ಜೆಡಿಎಸ್ಸಿಗೆ ರಾಷ್ಟ್ರೀಯ ಪಕ್ಷ ಕಾಂಗ್ರೆಸ್'ಶರಣಾಗತಿ' ಆಗೋದು ಬೇಕಿತ್ತಾ? ಖರ್ಗೆ
Recommended Video

ಕುಮಾರಸ್ವಾಮಿಯವರ ವಿಶ್ವಾಸಮತಯಾಚನೆಯ ವೇಳೆ, ಯಡಿಯೂರಪ್ಪನವರು ಒಂದು ಮಾತನ್ನು ಹೇಳಿದ್ದರು. "ನೋಡ್ತಾ ಇರಿ ಶಿವಕುಮಾರ್ ಅವರೇ, ಅಪ್ಪಮಕ್ಕಳು ಸೇರಿ ನಿಮ್ಮ ಪಕ್ಷವನ್ನು ಯಾವ ಅಧೋಗತಿಗೆ ತಂದು ನಿಲ್ಲಿಸುತ್ತಾರೆ. ಮುಂದಿನ ದಿನಗಳಲ್ಲಿ ಇದರ ಅನುಭವ ನಿಮಗೆ ಆಗಲಿದೆ" ಎಂದು ಬಿಎಸ್ವೈ ಹೇಳಿದ್ದರು.
ಯಡಿಯೂರಪ್ಪನವರ ಆ ಭಾಷಣದ ಅಂಶವನ್ನು ಯಾಕೆ ಇಲ್ಲಿ ಉಲ್ಲೇಖಿಸಲಾಗುತ್ತಿದೆಯೆಂದರೆ, ಶನಿವಾರ (ಜೂ 2) ನಡೆದ ಕಾಂಗ್ರೆಸ್ಸಿನ ಸೋಲಿನ ಪರಾಮರ್ಶೆಯ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಹೊರಹಾಕಿರುವ ಅಸಮಾಧಾನವನ್ನು ನೋಡಿದರೆ, ಬಿಎಸ್ವೈ ಹೇಳಿರುವ ಮಾತು ಇಷ್ಟು ಬೇಗ ನಿಜವಾಗುತ್ತಾ ಬರುತ್ತಿದೆಯಾ ಎನ್ನುವ ಸಂದೇಹ ಕಾಡದೇ ಇರದು. ಜೆಡಿಎಸ್ಸಿಗೆ ನಾವು 'ಶರಣಾಗತಿ' ಆಗೋದು ಬೇಕಿತ್ತಾ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿಯಿದೆ.
ಪ್ರಮಾಣವಚನ ಯಾವಾಗ ನಡೆಯಬೇಕು, ಸಚಿವ ಸಂಪುಟ ವಿಸ್ತರಣೆ ಯಾವ ಗಳಿಗೆಯಲ್ಲಿ ಆಗಬೇಕು, ಸಂಪುಟದಲ್ಲಿ ಯಾರಿರಬೇಕು, ಯಾರಿರಬಾರದು ಎನ್ನುವುದು ಪದ್ಮನಾಭ ನಗರದ ನಿವಾಸದಲ್ಲಿ ನಿರ್ಧಾರವಾದಾಗಲೇ, ಕಾಂಗ್ರೆಸ್ಸಿನ ಹಾಲೀ ಹಿರಿಯ ಮುಖಂಡರಿಗೆ ಧರ್ಮಸಿಂಗ್ ಆಡಳಿತ ಅವಧಿಯ ಒಂದು ಝಲಕ್, ಹೀಗೆ ಬಂದು ಹಾಗೆ ಹೋಗಿರಬಹುದು..
ಬಿಜೆಪಿಯನ್ನು ದೂರವಿಡಲು ಬೇಷರತ್ ಬೆಂಬಲವನ್ನು ಜೆಡಿಎಸ್ಸಿಗೆ ಸೂಚಿಸಿ, ನಂತರ ಒಂದೊಂದೇ ತಗಾದೆ ತೆಗೆಯುತ್ತಿದ್ದ ಕಾಂಗ್ರೆಸ್ಸಿಗರ ಹೇಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ದೇವೇಗೌಡರು, ಅದೇನು ದಾಳ ಉರುಳಿಸಿದರೋ.. ಜೆಡಿಎಸ್ ಹಾದಿಗೆ ರಾಷ್ಟ್ರೀಯ ಪಕ್ಷವೊಂದು ಬರುವಂತಾಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿರುವ ರಾಜಕೀಯ.
ಕಾಂಗ್ರೆಸ್ಸಿಗೆ 2/3 ಮತ್ತು ಜೆಡಿಎಸ್ಸಿಗೆ 1/3 ಆಧಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲು ದೇವೇಗೌಡರು ಒಪ್ಪಿಕೊಂಡಿದ್ದರೂ, ಆಯಕಟ್ಟಿನ (ಗೃಹ, ಬೆಂಗಳೂರು ನಗರಾಭಿವೃದ್ದಿ ಬಿಟ್ಟು) ಖಾತೆಯನ್ನು ತಮ್ಮ ಸುಪರ್ದಿಯಲ್ಲೇ ಇಟ್ಟುಕೊಳ್ಳಲು ಗೌಡ್ರು ಯಶಸ್ವಿಯಾದರು. ಕಾಂಗ್ರೆಸ್ ಹಿರಿಯ ಮುಖಂಡರ ಬೇಸರ, ಮುಂದೆ ಓದಿ..

ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿಲ್ಲ
ನಾವೆಲ್ಲೂ ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಎಂದು ಹೇಳಿಲ್ಲ ಎನ್ನುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ, ತೀರಾ ಮುಜುಗರವಾಗುವ ಸನ್ನಿವೇಶ ಖುದ್ದು ಕಾಂಗ್ರೆಸ್ ಹೈಕಮಾಂಡ್ ವಲಯದಿಂದಲೇ ಸೃಷ್ಟಿಯಾಯಿತು. ಅಸಮಾನ್ಯ ದೇವೇಗೌಡರು, ಪೂರ್ಣವಧಿಗೆ ಎಚ್ಡಿಕೆ ಸಿಎಂ ಮತ್ತು ಇತರ ಷರತ್ತು/ಒಪ್ಪಂದಗಳ ಮುಚ್ಚಳಿಕೆಯನ್ನು ಬರೆಸಿಕೊಂಡು, ಸಹಿಹಾಕಿಸಿಕೊಂಡು ಬಿಟ್ಟರು.

ಲೋಕೋಪಯೋಗಿ, ಇಂಧನ, ಸಾರಿಗೆ
ಲೋಕೋಪಯೋಗಿ, ಇಂಧನ, ಸಾರಿಗೆ ಮುಂತಾದ ಪ್ರಮುಖ ಖಾತೆಗಳು ಕೈತಪ್ಪಿದಾಗಲೇ ಬೇಸರಿಕೊಂಡಿದ್ದ ಕಾಂಗ್ರೆಸ್ಸಿನ ಹಿರಿಯ ಮುಖಂಡರು, ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಂದಿನ ಐದು ವರ್ಷ ಕುಮಾರಸ್ವಾಮಿಯೇ ಸಿಎಂ ಎಂದು ವೇಣುಗೋಪಾಲ್ ಹೇಳಿದಾಗ ಇನ್ನಷ್ಟು ಭ್ರಮನಿರಸನಗೊಂಡರು.

ಶನಿವಾರ ನಡೆದ ಸೋಲಿನ ಪರಾಮರ್ಶೆಯ ಸಭೆ
ಶನಿವಾರ ನಡೆದ ಸೋಲಿನ ಪರಾಮರ್ಶೆಯ ಸಭೆಯಲ್ಲಿ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಷ್ಟ್ರೀಯ ಪಕ್ಷವಾಗಿ ನಾವು ಸಣ್ಣ ಪಕ್ಷದ ಮಾತನ್ನು ಕೇಳಬೇಕಿಗೆ ಬಂದಿರೋದು ನೋವಿನ ಸಂಗತಿ. ವೈಯಕ್ತಿಕವಾಗಿ ನನಗೂ ಇದರಿಂದ ಬೇಸರವಿದೆ. ಮುಂದಿನ ನಮ್ಮ ಟಾರ್ಗೆಟ್ ಲೋಕಸಭಾ ಚುನಾವಣೆ, ಆಗಿರುವ ಎಲ್ಲಾ ಘಟನೆಗಳನ್ನು ಮರೆತು ಮತ್ತೆ ಪಕ್ಷಕ್ಕಾಗಿ ಕೆಲಸ ಮಾಡಬೇಕಾಗಿದೆ ಎಂದು ಪರಂ ಹೇಳಿದ್ದಾರೆ.

ಒಪ್ಪಂದದಲ್ಲಿ ಹೇಳಿದ್ದು ಏಕೆ, ಸಹಿಹಾಕಿದ್ದು ಯಾಕೆ
ಇದಕ್ಕೂ ಮೊದಲು ಕೆಪಿಸಿಸಿ ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರನ್ನು ಹಿರಿಯ ಮುಖಂಡ ಮಲ್ಲಿಕಾರ್ಜುಜನ ಖರ್ಗೆ ಅತ್ಯಂತ ಖಾರವಾದ ಪ್ರಶ್ನೆಯನ್ನು ಕೇಳಿದ್ದಾರೆ ಎನ್ನುವ ಮಾಹಿತಿಯಿದೆ. 5 ವರ್ಷ ಕುಮಾರಸ್ವಾಮಿ ಸಿಎಂ ಎಂದು ನಾವು ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ಆದರೆ ನೀವು ಒಪ್ಪಂದದಲ್ಲಿ ಹೇಳಿದ್ದು ಏಕೆ, ಸಹಿಹಾಕಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಪಕ್ಷವಾಗಿ ನಾವು ಅವರಿಗೆ ಶರಣಾಗತಿ ಆಗುವುದು ಬೇಕಿತ್ತೇ?
ನಾವು 78 ಶಾಸಕರನ್ನು ಹೊಂದಿದ್ದೇವೆ, ಆದರೂ ಜೆಡಿಎಸ್ಸಿಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟಿದ್ಯಾಕೆ? ಐದು ವರ್ಷ ಅವರಿಗೇ ಸ್ಥಾನ ಬಿಟ್ಟು ಕೊಟ್ಟರೆ ನಾವು ಪಕ್ಷ ಕಟ್ಟೋದು ಬೇಡವೇ? ಎಲ್ಲಾ ಪ್ರಮುಖ ಖಾತೆಯನ್ನು ಅವರಿಗ್ಯಾಕೆ ಬಿಟ್ಟು ಕೊಟ್ಟಿದ್ದು? ರಾಷ್ಟ್ರೀಯ ಪಕ್ಷವಾಗಿ ನಾವು ಅವರಿಗೆ ಶರಣಾಗತಿ ಆಗುವುದು ಬೇಕಿತ್ತೇ ಎಂದು ಖರ್ಗೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.











Click it and Unblock the Notifications