾರ್ಯಾಚರಣೆ ಮಾಡಲು ಅನುವು ಮಾಡಿಕೊಟ್ಟಿದರ ಫಲಶೃತಿ.
* ಹೊಸ ಬಸ್ಸುಗಳ ಸೇರ್ಪಡೆ ಮಾಡದೇ ಸಾರಿಗೆ ಸಂಸ್ಥೆಗಳನ್ನು ಕೋಮದೆಡೆಗೆ ಕೊಂಡ್ಯೊಯ್ದ ಕೀರ್ತಿ ನಿಮಗೆ ಸಲ್ಲಬೇಕಲ್ಲವೇ?
* ತಮ್ಮ ಅವಧಿಯಲ್ಲಿ ಈ ತಿಂಗಳ ವೇತನ ಮುಂದಿನ ತಿಂಗಳು, ಕೆಲವೊಮ್ಮ ಅರ್ಧ ಸಂಬಳ ನೀಡಿ ನೌಕರರ ಹಾಗೂ ಅವರ ಕುಟುಂಬವನ್ನು ಬೀದಿಗೆ ತಂದಿದ್ದ ನಿಮಗೆ ಮಾತನಾಡುವ ಯಾವ ಯೋಗ್ಯತೆ ತಮಗಿದೆ?
ಕಾಂಗ್ರೆಸ್ ಸರ್ಕಾರದ ಸಾಧನೆ
* ನಮ್ಮ ಆಡಳಿತದ ಅವಧಿಯಲ್ಲಿ 7800 ಹೊಸ ಬಸ್ ಸೇರ್ಪಡೆ, 10473 ಹೊಸ ನೇಮಕಾತಿ, ಪ್ರತಿ ತಿಂಗಳ ಮೊದಲನೆ ದಿನವೇ ನೌಕರರಿಗೆ ವೇತನ ಪಾವತಿ, 4183 ಹಳೆಯ ಬಸ್ಸುಗಳನ್ನು ನಿಷ್ಕ್ರಿಯ, 2109 ಬಸ್ಸುಗಳು ಪುನಶ್ಚೇತನಕಾರ್ಯ, ಹೊಸ ಬಸ್ ನಿಲ್ದಾಣಗಳು/ ಘಟಕಗಳು/ ನೌಕರರಿಗೆ ವಸತಿ ಗೃಹಗಳು ನಿರ್ಮಾಣ. ಇವು ನಮ್ಮ ಸಾಧನೆ ಎಂದರು.
* ಬಿಜೆಪಿ ಆಡಳಿತದ ಅವಧಿಯಲ್ಲಿ ವೇತನ ಪರಿಷ್ಕರಣೆ ಮಾಡಿ ಅದಕ್ಕೆ ತಗಲುವ ಹಣವನ್ನು ಬಜೆಟ್ ನಲ್ಲಿ ಘೋಷಿಸದೆ, ಅವರಿಗೆ ವಂಚಿಸಿರುವ ನೀವು ಮಾತನಾಡುವ ನೈತಿಕತೆ ಉಳಿಸಿಕೊಂಡದ್ದೀರಿ?
* ಬಿಜೆಪಿ ಆಡಳಿತದ ಅವಧಿಯಲ್ಲಿ ಟಿ.ವಿ ಯಲ್ಲಿ ಪ್ರಸಾರವಾಗಿರುವ ಒಂದು ದೃಶ್ಯವನ್ನು ಅವರು ಎಕ್ಸ್ ಪೋಸ್ಟ್‌ನೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಸಾರಿಗೆ ಮುಷ್ಕರ ನಡೆದಿತ್ತು. ಆಗ 'ಯಡಿಯೂರಪ್ಪ ಜೀ ನಮ್ಮ ತಂದೆಗೆ ಸಂಬಳ ಕೊಡಿ...ಪ್ಲೀಜ್ ಹಬ್ಬಕ್ಕೆ ಬಟ್ಟೆ ತಗೋಬೇಕು' ಎಂದು ಸಾರಿಗೆ ನೌಕರರೊಬ್ಬರು ಮಗು ಕೇಳಿದ್ದ ಭಾವನಾತ್ಮಕ ಸಂಗತಿ ಪ್ರಸಾರವಾಗಿತ್ತು.
ಬಿಜೆಪಿ ಕಣ್ತುಂಬಿಕೊಂಡು ತಮ್ಮ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ ನೌಕರರಿಗೆ ಯಾವ ಪರಿ ವೇತನ ನೀಡಿದ್ದೀರಾ ಎಂಬುದು ನನಗೆ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದ್ದಾರೆ.
ಸಚಿವರ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು?
ಸಾರಿಗೆ ಸಚಿವರ ರಾಮಲಿಂಗಾ ರೆಡ್ಡಿ ಅವರ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯವರು ಕೋವಿಡ್ ಸಮಯದಲ್ಲೇ ಶೆ. 15ರಷ್ಟು ವೇತನ ಹೆಚ್ಚಿಸಿದ್ದರು. ನೀವು ಟಿಕೆಟ್ ದರವನ್ನು ಹೆಚ್ಚಿಸಿದ್ದೀರಿ. ಶೇ. 7ರಷ್ಟು ವೇತನ ಹೆಚ್ಚಳ ಕೊಡುವುದಾಗಿ ಹೇಳಿದ್ದೀರಿ ಇದರಿಂದ ಬೆಂಗಳೂರಿನಲ್ಲಿ ಜೀವನ ಮಾಡಲು ಆಗುತ್ತಾ ಕಾಗುತ್ತ ನೀವೇ ಹೇಳಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಸರ್ಕಾರದ ಪರ ಮತ್ತು ವಿರೋಧ ಎರಡು ವಿಧದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.












Click it and Unblock the Notifications