ವರ್ಗಾವಣೆ ಬೆದರಿಕೆ ಆರೋಪ: ಎಸಿಬಿ ವಿರುದ್ಧ ನ್ಯಾ.ಸಂದೇಶ್ ಟೀಕೆಗಳಿಗೆ ಸುಪ್ರೀಂಕೋರ್ಟ್ ತಡೆ
ಬೆಂಗಳೂರು,ಜು.18. ನ್ಯಾಯಮೂರ್ತಿಗಳಿಗೆ ವರ್ಗಾವಣೆ ಬೆದರಿಕೆ ಆರೋಪ ಪ್ರಕರಣದಲ್ಲಿ ನ್ಯಾ.ಎಚ್.ಪಿ.ಸಂದೇಶ್ ಅವರು ಭ್ರಷ್ಟಾಚಾರ ನಿಗ್ರಹ ದಳ ಮತ್ತು ಅದರ ಮುಖ್ಯಸ್ಥರಾದ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧದ ಟೀಕೆಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.
ಜು.4 ಮತ್ತು 11ರಂದು ನ್ಯಾ.ಸಂದೇಶ್ ಅವರು ಮಾಡಿದ್ದ ಟೀಕೆಗಳನ್ನು ಪ್ರಶ್ನಿಸಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಆಲಿಸಿದ ಸಿಜೆಐ ನ್ಯಾ. ಎನ್.ವಿ.ರಮಣ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಯ್ಲಿ ಅವರಿದ್ದ ತ್ರಿ ಸದಸ್ಯಪೀಠ ಹೈಕೋರ್ಟ್ ಏಕಸದಸ್ಯಪೀಠದ ಆದೇಶಕ್ಕೆ ತಡೆ ನೀಡಿದೆ.
ಎಸಿಬಿಗೆ ಎಲ್ಲ ಬಿ ರಿಪೋರ್ಟ್ ಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಎಡಿಜಿಪಿ ಸೇವಾ ದಾಖಲೆ ನೀಡಬೇಕು ಎಂದು ನೀಡಿದ್ದ ಆದೇಶಕ್ಕೂ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ಜಾರಿಗೊಳಿಸಿದೆ.

"ಎಸಿಬಿ ವಿರುದ್ಧದ ಟೀಕೆಗಳಿಗೆ ನಾವು ತಡೆ ನೀಡುತ್ತಿದ್ದೇವೆ, ಮೇಲ್ನೋಟಕ್ಕೆ ಜಾಮೀನು ಅರ್ಜಿಗೆ ಸಂಬಂಧಿಸಿದ್ದಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಎಸಿಬಿಯ ಅಧಿಕಾರಿಯ ವರ್ತನೆಗೂ ಜಾಮೀನು ಅರ್ಜಿಗೂ ಸಂಬಂಧವಿಲ್ಲ. ಹಾಗಾಗಿ ಏಕಸದಸ್ಯಪೀಠದ ಟೀಕೆಗಳಿಗೆ ತಡೆ ನೀಡಲಾಗುತ್ತಿದೆ, ಆದರೆ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಬಹುದು," ಎಂದು ನ್ಯಾಯಾಲಯ ಆದೇಶ ನೀಡಿದೆ.
ಮನವಿ ತಿರಸ್ಕಾರ:
ಆದರೆ ಅರ್ಜಿದಾರರ ಪರ ವಕೀಲರು, ಜಾಮೀನು ಅರ್ಜಿಯ ವಿಚಾರಣೆಯನ್ನು ಬೇರೊಂದು ನ್ಯಾಯಪೀಠದ ಮುಂದೆ ನಿಗದಿಪಡಿಸಬೇಕೆಂದು ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.
ಎಸಿಬಿ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಆಫ್ ಇಂಡಿಯಾ ತುಷಾರ್ ಮೆಹ್ತಾ, ನ್ಯಾ.ಎಚ್;ಪಿ. ಸಂದೇಶ್ ಎಸಿಬಿ ಮತ್ತು ಅದರ ಮುಖ್ಯಸ್ಥರ ವಿರುದ್ಧ ಟೀಕಾತ್ಮಕ ಆದೇಶ ಹೊರಡಿಸಿದ್ದಾರೆ. ಅಲ್ಲದೆ, ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾ.ಎಚ್.ಪಿ.ಸಂದೇಶ್ ಅವರು ಅದರ ವ್ಯಾಪ್ತಿ ಹೊರತುಪಡಿಸಿ ಪಿಐಎಲ್ ನಂತೆ ವಿಚಾರಣೆ ನಡೆಸುತ್ತಿದ್ದಾರೆ. ಹೈಕೋರ್ಟ್‌ಗೆ ತನಿಖೆಯ ಮೇಲ್ವಿಚಾರಣೆ ನಡೆಸುವ ಅಧಿಕಾರ ಇದ್ದರೂ ಸಹ ಜಡ್ಜ್ ತಮ್ಮ ಅಧಿಕಾರ ಮೀರಿ ಆದೇಶಗಳನ್ನು ಹೊರಡಿಸುತ್ತಿದ್ದಾರೆ. ಇದನ್ನು ನಿರ್ಬಂಧಿಸಬೇಕು ಎಂದು ಮನವಿ ಮಾಡಿದರು.
ಸೀಮಂತ್ ಕುಮಾರ್ ಸಿಂಗ್ ತಮ್ಮ ಅರ್ಜಿಯಲ್ಲಿ ನ್ಯಾ.ಸಂದೇಶ್ ತಮ್ಮ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಹಾಗಾಗಿ ಅದಕ್ಕೆ ತಡೆ ನೀಡಬೇಕೆಂದು ಕೋರಿದರು.

ಸಿಂಗ್ ವಿರುದ್ಧ ವಾಗ್ದಾಳಿ :
ಲಂಚ ಪ್ರಕರಣದಲ್ಲಿ ಜಾಮೀನು ಕೋರಿದ ಉಪ ತಹಶೀಲ್ದಾರ್ ಮಹೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆ ನ್ಯಾ. ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯಪೀಠ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿತ್ತು, ಅವರೇ ಕಳಂಕಿತರು ಅವರು ಹೇಗೆ ಸಂಸ್ಥೆಯನ್ನು ಮುನ್ನಡೆಸಲು ಸಾಧ್ಯ ಎಂದು ಪ್ರಶ್ನಿಸಿ, ಸೀಮಂತ್ ಕುಮಾರ್ ಸೇವಾ ದಾಖಲೆ ಸಲ್ಲಿಸಲು ಆದೇಶಿಸಿದ್ದರು.
ಹೈಕೋರ್ಟ್ ಏನು ಹೇಳಿತ್ತು?
ನ್ಯಾಯಮೂರ್ತಿ ಕಳದ ವಿಚಾರಣೆ ವೇಳೆ,ಎಸಿಬಿಯಲ್ಲಿನ ಅಕ್ರಮಗಳ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ನನಗೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್ ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದರು.
ಅಲ್ಲದೆ, ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿಯಾದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ.
50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು; 50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ ಎಂದು ನುಡಿದರು.
ಯಾರನ್ನುರಕ್ಷಿಸುತ್ತಿದೆ?
Recommended Video
ಎಸಿಬಿಯು ಯಾರನ್ನು ರಕ್ಷಣೆ ಮಾಡುತ್ತಿದೆ. ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತಲ್ಲದೆ, ಎಸಿಬಿ ಎಡಿಜಿಪಿ ವಿವರ ಸರ್ವಿಸ್ ರೆಕಾರ್ಡ್ ನೀಡಲು ಆದೇಶಿಸಿತ್ತು.











Click it and Unblock the Notifications