ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಪಟ್ಟ: ಸ್ಪೋಟಕ ಮಾಹಿತಿ ಬಹಿರಂಗ
ತುಮಕೂರು, ಜೂನ್ 28: ರಾಜ್ಯ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕಳೆದ ಮೂರ್ನಾಲ್ಕು ತಿಂಗಳಿನಿಂದ ಹೆಚ್ಚು ಚರ್ಚೆಯಾಗುತ್ತಿದೆ. ಒಂದು ಕಡೆ ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಪಟ್ಟದ ಮೇಲೆ ಕಣ್ಣೀಟ್ಟಿದ್ದು, ಅಧಿಕಾರ ಹಂಚಿಕೆ ಸೂತ್ರದ ವಿಚಾರ ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ಚರ್ಚೆಯಾಗಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನವನ್ನ ಸೃಷ್ಟಿಸಿದ್ದರು. ಇತ್ತ ಡಿ ಕೆ ಶಿವಕುಮಾರ್ ಅವರನ್ನ ಕೆಪಿಸಿಸಿ ಪಟ್ಟದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಅವರ ಬಣ ಪಣ ತೊಟ್ಟಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಇದೀಗ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಸಹಕಾರ ಸಚಿವ ಕೆಏನ್ ರಾಜಣ್ಣ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಮುಂಬರುವ ಆಗಸ್ಟ್ ಸೆಪ್ಟೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ. ಪಿಡಬ್ಲ್ಯೂಡಿ ಸಚಿವರಾದಂತಹ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗಬಹುದು ಎಂದು ಸ್ಪೋಟಕವಾದ ಹೇಳಿಕೆ ನೀಡಿದರು. ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗಬಹುದು. ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆ ಆಗುತ್ತದೆ ಬದಲಾವಣೆ ಯಾವಾಗ ಅಂತ ಹೈಕಮಾಂಡ್ ನಿರ್ಧರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕೆ.ಎನ್ ರಾಜಣ್ಣ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಡಿಕೆ ಶಿವಕುಮಾರ್ ಸಿಎಂ ಆದರು ಆಗಲಿ ಪಿಎಂ ಆದರು ಆಗಲಿ. ಡಿಕೆ ಶಿವಕುಮಾರ್ ಸಿಎಂ ಆಗೋದು ಹೈಕಮಾಂಡ್ ಅವರಿಗೆ ಬಿಟ್ಟ ವಿಚಾರ. ಯಾರಿಗೆ ಯಾವ ಸ್ಥಾನ ಕೊಡುತ್ತಾರೋ ಎಲ್ಲವೂ ಕೂಡ ಹೈಕಮಾಂಡ್ ಅವರ ನಿರ್ಧಾರಕ್ಕೆ ಬಿಟ್ಟಿದ್ದು ಎಂದು ಕೆ.ಎನ್ ರಾಜಣ್ಣ ಹೇಳಿಕೆ ನೀಡಿದರು.
ಕ್ರಾಂತಿ ಎಂದರೇ ಹಲವಾರು ರೀತಿಯ ಕ್ರಾಂತಿ ಇದೆ.ಜಗಜೀವನ್ ರಾಮ್ ಹಸಿರು ಕ್ರಾಂತಿ ಮಾಡಿಲ್ವಾ, ರಷ್ಯಾದ ಕ್ರಾಂತಿಯೂ ಸಹ ಅಕ್ಟೋಬರ್ ನಲ್ಲಾಗಿರೋದು. ನಾನು ಹೇಳಿದ ತಕ್ಷಣ ಬರೀ ಕಾಂಗ್ರೇಸ್ ನಲ್ಲಿ ಮಾತ್ರ ಕ್ರಾಂತಿ ಆಗುತ್ತದೆ ಅಂದುಕೊಳ್ಳಬಾರದು. ಬಿಜೆಪಿಯಲ್ಲೂ ಕ್ರಾಂತಿ ಆಗುತ್ತಿದೆ. ಕೇಂದ್ರ ಸರ್ಕಾರದಲ್ಲೂ ಸಹ ಬದಲಾವಣೆ ನಿರೀಕ್ಷೆ ಮಾಡಬಹುದು. ಆರ್ ಎಸ್ಎಸ್ ನವರ ಸೆಟ್ ಆಫ್ ಪ್ರಿನ್ಸಿಪಲ್ ನಂತೆ 75 ವರ್ಷದ ನಂತರ ಯಾವುದೇ ಹುದ್ದೆಯಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಅಡ್ವಾಣಿಗೆ ಪ್ರಧಾನಿ ಸ್ಥಾನ ಸಿಕ್ಕಿಲ್ಲ.
ಈಗ ಅದೇ ಪ್ರಿನ್ಸಿಪಲ್ ಮೋದಿಯವರಿಗೂ ಆಗುತ್ತದೆ. ಅದು ಒಂದು ಬದಲಾವಣೆ ಕ್ರಾಂತಿ ಅಲ್ವಾ? ಅದನ್ನು ಯಾಕೆ ನೀವೂ ಊಹೆ ಮಾಡಲ್ಲ. ಬರೀ ಕರ್ನಾಟಕದ ಕಾಂಗ್ರೆಸ್ ಪಾರ್ಟಿಯನ್ನು ಯಾಕೆ ಊಹೆ ಮಾಡ್ತೀರಾ. ಸಿಎಂ ಬದಲಾಯಿಸುತ್ತಾರೆ, ಸಂಪುಟ ವಿಸ್ತರಣೆ, ಅಧ್ಯಕ್ಷ ಬದಲಾವಣೆ.. ಬರೀ ಇದರ ಬಗ್ಗೆ ಯಾಕೆ ಚರ್ಚೆ ಮಾಡುತ್ತೀರಾ.ರಾಜಕೀಯ ನಿಂತ ನೀರಲ್ಲ ಅದು ಬದಲಾಗುತ್ತಿರುತ್ತದೆ. ರಾಜಕೀಯ ಸಂದರ್ಭಕ್ಕೆ ಅನುಗುಣವಾಗಿ ಬದಲಾಗುತ್ತದೆ ಎಂದು ಹೇಳಿದರು.
ನಮ್ಮ ಕಾಂಗ್ರೆಸ್ ನಲ್ಲಿ ಒಟ್ಟು ಮೂರು ಪವರ್ ಸೆಂಟರ್‌ಗಳಿವೆ. ಹೈಕಮಾಂಡ್, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಪವರ್ ಸೆಂಟರ್. ಕೆಲ ಮಾಧ್ಯಮದವರು ರಾಜಣ್ಣನವರು ಸಿದ್ದರಾಮಯ್ಯನವರಿಂದ ದೂರಾಗಿದ್ದಾರೆಂದು ಸುದ್ದಿ ಮಾಡಿದ್ದಾರೆ. ಸಿದ್ಧರಾಮಯ್ಯ ಇರೊದ್ರಿಂದಲೇ ನಾನು ರಾಜಕಾರಣ ಮಾಡುತ್ತಿರುವುದು. ಅವರಿಲ್ಲದಿದ್ದರೇ ರಾಜಕೀಯ ಬಿಡುತ್ತೀನಿ ಎಂದು ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಅವರು ಹೇಳಿದರು.












Click it and Unblock the Notifications