ಸಂತೋಷ್ ಆತ್ಮಹತ್ಯೆ: ಬಿಜೆಪಿ ಹೇಳಿದ ಸದಾರಮೆ ಪಾತ್ರಧಾರಿ, ಏಕಾಂಗಿ ಪ್ರೇಕ್ಷಕ ಯಾರು?
ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ವಾಗ್ಯುದ್ದ ತೀವ್ರವಾಗಿ ಸಾಗುತ್ತಿದೆ. ಇನ್ನು, ಈ ಎರಡು ರಾಷ್ಟ್ರೀಯ ಪಕ್ಷಗಳ ಐಟಿ ಸೆಲ್ ಕೂಡ ಕೆಸೆರೆರೆಚಾಟದಲ್ಲಿ ತೊಡಗಿಸಿಕೊಂಡಿವೆ.
ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದಿಲ್ಲ ಎನ್ನುವ ಈ ನಾಯಕರುಗಳ ಹೇಳಿಕೆಗಳು ಬರೀ ಮಾತಿಗೆ ಸೀಮಿತವಾಗಿದೆ. ಬಿಜೆಪಿ ಮುಖಂಡ ರಮೇಶ್ ಜಾರಕಿಹೊಳಿಯವರು ಸಂತೋಷ್ ಆತ್ಮಹತ್ಯೆಯ ವಿಚಾರದಲ್ಲಿ ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ಎಳೆದು ತಂದಿದ್ದಾರೆ.
ಇನ್ನು, ಇನ್ನೋರ್ವ ಬಿಜೆಪಿಯ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯುತ್ನಾಳ್ "ಸಂತೋಷ ಆತ್ಮಹತ್ಯೆಯ ಹಿಂದೆ ಬಿಜೆಪಿ ಯುವ ನಾಯಕ ಮತ್ತು ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರ ಕೈವಾಡವಿದೆ"ಎಂದು ಆರೋಪಿಸಿದ್ದಾರೆ.
ಇನ್ನು, ಎರಡು ಪಕ್ಷಗಳ ಐಟಿ ಘಟಕಗಳು ಈ ವಿಚಾರದಲ್ಲಿ ಟ್ವೀಟ್ ಮೇಲೆ ಟ್ವೀಟ್ ಮಾಡುತ್ತಿವೆ. ಕಾಂಗ್ರೆಸ್ಸಿನ ಟ್ವೀಟಿಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಘಟನೆಯ ಹಿಂದಿನ ಸದಾರಮೆ ಪಾತ್ರಧಾರಿ ಯಾರು ಎನ್ನುವುದು ಜಗತ್ತಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದೆ.

ಸಂತೋಷ್ ಪ್ರಕರಣ ಕಾಂಗ್ರೆಸ್ಸಿನ ಟೂಲ್ ಕಿಟ್ ಭಾಗವಾಗಿರಬಹುದು
'ಸಂತೋಷ್ ಪ್ರಕರಣ ಕಾಂಗ್ರೆಸ್ಸಿನ ಟೂಲ್ ಕಿಟ್ ಭಾಗವಾಗಿರಬಹುದು ಎನ್ನುವುದಕ್ಕೆ ಹಲವಾರು ದೃಷ್ಟಾಂತಗಳಿವೆ. ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ ಮತ್ತು ಅವರಿಂದ ಹಿಂದೆ ರಾಹುಲ್ ಗಾಂಧಿಯ ಸಹಿ ನಕಲು ಮಾಡಲಾಗಿದೆ. 40% ಎನ್ನುವುದು ಕಾಂಗ್ರೆಸ್ಸಿನ ಸೃಷ್ಟಿ, ಸಂತೋಷ್ ಪಾಟೀಲ್ ಅವರಿಂದಲೂ 40% ಕಮಿಷನ್ ಪ್ರಸ್ತಾಪವಾಗಿದೆ' ಎಂದು ಬಿಜೆಪಿಯ ಐಟಿ ಸೆಲ್ ಟ್ವೀಟ್ ಮಾಡಿತ್ತು.

ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು
"Dear @BJP4Karnataka, ಸಿಎಂ ಬೊಮ್ಮಾಯಿ, ಸಚಿವ ಮಾಧುಸ್ವಾಮಿ ಮೂಲತಃ ಜನತಾ ಪರಿವಾರದ ಕಾರ್ಯಕರ್ತರು. ಸುಧಾಕರ್, ಮುನಿರತ್ನ ಸೇರಿದಂತೆ ನಿಮ್ಮಲ್ಲಿರುವ 16ಕ್ಕೂ ಹೆಚ್ಚು ಮಂದಿ ಮೂಲತಃ ಕಾಂಗ್ರೆಸ್ ಕಾರ್ಯಕರ್ತರು. ಅವರ ಮೇಲೆ ಕಣ್ಣಿಟ್ಟಿರಿ, ಸ್ವಲ್ಪ ಹುಷಾರಾಗಿರಿ! ಅವರೆಲ್ಲರೂ ಬಿಜೆಪಿಯನ್ನು ಮುಗಿಸುವ ಟೂಲ್ ಕಿಟ್ ಭಾಗವೇ!' ಎಂದು ಕರ್ನಾಟಕ ಕಾಂಗ್ರೆಸ್ಸಿನ ಐಟಿ ಸೆಲ್ ಬಿಜೆಪಿಗೆ ತಿರುಗೇಟು ನೀಡಿತ್ತು.

ಬಿಜೆಪಿ ಎಂಬ ಮೂರೂ ಬಿಟ್ಟ ಪಕ್ಷ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು
"ಬಿಜೆಪಿ ಎಂಬ ಮೂರೂ ಬಿಟ್ಟ ಪಕ್ಷ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಲಜ್ಜೆಗೆಟ್ಟು ಯಾವ ಕೀಳು ಹಂತಕ್ಕೂ ಇಳಿದು ಪ್ರಪಾಗಂಡಾ ಸೃಷ್ಟಿಸಬಲ್ಲದು. ರಾಜಕಾರಿಣಿಗಳಿಗೆ, ರಾಜಕೀಯ ಪಕ್ಷಕ್ಕೆ ಇರಬೇಕಾದ ಕನಿಷ್ಠ ಸಾರ್ವಜನಿಕ ಲಜ್ಜೆಯೂ ಬಿಜೆಪಿಗೆ ಇಲ್ಲ. ಆಧಾರ, ಪುರಾವೆಗಳೇ ಇಲ್ಲದೆ ತಮ್ಮದೇ ಪಕ್ಷದ ಕಾರ್ಯಕರ್ತನ ಸಾವನ್ನು ಅವಮಾನಿಸುತ್ತಿದೆ"ಎಂದು ಬಿಜೆಪಿಯ ಟ್ವೀಟಿಗೆ ಕಾಂಗ್ರೆಸ್ ಮತ್ತೊಂದು ಟ್ವೀಟ್ ಅನ್ನು ಮಾಡಿತ್ತು.

ಕಾಂಗ್ರೆಸ್ಸಿನ ಟ್ವೀಟಿಗೆ ತಿರುಗೇಟು ನೀಡಿರುವ ಬಿಜೆಪಿಯ ಐಟಿ ಸೆಲ್
ಕಾಂಗ್ರೆಸ್ಸಿನ ಟ್ವೀಟಿಗೆ ತಿರುಗೇಟು ನೀಡಿರುವ ಬಿಜೆಪಿಯ ಐಟಿ ಸೆಲ್, "ಸದಾರಮೆ ಪಾತ್ರಧಾರಿ ಯಾರು, ಅದರ ಏಕಾಂಗಿ ಪ್ರೇಕ್ಷಕ ಯಾರು ಎಂಬುದು ಲೋಕಕ್ಕೆ ತಿಳಿದಿದೆ. ಸಂತೋಷ್ ಪಾಟೀಲ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ಸುಳ್ಳೋ? ಕಾಂಗ್ರೆಸ್ ಪಕ್ಷದಿಂದ ಸಂತೋಷನನ್ನು ವಜಾಗೊಳಿಸಿದ್ದು ಸುಳ್ಳೋ? ಈ ಎರಡು ವಿಚಾರದ ಸತ್ಯಾಸತ್ಯತೆ ತೆರೆದಿಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯಾ?" ಎಂದು ಪ್ರಶ್ನಿಸಿದೆ.












Click it and Unblock the Notifications