ಸಿ.ಪಿ ಯೋಗೇಶ್ವರ್ ಬಗ್ಗೆ ಗಂಭೀರ ಆರೋಪ: "ಯೋಗೇಶ್ವರ್ ಫ್ರಾಡ್"
Channapatna by-election: ಉಪ ಚುನಾವಣೆ ಕಾವು ಜೋರಾಗುತ್ತಿದೆ. ಈ ನಡುವೆ ರಾಜಕೀಯ ನಾಯಕರ ನಡುವೆ ಆರೋಪ - ಪ್ರತ್ಯಾರೋಪ ಜೋರಾಗಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ಹೈವೋಲ್ಟೇಜ್ ಪಡೆದುಕೊಂಡಿದೆ. ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವುದು ಬಹುತೇಕ ಫಿಕ್ಸ್ ಆಗಿದೆ.ಇದೀಗ ಅವರ ಬಗ್ಗೆ ಗಂಭೀರ ಆರೋಪವೊಂದು ಕೇಳಿ ಬಂದಿದೆ.
ರಾಜ್ಯದಲ್ಲಿ ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಈ ಉಪ ಚುನಾವಣೆಗಳು ಹಲವು ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಇನ್ನು ಚನ್ನಪಟ್ಟಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಸೆಡ್ಡು ಹೊಡೆದಿರುವ ಸಿ.ಪಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಸಿ.ಪಿ ಯೋಗೇಶ್ವರ್ ಅವರು ಚನ್ನಪಟ್ಟಣದಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ಯಾವುದೇ ಪಕ್ಷದಿಂದ ನಿಂತರೂ, ಇಲ್ಲ ಪಕ್ಷೇತರರಾಗಿ ಸ್ಪರ್ಧೆ ಮಾಡಿದರೂ ಅವರು ಗೆಲ್ಲುವುದು ಖಚಿತ ಎನ್ನುವ ಅಭಿಪ್ರಾಯವೇ ರಾಜಕೀಯ ವಲಯದಲ್ಲಿ ಇದೆ.

ಇದೀಗ ಅವರು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ ಎಂಎಲ್‌ಸಿ ಎಚ್ ವಿಶ್ವನಾಥ್ ಅವರು ಸಿ.ಪಿ ಯೋಗೇಶ್ವರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ಸಿ.ಪಿ ಯೋಗೇಶ್ವರ್ ಒಬ್ಬ ಫ್ರಾಡ್ ಕಣ್ರಿ. ಯೋಗೇಶ್ವರ್ ಅನ್ನು ಸೈನಿಕ ಎಂದು ಕರೆಯಬಾರದು ಎಂದಿದ್ದಾರೆ. ಸೈನಿಕ ಎನ್ನುವ ಪದ ಬಳಕೆ ಮಾಡುವ ಮೂಲಕ ಸೈನಿಕರಿಗೆ ಅವಮಾನ ಮಾಡಬಾರದು. ಕರ್ನಾಟಕದಲ್ಲಿ ಈಗಾಗಲೇ ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮ ಫ್ರಾಡ್ ಆಗಿದೆ. ಇದೀಗ ಹೊಸದಾಗಿ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಾಗಿದೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೇ ಕರ್ನಾಟಕದಲ್ಲಿ ನಡೆಯುತ್ತಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಿಂದಾಗಿ ರಾಜ್ಯದಲ್ಲಿ ಯಾವುದೇ ರಾಜಕೀಯ ಬದಲಾವಣೆ ಆಗಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿ.ಪಿ ಯೋಗೇಶ್ವರ್ ಹೇಳಿದ್ದೇನು
ಇನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಮಾತನಾಡಿರುವ ಸಿ.ಪಿ ಯೋಗೇಶ್ವರ್ ಅವರು, ಡಿ.ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಜೀವನ ಆರಂಭಿಸಿದ್ದೆ. ನಂತರ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೆ. ಈಗ ಮತ್ತೆ ಬಂದಿದ್ದೇನೆ ಎಂದಿದ್ದಾರೆ.
ನನ್ನ ಮುಂದಿನ ರಾಜಕೀಯ ಭಾಗ ಕಾಂಗ್ರೆಸ್‌ನಲ್ಲಿ ಮುಂದುವರಿಯಲಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದ ಬೇಸರವಾಗಿದೆ. ಕೆಲವೊಮ್ಮೆ ನಮಗಾಗಿ ನಾವೇ ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲು ಆಗುವುದಿಲ್ಲ. ಅದೇ ಸಂದರ್ಭ ನನಗೆ ಬಂದಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ ನಾನಿದ್ದ ಬಿಜೆಪಿ ಜೊತೆಗೆ ಜೆಡಿಎಸ್ ಪಕ್ಷ ಸೇರಿಕೊಂಡ ನಂತರ ಎನ್‌ಡಿಎ ಮೈತ್ರಿಕೂಟದಲ್ಲಿ ಇದ್ದ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿರಲಿಲ್ಲ ಎನ್ನುವ ಭಾವನೆ ನನಗೆ ಬಂದಿತ್ತು. ಹೀಗಾಗಿ, ಸ್ವಯಂಪ್ರೇರಿತವಾಗಿ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದಿದ್ದಾರೆ.












Click it and Unblock the Notifications