ಸುಪ್ರೀಂಕೋರ್ಟ್‌ನಲ್ಲಿಂದು ಅತೃಪ್ತ ಶಾಸಕರ ಭವಿಷ್ಯ ನಿರ್ಧಾರ
Recommended Video
ಬೆಂಗಳೂರು, ಜುಲೈ 16: ಅನರ್ಹತೆ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಭಿನ್ನಮತೀಯ ಶಾಸಕರ ಹಣೆಬರಹ ಇಂದು ಸುಪ್ರೀಂಕೋರ್ಟ್‌ನಲ್ಲಿ ನಿರ್ಧಾರವಾಗಲಿದೆ.
ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಸ್ವೀಕರಿಸುತ್ತಿಲ್ಲ ವಿಳಂಬ ಮಾಡುತ್ತಿದ್ದಾರೆ ಎಂಬ ಅಂಶವೂ ಸೇರಿ ರಾಜೀನಾಮೆ ಅಂಗೀಕಾರಕ್ಕೆ ಹಸಿರು ನಿಶಾನೆ ತೋರಬೇಕು ಎಂದು ಎಲ್ಲಾ ಶಾಸಕರು ಅರ್ಜಿ ಸಲ್ಲಿಸಿದ್ದರು.
ಆರಂಭದಲ್ಲೇ ಹತ್ತು ಶಾಸಕರು ಮಾತ್ರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗದ ಹಿನ್ನೆಲೆಯಲ್ಲಿ ಉಳಿದ ಐವರು ಕೂಡ ಅರ್ಜಿ ಸಲ್ಲಿಸಿದ್ದಾರೆ.

ಹಿಂದಿನ ವಿಚಾರಣೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧದ ಅನರ್ಹತೆ ಅಥವಾ ರಾಜೀನಾಮೆ ಬಗ್ಗೆ ಸ್ಪೀಕರ್ ಯಾವುದೇ ತೀರ್ಮಾನ ತೆಗೆದುಕೊಂಡಿರಲಿಲ್ಲ.
ಇವತ್ತಿನ ಸುಪ್ರೀಂಕೋರ್ಟ್ ತೀರ್ಪು ಸರ್ಕಾರದ ಹಣೆಬರಹ ಮುಖ್ಯಮಂತ್ರಿ ಕುಮಾರಸ್ವಾಮಿ ಹುದ್ದೆ, ಗುರುವಾರ ವಿಶ್ವಾಸಮತ ಯಾಚನೆ ಸಾಧ್ಯಸಾಧ್ಯತೆಯನ್ನು ನೀಡಲಿದೆ. ಹೀಗಾಗಿ ಸರ್ಕಾರ ಹಾಗೂ ಜನತೆಯ ಕಣ್ಣು ಸುಪ್ರೀಂಕೋರ್ಟ್ ಮೇಲಿದೆ.
ಅತೃಪ್ತ ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ಸಮ್ಮತಿ ನೀಡಿತ್ತು.
ರಾಜ್ಯದ ಶಾಸಕರಾದ ಮುನಿರತ್ನ, ಎಂಟಿಬಿ ನಾಗರಾಜ್, ಆನಂದ್ ಸಿಂಗ್, ಡಾ. ಕೆ.ಸುಧಾಕರ್ ಹಾಗೂ ರೋಷನ್ ಬೇಗ್ ಅವರುಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಸೋಮವಾರ ಹೇಳಿತ್ತು.
ಸ್ಪೀಕರ್ ತಮ್ಮ ರಾಜೀನಾಮೆಯನ್ನು ಸ್ವೀಕರಿಸದಿರುವ ಬಗೆಗೆ ವಿರೋಧ ವ್ಯಕ್ತಪಡಿಸಿ ಹತ್ತು ಶಾಸಕರೊಡನೆ ರಾಜ್ಯದ ಇನ್ನೂ ಐವರು ಶಾಸಕರು ಜುಲೈ 13 ರಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠವು ಬಂಡಾಯ ಶಾಸಕರ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರ ಮನವಿಯನ್ನು ಅಂಗೀಕರಿಸಿದೆ.
ಆಡಳಿತಾರೂಢ ಸಮ್ಮಿಶ್ರ ಸರ್ಕಾರದ 10 ಬಂಡಾಯ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಕುರಿತು ಜುಲೈ 16 ರವರೆಗೆ ಕರ್ನಾಟಕ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿತ್ತು.
ಇದೇ ವೇಳೆ ಉಳಿದ ಶಾಸಕರ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿದೆ.












Click it and Unblock the Notifications