ಪ್ರಾಥಮಿಕ ಶಾಲೆ ಪುನರಾರಂಭದ ಕುರಿತು ಆರೋಗ್ಯ ಸಚಿವರು ಹೇಳುವುದೇನು?
ಬೆಂಗಳೂರು, ಅಕ್ಟೋಬರ್ 03: ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಹಬ್ಬಗಳು ಮುಗಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಆತುರದಲ್ಲಿ ಪುನರಾರಂಭಿಸಿಲ್ಲ. ಪೋಷಕರು ಹಾಗೂ ತಜ್ಞರೊಂದಿಗೆ ಚರ್ಚಿಸಿದ ನಂತರವೇ ಹಂತಹಂತವಾಗಿ ತೆರೆಯಲಾಗುತ್ತಿದೆ ಎಂದು ಹೇಳಿದರು.
ಮೊದಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರೊಂದಿಗೆ ಸಭೆ ನಡೆಸಿದ ನಂತರ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಯಿತು. ನಂತರ ಪಿಯು ತರಗತಿಗಳನ್ನು ಹಾಗೂ 9-12, 6-8ರವರೆಗೆ ತರಗತಿಗಳನ್ನು ತೆರೆಯಲಾಯಿತು. ಇದೀಗ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯುವ ಕುರಿತು ರಾಜ್ಯ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದರು.

ಹಬ್ಬದ ಸಮಯ ಮುಗಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ದಸರಾ ರಜೆ ಮುಗಿಯಲಿ. ಸರ್ಕಾರ ಸಮಾಲೋಚನೆ ನಡೆಸಿದ ನಂತರ ಹಾಗೂ ಕ್ಯಾಬಿನೆಟ್‌ನಲ್ಲಿ ಚರ್ಚೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ಶಾಲೆಯೊಂದರಲ್ಲಿ ಸುಮಾರು 60 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ ನಂತರ ಶಾಲೆ ಮುಚ್ಚಿದ ಕುರಿತು ಪ್ರತಿಕ್ರಿಯಿಸಿದ ಅವರು, ಅದೊಂದು ಸಂಗತಿಯನ್ನೇ ಇಟ್ಟುಕೊಂಡು ಶಾಲೆಗಳನ್ನು ತೆರೆಯುವ ಕುರಿತು ಎರಡನೇ ಆಲೋಚನೆ ಮಾಡುವುದು ಸರಿಯಲ್ಲ. ಇದು ಎಲ್ಲದಕ್ಕೂ ಆಧಾರವಾಗುವುದಿಲ್ಲ ಎಂದರು.
'ಈಗ ಆ ಶಾಲೆಯನ್ನು ಮುಚ್ಚಲಾಗಿದೆ ಹಾಗೂ ಮಕ್ಕಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗಿದೆ. ಇಬ್ಬರು ಮಕ್ಕಳು ರೋಗಲಕ್ಷಣಗಳನ್ನು ಹೊಂದಿದ್ದು, ಅವರ ಸ್ಥಿತಿ ಗಂಭೀರವಾಗಿಲ್ಲ. ನಾವು ರಾಜ್ಯದ ಪ್ರತಿ ಶಾಲೆ ಮೇಲೂ ನಿಗಾ ಇರಿಸಿದ್ದೇವೆ' ಎಂದು ಹೇಳಿದರು.

ರಾಜ್ಯದಲ್ಲಿ 6-8ನೇ ತರಗತಿವರೆಗೆ ಶಾಲೆಗಳನ್ನು ಪುನಃ ತೆರೆದು ಒಂದು ತಿಂಗಳಾಗಿದೆ. ಇದುವರೆಗೂ ಶಾಲೆಗಳಿಂದ ನಮಗೆ ಆತಂಕದ ವರದಿಯಾಗಿಲ್ಲ ಎಂದರು.
12 ವರ್ಷದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಆದರೆ ಪೋಷಕರ ಕಾಳಜಿ ಹಾಗೂ ಮಕ್ಕಳು ಸಣ್ಣವರಿರುವುದರಿಂದ ಸರ್ಕಾರ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯಲು ಆಲೋಚನೆ ಮಾಡುತ್ತಿದೆ. ಆತುರದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಕ್ಕಳಿಗೆ ತೊಂದರೆಯಾಗುವ ಸೂಚನೆ ಕಂಡುಬಂದ ತಕ್ಷಣವೇ ನಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಸಿಕಾ ಅಭಿಯಾನದ ಕುರಿತು ಮಾಹಿತಿ ನೀಡಿದ ಅವರು, 'ರಾಜ್ಯದ ಅರ್ಹ ಜನಸಂಖ್ಯೆಯ 80% ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 37% ಜನರಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಇಡೀ ಜನಸಂಖ್ಯೆಗೆ ಶೀಘ್ರವೇ ಲಸಿಕೆ ನೀಡಲಾಗುವುದು ಎಂದು ಭರವಸೆ ನೀಡಿದರು.
ದಸರಾ ಬಳಿಕ ಪ್ರಾಥಮಿಕ ಶಾಲೆಗಳು ಪ್ರಾರಂಭವಾಗುವ ಸುಳಿವನ್ನು ಈಚೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನೀಡಿದ್ದರು. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದ್ದರು.
ರಾಜ್ಯದಲ್ಲಿ ಸದ್ಯ ಕೋವಿಡ್ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಆದರೆ, ಡೆಂಗ್ಯೂ ಹಾಗೂ ವೈರಲ್ ಜ್ವರ ಮಕ್ಕಳನ್ನು ಬಾಧಿಸುತ್ತಿದೆ. ಹೀಗಾಗಿ ದಸರಾ ವೇಳೆಗೆ ಈ ಸಾಂಕ್ರಾಮಿಕ ರೋಗಗಳು ನಿಯಂತ್ರಣಕ್ಕೆ ಬಂದರೆ ಶಾಲೆಗಳನ್ನು ಪುನರಾರಂಭಿಸಲಾಗುವುದು. ಆಗ ಪೋಷಕರೂ ತಮ್ಮ ಮಕ್ಕಳನ್ನು ನಿರಾಂತಕವಾಗಿ ಶಾಲೆಗಳಿಗೆ ಕಳುಹಿಸಬಹುದು ಎಂದಿದ್ದರು.
ಕರ್ನಾಟಕದಲ್ಲಿ ಕೊರೊನಾ ಸೋಂಕು:
ಕರ್ನಾಟಕದಲ್ಲಿ ಶನಿವಾರ 636 ಮಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 245 ಮಂದಿಗೆ ಸೋಂಕು ದೃಢಪಟ್ಟಿದೆ. ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 2977225ಕ್ಕೆ ಏರಿಕೆಯಾಗಿದ್ದು, ಶನಿವಾರ 4 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 37811ಕ್ಕೆ ಏರಿಕೆಯಾಗಿದ್ದು, ಇದುವರೆಗೂ 2977225 ಮಂದಿ ಗುಣಮುಖರಾಗಿದ್ದಾರೆ.
ಕರ್ನಾಟಕದಲ್ಲಿ 5,68,97,778 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಮಕ್ಕಳಿಗೆ ವಿಶೇಷ ಆಸ್ಪತ್ರೆಗಳ ವ್ಯವಸ್ಥೆ ಮಾಡಿಕೊಳ್ಳಲು ಆರೋಗ್ಯ ಸಚಿವ ಕೆ ಸುಧಾಕರ್ ಎಲ್ಲಾ ಜಿಲ್ಲೆಗಳಿಗೆ ಸೂಚಿಸಿದ್ದಾರೆ.












Click it and Unblock the Notifications