ಬಡವರು ಹೊಟ್ಟೆ ತುಂಬ ಊಟ ಮಾಡುವುದನ್ನು ಬಿಜೆಪಿ ಸಹಿಸಲ್ಲ- ಮುಖ್ಯಮಂತ್ರಿ ಸಿದ್ದರಾಮಯ್ಯ
ಬಳ್ಳಾರಿ, ನವೆಂಬರ್ 07: ಸಂಡೂರು ಉಪ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಬಗ್ಗೆ ಸಮೀಕ್ಷೆ ನಡೆಸಿದಾಗ ಅತಿ ಹೆಚ್ಚಿನ ಬೆಂಬಲ ಸಂಡೂರಿನ ಜನರಿಂದ ವ್ಯಕ್ತವಾಗಿದ್ದು ಅನ್ನಪೂರ್ಣ ಅವರ ಪರವಾಗಿ. ಆದ್ದರಿಂದ ಇವರನ್ನೇ ಅಭ್ಯರ್ಥಿಯನ್ನಾಗಿಸಿದ್ದೇವೆ. ಹೀಗಾಗಿ ಇವರ ಗೆಲುವು ಖಚಿತ. ಆದರೆ, ಈ.ತುಕಾರಾಮ್ 35 ಸಾವಿರ ಅಂತರದಿಂದ ಗೆದ್ದಿದ್ರು, ಈ ಬಾರಿ ಅನ್ನಪೂರ್ಣಮ್ಮ 50 ಸಾವಿರ ಮತಗಳ ಅಂತರದಿಂದ ಗೆಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಮತಯಾಚನೆ ಮಾಡಿದ್ದಾರೆ.
ಸಂಡೂರಿನಲ್ಲಿ ಮತಯಾತ್ರೆಯಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲೂ ಹೀಗೇ ಆಗಿತ್ತು. ಈ.ತುಕಾರಾಮ್ ಅವರು ಲೋಕಸಭೆಗೆ ಸ್ಪರ್ಧಿಸಲು ಸಿದ್ಧರಿರಲಿಲ್ಲ. ಆದರೆ, ನಾವು ನಡೆಸಿದ ಸಮೀಕ್ಷೆಯಲ್ಲಿ ಈ.ತುಕಾರಾಮ್ ಅವರು ಸ್ಪರ್ಧಿಸಿದರೆ ಮಾತ್ರ ಗೆಲುವು ಖಚಿತ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಹೀಗಾಗಿ ನಾವು ಬಲವಂತವಾಗಿ ಒಪ್ಪಿಸಿ ಈ.ತುಕಾರಾಮ್ ಅವರನ್ನು ಕಣಕ್ಕೆ ಇಳಿಸಿದೆವು. ಅವರು ಗೆದ್ದು ಬಂದರು ಎಂದರು.

ಈಗ ಅನ್ನಪೂರ್ಣಮ್ಮ ಮತ್ತು ತುಕಾರಾಮ್ ಅವರು ಜೋಡೆತ್ತಾಗಿ ಸಂಡೂರಿನ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸುತ್ತಾರೆ. ಅನ್ನಪೂರ್ಣಮ್ಮ ಗೆದ್ದರೆ ನಾನೇ ಗೆದ್ದಂತೆ. ನೀವು ಅನ್ನಪೂರ್ಣಮ್ಮ ಅವರಿಗೆ ಕೊಡುವ ಮತ ನನಗೇ ಕೊಟ್ಟಂತೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ಈ ಬಾರಿ ಅನ್ನಪೂರ್ಣಮ್ಮ ಅವರು ಗೆಲ್ಲುವುದೂ ಅಷ್ಟೇ ಸತ್ಯ.
ಸಂತೋಷ್ ಲಾಡ್ ಅವರಿಗೆ ಅನ್ನಪೂರ್ಣಮ್ಮ ಅವರನ್ನು ಗೆಲ್ಲಿಸಿಕೊಂಡೇ ಬರಬೇಕು ಎನ್ನುವ ಮಾತು ಹೇಳಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಿಂದ ಅನ್ನಪೂರ್ಣಮ್ಮ ಅವರು ಗೆಲ್ಲುತ್ತಾರೆ. ನಾವು ನುಡಿದಂತೆ ನಡೆದು, ಜನರ ಕೆಲಸ ಮಾಡಿ, ನಾವು ಮಾಡಿದ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ. ನಿಮ್ಮ ಮತವೇ ನನಗೆ ಕೊಡುವ ಕೂಲಿ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿಬಿಡಲಿ ಎಂದು ಬಿಜೆಪಿಯವರು ಕಾಯ್ತಾ ಇದ್ದಾರೆ. ನಮ್ಮ ಸರ್ಕಾರ ಇರುವವರೆಗೂ ಯಾವ ಗ್ಯಾರಂಟಿ ಯೋಜನೆಗಳನ್ನೂ ನಿಲ್ಲಿಸಲ್ಲ. ಇದಕ್ಕೆ ನಾನೇ ಗ್ಯಾರಂಟಿ ಎಂದು ಭರವಸೆ ನೀಡಿದರು.
ಬಸವಣ್ಣರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಎಲ್ಲಾ ಕಚೇರಿಗಳಲ್ಲೂ ಬಸವಣ್ಣನ ಫೋಟೋ ಕಡ್ಡಾಯಗೊಳಿಸಿದ್ದು ನಮ್ಮ ಸರ್ಕಾರ. ರಾಜ್ಯದಲ್ಲಿ ಸೌಹಾರ್ದಯುತ ವಾತಾವರಣ ಸೃಷ್ಟಿಸುವುದು, ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸುವುದು ನಮ್ಮ ಗುರಿಯಾಗಿದೆ ಎಂದರು.

ಬಡವರು ಹೊಟ್ಟೆ ತುಂಬ ಊಟ ಮಾಡುವುದನ್ನು ಬಿಜೆಪಿ ಸಹಿಸಲ್ಲ. ಬಿಜೆಪಿ ಸಾಮಾಜಿಕ ನ್ಯಾಯ, ಮೀಸಲಾತಿ ಪರವಾಗಿಲ್ಲ. ಜನಸಂಖ್ಯೆಗೆ ಆಧಾರವಾಗಿ ಎಸ್‌ಸಿಎಸ್‌ಪಿ / ಟಿಎಸ್‌ಪಿ ಕಾಯ್ದೆ ಜಾರಿ ಮಾಡಿರುವುದು ನಮ್ಮ ಸರ್ಕಾರ ಮಾತ್ರ. ಕೇಂದ್ರದ ನರೇಂದ್ರ ಮೋದಿ ಅವರ ಸರ್ಕಾರವಾಗಲೀ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಾಗಲೀ ಏಕೆ ಈ ಕಾಯ್ದೆ ಜಾರಿಯಾಗಿಲ್ಲ? ಎಂದು ಪ್ರಶ್ನಿಸಿದರು.
"ನಾ ಖಾವೂಂಗಾ - ನಾ ಖಾನೆ ದೂಂಗಾ" ಎನ್ನುವ ಮೋದಿಯವರೇ ಜನಾರ್ಧನ ರೆಡ್ಡಿಯವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದು ಏಕೆ? ಇಡೀ ಜಿಲ್ಲೆಯ ಗಣಿಯನ್ನು ಲೂಟಿ ಮಾಡಿದ್ದ ರೆಡ್ಡಿ ನನಗೆ ಸವಾಲು ಹಾಕಿದ್ದರು. ನಾನು ಸವಾಲು ಸ್ವೀಕರಿಸಿ ಪಾದಯಾತ್ರೆ ನಡೆಸಿದ ಮೇಲೆ ರೆಡ್ಡಿ ಅವನತಿ ಶುರುವಾಯಿತು. ಈಗ ಬಿಜೆಪಿ ರೆಡ್ಡಿಯವರಿಗೆ ಸಂಡೂರಿನ ಜವಾಬ್ದಾರಿ ನೀಡಿದೆ. ಇಂಥಾ ರೆಡ್ಡಿಯ ಅಭ್ಯರ್ಥಿಗೆ ಮತ ಹಾಕ್ತೀರಾ?
ನಾವು ಜಾರಿ ಮಾಡಿದ ಭಾಗ್ಯಗಳು, ಗ್ಯಾರಂಟಿ ಯೋಜನೆಗಳ ಹಣ ನಿಮ್ಮದೇ. ನೀವೇ ಕಟ್ಟಿದ ತೆರಿಗೆ ಹಣ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ದುರ್ಬಲ ವರ್ಗಗಳಿಗೆ ಶಕ್ತಿ ನೀಡಲು ನಾವು ಈ ಯೋಜನೆಗಳನ್ನು ಜಾರಿ ಮಾಡಿದೆವು. ಜನಾರ್ಧನ ರೆಡ್ಡಿ ಬಳ್ಳಾರಿಗೆ ಕಾಲಿಡದಂತೆ ನ್ಯಾಯಾಲಯ ನಿರ್ಬಂಧ ಹೇರಿತ್ತು. ಆದ್ರೆ ಯಾಕೋ ಈಗ ಅನುಮತಿ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ದಯವಿಟ್ಟು ಅವರ ಮಾತು ಕೇಳಬೇಡಿ. ರೆಡ್ಡಿ, ಶ್ರೀರಾಮಾಲು ಸೇರಿ ಬಳ್ಳಾರಿ ಜಿಲ್ಲೆ ಹಾಳು ಮಾಡುತ್ತಾರೆ ಎಂದರು.
ಲೋಕಸಭೆ ಚುನಾವಣೆ ಮುಗಿದ ಮೇಲೆ ಗ್ಯಾರಂಟಿಗಳನ್ನು ನಿಲ್ಲಿಸ್ತಾರೆ, ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ಬಿಜೆಪಿ ಆಗ ಸುಳ್ಳು ಹೇಳಿದ್ದರು. ಈಗ ಉಪ ಚುನಾವಣೆ ಬಳಿಕ ನಿಲ್ಲಿಸ್ತಾರೆ ಎಂದು ಹೊಸ ರಾಗ, ಹೊಸ ಸುಳ್ಳು ಶುರು ಮಾಡಿದ್ದಾರೆ. ಇಂಥವಕ್ಕೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications