ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಸುಪ್ರೀಂ ಮೊರೆ ಹೋದ ಲೋಕಾಯುಕ್ತ
ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಕರ್ನಾಟಕದ ಲೋಕಾಯುಕ್ತ ಪೊಲೀಸರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಬೆಂಗಳೂರು, ಮಾರ್ಚ್ 14; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ನ ಲಂಚ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕದ ಲೋಕಾಯುಕ್ತ ಪೊಲೀಸರು ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಕರ್ನಾಟಕ ಹೈಕೋರ್ಟ್ ಶಾಸಕರಿಗೆ ಮಾರ್ಚ್ 7ರಂದು ಈ ಪ್ರಕರಣದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಮಂಗಳವಾರ ವಕೀಲ ಬಸವ ಪ್ರಭು ಎಸ್. ಪಾಟೀಲ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪೀಠದ ಮುಂದೆ ಈ ವಿಚಾರ ಪ್ರಸ್ತಾಪಿಸಿದರು. ಸಾಂವಿಧಾನಿಕ ಪೀಠದಲ್ಲಿನ ಪ್ರಕರಣದ ವಿಚಾರಣೆ ನಡೆಸಬೇಕಾಗಿರುವ ಕಾರಣ, ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ಕೆ ಕೌಲ್ ಪೀಠದ ಮುಂದೆ ಸಲ್ಲಿಸುವಂತೆ ನಿರ್ದೇಶನ ನೀಡಿದರು. ಬಳಿಕ ವಕೀಲರು ನ್ಯಾಯಮೂರ್ತಿ ಎಸ್‌ಕೆ ಕೌಲ್ ಪೀಠದ ಮುಂದೆ ಅರ್ಜಿ ಸಲ್ಲಿಸಿ, ತುರ್ತು ವಿಚಾರಣೆಗೆ ಮನವಿ ಮಾಡಿದರು.

ಅರ್ಜಿ ವಿಚಾರಣೆಗೆ ಒಪ್ಪಿಗೆ ನೀಡಿದ ನ್ಯಾಯಮೂರ್ತಿ ಎಸ್‌ಕೆ ಕೌಲ್ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸಬೇಕೆ?, ಅರ್ಜಿಯ ತುರ್ತು ವಿಚಾರಣೆ ಅಗತ್ಯವಿದೆಯೇ? ಎಂದು ವಕೀಲರನ್ನು ಪ್ರಶ್ನೆ ಮಾಡಿದರು. ಆಗ ಲೋಕಾಯುಕ್ತ ಪರ ವಕೀಲರು ಆರೋಪಿಯು ಶಾಸಕರಾಗಿದ್ದು, ಪ್ರಭಾವಿಯಾಗಿದ್ದಾರೆ. ಅರ್ಜಿಯ ವಿಚಾರಣೆ ನಡೆಯಬೇಕು ಎಂದರು. ನ್ಯಾಯಮೂರ್ತಿ ಎಸ್‌ಕೆ ಕೌಲ್ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡುವಂತೆ ಸೂಚನೆ ಕೊಟ್ಟರು.
ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದರು. ಕೆಎಸ್‌ಡಿಎಲ್ ಟೆಂಡರ್ ನೀಡಲು ಶಾಸಕರ ಪುತ್ರ ಪ್ರಶಾಂತ್ ಮಾಡಾಳ್ 80 ಲಕ್ಷ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಾರ್ಚ್ 2ರ ಗುರುವಾರ 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಕೆಎಎಸ್ ಅಧಿಕಾರಿಯೂ ಆಗಿರುವ ಪ್ರಶಾಂತ್ ಮಾಡಾಳ್ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದರು.

ಈ ಲಂಚ ಪ್ರಕರಣದ ತನಿಖೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು ಸೋಮವಾರ ಪ್ರಶಾಂತ್ ಮಾಡಾಳ್‌ರನ್ನು ಮೂರು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಮಾರ್ಚ್ 3ರಂದು ಲೋಕಾಯುಕ್ತ ವಿಶೇಷ ನ್ಯಾಯಾಲಯ ಪ್ರಶಾಂತ್ ಮಾಡಾಳ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ಲೋಕಾಯುಕ್ತ ವಿಶೇಷ ಕೋರ್ಟ್ ಮೊರೆ ಹೋಗಿದ್ದರು.
ಕರ್ನಾಟಕದ ಲೋಕಾಯುಕ್ತ ಪೊಲೀಸರು ಈ ಲಂಚ ಪ್ರಕರಣದಲ್ಲಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಮೊದಲ ಆರೋಪಿ ಎಂದು ಎಫ್‌ಐಆರ್ ದಾಖಲು ಮಾಡಿದ್ದಾರೆ. ಆಗ ಶಾಸಕರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದರು. ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ನ ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ನಡೆಸಿತು.
ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಪರವಾಗಿ ಕೆ. ಸಮನ್ ವಾದ ಮಂಡನೆ ಮಾಡಿದರು. ವಯಸ್ಸು ಆರೋಗ್ಯದ ಕಾರಣದ ಮೇಲೆ ಮಧ್ಯಂತರ ಜಾಮೀನು ನೀಡಿ ಎಂದು ಮನವಿ ಮಾಡಿದರು. ಲೋಕಾಯುಕ್ತ ಪೊಲೀಸರಿಗೆ ಆಕ್ಷೇಪಣೆ ಸಲ್ಲಿಕೆ ಮಾಡಲು ಅವಕಾಶ ನೀಡಿ, ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರು. ಮಾರ್ಚ್ 17ರಂದು ಅರ್ಜಿಯ ವಿಚಾರಣೆ ಮತ್ತೆ ಹೈಕೋರ್ಟ್‌ನಲ್ಲಿ ನಡೆಯಲಿದೆ.
ಕರ್ನಾಟಕ ಹೈಕೋರ್ಟ್ ಮಧ್ಯಂತರ ನಿರೀಕ್ಷಣಾ ಜಮೀನು ನೀಡುವಾಗ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ 48 ಗಂಟೆಯಲ್ಲಿ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿತ್ತು. ಶಾಸಕರು ಎರಡು ದಿನಗಳ ಕಾಲ ಈಗಾಗಲೇ ವಿಚಾರಣೆ ಎದುರಿಸಿದ್ದಾರೆ. ಸೋಮವಾರದಿಂದ ಶಾಸಕರ ಪುತ್ರ ಮಾಡಾಳ್ ಪ್ರಶಾಂತ್ ವಿಚಾರಣೆ ನಡೆಯುತ್ತಿದೆ.












Click it and Unblock the Notifications