KSRTC; 250 ಹೊಸ ಬಸ್ ಖರೀದಿಗೆ ಟೆಂಡರ್ ಕರೆದ ಕೆಎಸ್ಆರ್‌ಟಿಸಿ
ಬೆಂಗಳೂರು, ನವೆಂಬರ್ 23: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಬಸ್‌ಗಳ ಕೊರತೆ ಎದುರಿಸುತ್ತಿದೆ. ವಿವಿಧ ಮಾದರಿಯ ಬಸ್‌ಗಳ ಖರೀದಿ ಪ್ರಕ್ರಿಯೆಗಳನ್ನು ಸಹ ಕೈಗೊಳ್ಳಲಾಗಿದೆ.
ಈಗ ಗ್ರಾಮೀಣ ಭಾಗದಲ್ಲಿ ಸಾರಿಗೆ ಸೌಕರ್ಯಕ್ಕಾಗಿ 250 ಬಸ್ ಗಳ ಖರೀದಿಗೆ ಟೆಂಡರ್ ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಟೆಂಡರ್ ಸಲ್ಲಿಕೆ ಮಾಡುವಂತೆ 16/11/2023ರಂದು ಪ್ರಕಟಣೆ ಹೊರಡಿಸಲಾಗಿದೆ.

ಬೆಂಗಳೂರಿನ ಶಾಂತಿನಗರದಲ್ಲಿರುವ ಕೆಎಸ್ಆರ್‌ಟಿಸಿ ಕೇಂದ್ರ ಕಛೇರಿಯ ಚೀಫ್ ಮೆಕಾನಿಕಲ್ ಇಂಜಿನಿಯರ್ ಈ ಟೆಂಡರ್ ಕರೆದಿದ್ದಾರೆ. ಸರ್ಕಾರದ ನಿಯಮಾವಳಿಗಳ ಪ್ರಕಾರ ಒಟ್ಟು ಎರಡು ಹಂತದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ.
250 ಬಿಎಸ್-6 ಮಾದರಿಯ ಬಸ್‌ಗಳು ಕೆಎಸ್ಆರ್‌ಟಿಸಿಯ ಗ್ರಾಮೀಣ ಸೇವೆಗೆ ಅಗತ್ಯವಿದೆ. ಇದಕ್ಕಾಗಿ ಟೆಂಡರ್ ಆಹ್ವಾನಿಸಿದ್ದು, ಆಸಕ್ತರು ನಿಯಮಾವಳಿಗಳ ಪ್ರಕಾರ ಆನ್‌ಲೈನ್ ಮೂಲಕ ಟೆಂಡರ್ ಸಲ್ಲಿಕೆ ಮಾಡಬಹುದು ಎಂದು ತಿಳಿಸಲಾಗಿದೆ.
ಬಸ್‌ಗಳ ಕೊರತೆ ಇದೆ; ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ನೀಡಿದ್ದ ಗ್ಯಾರಂಟಿಗಳಲ್ಲಿ ಮೊದಲು ಜಾರಿಗೆ ತಂದಿದ್ದು 'ಶಕ್ತಿ' ಯೋಜನೆ. ಮಹಿಳೆಯರು ಸಾಮಾನ್ಯ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಸ್‌ಗಳಲ್ಲಿ ಜನರ ಸಂಚಾರವೂ ಹೆಚ್ಚಿದೆ.
ಆದರೆ ಕೆಎಸ್ಆರ್‌ಟಿಸಿ ಬಸ್‌ಗಳ ಕೊರತೆ ಎದುರಿಸುತ್ತಿದೆ. 'ಶಕ್ತಿ' ಯೋಜನೆ ಜಾರಿಗೂ ಮೊದಲು ಸರ್ಕಾರಿ ಬಸ್‌ಗಳಲ್ಲಿ ಪ್ರತಿನಿತ್ಯ 84.5 ಲಕ್ಷ ಜನರು ಸಂಚಾರ ನಡೆಸುತ್ತಿದ್ದರು. ಪ್ರಸ್ತುತ ಈ ಸಂಖ್ಯೆ 1.06 ಕೋಟಿ ದಾಟಿದೆ. ಆದ್ದರಿಂದ ಜನರ ಬೇಡಿಕೆಗೆ ತಕ್ಕಂತೆ ಬಸ್‌ಗಳನ್ನು ಓಡಿಸಬೇಕಿದೆ.
ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಬಸ್‌ಗಳು ಸಹ ಅಗತ್ಯವಿದೆ. ಸದ್ಯದ ಮಾಹಿತಿ ಪ್ರಕಾರ ನಗರ, ಗ್ರಾಮೀಣ ಹೀಗೆ ವಿವಿಧ ಕಡೆ ಸಂಚಾರ ನಡೆಸುವ ಸುಮಾರು 3 ಸಾವಿರ ಹೆಚ್ಚುವರಿ ಬಸ್‌ಗಳ ಅವಶ್ಯಕತೆ ಇದೆ. ಹೊಸ ಬಸ್ ಖರೀದಿಗೆ ಸರ್ಕಾರವೂ ಆಸಕ್ತಿ ತೋರಿದೆ.
ಕೆಎಸ್ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಸೇರಿ 24,352 ಬಸ್‌ಗಳಿವೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ 22,017 ಬಸ್‌ಗಳು ಮಾತ್ರ ಸಂಚಾರ ನಡೆಸುತ್ತಿವೆ. ಆದ್ದರಿಂದ ಇರುವ ಬಸ್‌ಗಳಲ್ಲಿಯೇ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ.
ಸರ್ಕಾರದ ಮುಂದೆ ಕೆಎಸ್‌ಆರ್‌ಟಿಸಿಗೆ 800, ಬಿಎಂಟಿಸಿಗೆ 921, ಕೆಕೆಆರ್‌ಟಿಸಿಗೆ 250, ಎನ್‌ಡಬ್ಲ್ಯುಕೆಆರ್‌ಟಿಸಿಗೆ 375 ಬಸ್‌ಗಳನ್ನು ಖರೀದಿ ಮಾಡಬೇಕು ಎಂಬ ಬೇಡಿಕೆ ಇದೆ. ಸರ್ಕಾರ ಆರ್ಥಿಕ ಸ್ಥಿತಿಯನ್ನು ನೋಡಿಕೊಂಡು ಹೊಸ ಬಸ್‌ಗಳ ಖರೀದಿಗೆ ಟೆಂಡರ್ ಕರೆಯುತ್ತದೆ.
ಎಲ್ಲಾ ನಾಲ್ಕು ಸಾರಿಗೆ ನಿಗಮಗಳಲ್ಲಿ ಬಸ್‌ಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಬಸ್‌ಗಳು ರಸ್ತೆಗೆ ಇಳಿಯಲು ನಾಲ್ಕೈದು ತಿಂಗಳುಗಳು ಬೇಕು. 2024ರಲ್ಲಿ ಬಸ್‌ಗಳ ಕೊರತೆ ಇರುವುದಿಲ್ಲ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.
ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕ ಭಾಗದಲ್ಲಿಯೇ ಬಸ್‌ಗಳ ಕೊರತೆ ಹೆಚ್ಚು ಎಂಬ ಅಭಿಪ್ರಾಯವಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳು ಇಲ್ಲದೇ ಬರುವ ಕೆಲವು ಬಸ್‌ಗಳು ತುಂಬಿ ತುಳುಕುತ್ತವೆ. ಆದ್ದರಿಂದ ಬಸ್‌ಗಳ ಖರೀದಿ ಅಗತ್ಯವಾಗಿದೆ.
ಕರ್ನಾಟಕ ಸರ್ಕಾರ ಸದ್ಯ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಕಾರ್ಯಕದಲ್ಲಿ ತೊಡಗಿದೆ. ಆದ್ದರಿಂದ ಈ ವರ್ಷ ಹೆಚ್ಚು ಹೊಸ ಬಸ್‌ಗಳ ಖರೀದಿಗೆ ಹಣ ವ್ಯಯಿಸುವುದಿಲ್ಲ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡರೂ ಅದನ್ನು ಬಾಕಿ ಇಡುವ ಸಾಧ್ಯತೆಗಳೇ ಹೆಚ್ಚಿದೆ. ಆದರೆ 2024ರಲ್ಲಿ ಎಲ್ಲಾ ಸಾರಿಗೆ ನಿಗಮಗಳು ಹೊಸ ಬಸ್‌ಗಳನ್ನು ಪಡೆಯುವ ನಿರೀಕ್ಷೆ ಇದೆ.











Click it and Unblock the Notifications