ಜಾರಕಿಹೊಳಿ ರಾಜೀನಾಮೆ : 7 ಪ್ರಮುಖ ಬೆಳವಣಿಗೆಗಳು
ಬೆಂಗಳೂರು, ಜ.28 : ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸತೀಶ್ ಜಾರಕಿಹೊಳಿ ಅವರ ಮನವೊಲಿಸುವ ಕಾರ್ಯ ಸಾಗುತ್ತಿದೆ. ಮತ್ತೊಂದು ಕಡೆ ತಮ್ಮ ನಿರ್ಧಾರ ವಾಪಸ್ ಪಡೆಯುವುದಿಲ್ಲ ಎಂದು ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸತೀಶ್ ಜಾರಕಿಹೊಳಿ ರಾಜೀನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬೆಳವಣಿಗೆಗಳು ನಡೆದವು. ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ನಡುವೆ ಮಾತುಕತೆ ನಡೆಯಬೇಕಿತ್ತು. ಆದರೆ, ಅದು ಸಹ ಗುರುವಾರಕ್ಕೆ ಹೋಗಿದೆ. [ಜಾರಕಿಹೊಳಿ ರಾಜೀನಾಮೆ, ಸಿಎಂ ಹೇಳುವುದೇನು?]
'ಸತೀಶ್ ಜಾರಕಿಹೊಳಿ ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ತಮಗೆ ತಲುಪಿದ್ದು, ಜಾರಕಿಹೊಳಿ ಅವರಿಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಲಿದ್ದಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜೀನಾಮೆ ಹಿನ್ನಲೆಯಲ್ಲಿ ಬುಧವಾರ ನಡೆದ 7 ಪ್ರಮುಖ ಬೆಳವಣಿಗೆಗಳು ಇಲ್ಲಿವೆ.

ಸಂಧಾನಕಾರರಾಗಿ ಹೋದ ಕೆಂಪಯ್ಯ
ಬುಧವಾರ ಬೆಳಗ್ಗೆ ಗೋಕಾಕ್‌ನಲ್ಲಿರುವ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಗೃಹ ಸಚಿವರ ಸಲಹೆಗಾರರಾದ ಕೆಂಪಯ್ಯ ಅವರು ಭೇಟಿ ನೀಡಿ ಮಾತುಕತೆ ನಡೆಸಿದರು. ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದರು. ಆದರೆ, 'ನನ್ನ ಸಮಸ್ಯೆಯನ್ನು ನೀವು ಬಗೆಹರಿಸುತ್ತೀರಾ?' ಎಂದು ಕೆಂಪಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಜಾರಕಿಹೊಳಿ ಅವರು ಕೆಂಪಯ್ಯ ಅವರನ್ನು ವಾಪಸ್ ಕಳಿಸಿದರು.

ಸಿದ್ದರಾಮಯ್ಯ ಮನೆಯಲ್ಲಿ ನಾಯಕರ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಸಚಿವರ ಮತ್ತು ಪಕ್ಷದ ಹಿರಿಯ ನಾಯರಕ ಸಭೆ ನಡೆಯಿತು. ಸಭೆಯಲ್ಲಿ ಸತೀಶ್ ಜಾರಕಿಹೊಳಿ ಅವರ ರಾಜೀನಾಮೆ ಕುರಿತು ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವರು ಸತೀಶ್ ಜಾರಕಿಹೊಳಿ ಅವರ ಮನವೊಲಿಸಿ ರಾಜೀನಾಮೆ ವಾಪಸ್ ಪಡೆಯುವಂತೆ ಸೂಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದರು.

ಸಿದ್ದರಾಮಯ್ಯ ಅವರಿಂದ ಜಾರಕಿಹೊಳಿಗೆ ಕರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿ ಸಂಜೆ ಬೆಂಗಳೂರಿಗೆ ಬಂದು ಭೇಟಿ ಮಾಡುವಂತೆ ಸೂಚಿಸಿದರು. ಬೆಳಗಾವಿಯಲ್ಲಿ ಕುಳಿತು ರಾಜೀನಾಮೆ ವಿಚಾರ ಚರ್ಚೆ ನಡೆಸುವುದು ಬೇಡ, ಬೆಂಗಳೂರಿಗೆ ಬಂದು ಭೇಟಿಮಾಡಿ ಎಂದು ಹೇಳಿದರು. ಇದಕ್ಕೆ ಜಾರಕಿಹೊಳಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬುಧವಾರ ಸಂಜೆ ಬೆಂಗಳೂರಿಗೆ ಆಗಮಿಸುತ್ತೇನೆ ಎಂದು ಸಿಎಂಗೆ ಭರವಸೆ ನೀಡಿದರು.

ರಾಜೀನಾಮೆ ಅಂಗೀಕರಿಸೋಲ್ಲ : ಸಿಎಂ
ಸತೀಶ್ ಜಾರಕಿಹೊಳಿ ಅವರ ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ. ಅವರು ಸಲ್ಲಿಸಿರುವ ರಾಜೀನಾಮೆ ಪತ್ರ ತಮಗೆ ತಲುಪಿದ್ದು, ಜಾರಕಿಹೊಳಿ ಅವರಿಗೆ ಅವರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆಯಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದರು. ಕಾಂಗ್ರೆಸ್ ಪಕ್ಷದ ವಿವಿಧ ನಾಯಕರು ಜಾರಕಿಹೊಳಿ ರಾಜೀನಾಮೆ ವಾಪಸ್ ಪಡೆಯೋಲ್ಲ ಎಂದು ಹೇಳಿಕೆ ನೀಡಿದರು.

ಜಾರಕಿಹೊಳಿ ನಿವಾಸದಲ್ಲಿ ಬೆಂಬಲಿಗರ ಸಭೆ
ಸತೀಶ್ ಜಾರಕಿಹೊಳಿ ಅವರು ಗೋಕಾಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ವಿವಿಧ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ರಾಜೀನಾಮೆಯ ವಿಚಾರದ ಬಗ್ಗೆ ಬಹಳಷ್ಟು ಚರ್ಚೆ ನಡೆಯಿತು. ಸಭೆಯ ಬಳಿಕ ಮಾತನಾಡಿದ ರಮೇಶ್ ಜಾರಕಿಹೊಳಿ ಸತೀಶ್ ಜಾರಕಿಹೊಳಿಯವರು ರಾಜೀನಾಮೆ ವಾಪಸ್ ಪಡೆಯಲಿದ್ದಾರೆ ಎಂದು ಹೇಳಿದರು.

ರಾಜೀನಾಮೆ ವಾಪಸ್ ಪಡೆಯೋಲ್ಲ ಎಂದು ಘೋಷಣೆ
ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಸತೀಶ್ ಜಾರಕಿಹೊಳಿ ಅವರು, ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ, ಬೇರೆ ಖಾತೆಬೇಕೆಂದು ರಾಜೀನಾಮೆ ನೀಡಿಲ್ಲ. ತನ್ನ ನಿರ್ಧಾರಕ್ಕೆ ತಾವು ಬದ್ಧವಾಗಿದ್ದು, ಸಮಾಜ ಸೇವೆ ಮಾಡಲು ರಾಜೀನಾಮೆಯನ್ನು ನೀಡಿದ್ದೇನೆ ಎಂದು ಹೇಳಿದರು.

ಗುರುವಾರ ಸಿಎಂ ಸಿದ್ದರಾಮಯ್ಯ ಭೇಟಿ
ಸತೀಶ್ ಜಾರಕಿಹೊಳಿ ಅವರು ಬುಧವಾರ ಸಂಜೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಬಗ್ಗೆ ವಿವರಣೆ ನೀಡಬೇಕಿತ್ತು. ಆದರೆ, ಸಿಎಂ ಕಾರ್ಕಳ ಪ್ರವಾಸಕ್ಕೆ ಹೋಗಿರುವುದರಿಂದ ಬುಧವಾರ ಸಂಜೆ ನಡೆಯಬೇಕಾಗಿದ್ದ ಸಭೆಯನ್ನು ಮುಂದೂಡಲಾಗಿದ್ದು, ಗುರುವಾರ ಬೆಳಗ್ಗೆ ಸಿಎಂ ಸಿದ್ದರಾಮಮಯ್ಯ ಸತೀಶ್ ಜಾರಕಿಹೊಳಿ ನಡುವೆ ಮಾತುಕತೆ ನಡೆಯಲಿದೆ.












Click it and Unblock the Notifications