ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳಿಗೆ ಹಾಹಾಕಾರ:ಇಬ್ಬರ ನಡುವೆ ತಬ್ಬಿಬ್ಬಾದ ನಾಗರಿಕ

|
Google Oneindia Kannada News

ಮರಳು ಲಾರಿ ಮುಷ್ಕರ ಹದಿನಾರನೇ ದಿನಕ್ಕೆ ಕಾಲಿಡುತ್ತಿದೆ. ಲಾರಿ ಮಾಲೀಕರು ಮುಷ್ಕರ ನಡೆಸಿದರೆ ತಮ್ಮ ಬೇಡಿಕೆ ಈಡೇರುವ ತನಕ ಅಥವಾ ಬೇಡಿಕೆ ಈಡೇರಿಸುವ ಭರವಸೆ ನೀಡುವ ತನಕ ವಾಪಸ್ ತೆಗೆದುಕೊಂಡ ಉದಾಹರಣೆಗಳು ಕಮ್ಮಿ. ಈ ಬಾರಿ ಸರಕಾರ ಲಾರಿ ಮಾಲೀಕರನ್ನು ಇದುವರೆಗೂ ಮಾತುಕತೆಗೆ ಆಹ್ವಾನಿಸಲಿಲ್ಲ. ಒಂದೆಡೆ ಮುಷ್ಕರಕ್ಕೆ ಸರಕಾರ ಕ್ಯಾರೇ ಅನ್ನುತ್ತಿಲ್ಲ, ಇನ್ನೊಂದೆಡೆ ಮರಳು ಲಾರಿ ಮಾಲೀಕರೂ ಜಗ್ಗುತ್ತಿಲ್ಲ. ನಡುವೆ ತೊಂದರೆ ಅನುಭವಿಸುತ್ತಿರುವವನು ಜನ ಸಾಮಾನ್ಯ.

ಸರಕಾರದ ನೂತನ ಮರಳು ನೀತಿಯನ್ನು ವಿರೋಧಿಸಿ ಮರಳು ಲಾರಿ ಮಾಲೀಕರು ನಡೆಸುತ್ತಿರುವ ಮುಷ್ಕರಕ್ಕೆ ಸರಕು ಸಾಗಣೆ ವಾಹನಗಳ ಸಂಘವೂ ಬೆಂಬಲ ಸೂಚಿಸಿವೆ. ಇದೇ ಶನಿವಾರ (ಜ 11) ಮಧ್ಯರಾತ್ರಿಯಿಂದ ಎಲ್ಲಾ ಸರಕು ಸಾಗಣೆ ವಾಹನಗಳೂ ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಅಲ್ಲಿಗೆ ಜನಸಾಮಾನ್ಯರ ಗತಿ ದೇವರೇ ಬಲ್ಲ.

ಅಕ್ರಮವಾಗಿ ಸರಬರಾಜು ಆಗುತ್ತಿರುವ ಮರಳು ಲೋಡಿಗೆ ಬೇಡಿಕೆಯೋ ಬೇಡಿಕೆ. ಲೋಡ್ ವೊಂದಕ್ಕೆ ಐವತ್ತರಿಂದ ಅರವತ್ತು ಸಾವಿರ ರೂಪಾಯಿವರೆಗೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ. salaried employees ತಮ್ಮ ಬಜೆಟಿನಲ್ಲಿ/ಅವಧಿಯಲ್ಲಿ ಸ್ವಂತ ಮನೆ ನಿರ್ಮಿಸುವ ಲೆಕ್ಕಾಚಾರಕ್ಕೆ ಲಾರಿ ಮುಷ್ಕರದ ಬಿಸಿಯಿಂದ ಕೊಡಲಿ ಏಟು ಬೀಳುವುದಂತೂ ಗ್ಯಾರಂಟಿ. (ಬೇರುಮಟ್ಟದಿಂದಲೇ ಮರಳು ದಂಧೆಗೆ ಕಡಿವಾಣ)

ಶನಿವಾರ (ಜ 4) ಲೋಕಪಯೋಗಿ ಸಚಿವ ಮಹಾದೇವ ಪ್ರಸಾದ್ ಅವರ ಜೊತೆ ಚರ್ಚಿಸಿ ಮರಳು ಸಮಸ್ಯೆ ಬಗೆಹರಿಸಲಾಗಿದೆ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಮರಳು ಲಾರಿ ಮಾಲೀಕರ ಒಂದು ಸಂಘವು ಮುಷ್ಕರ ಹಿಂದಕ್ಕೆ ಪಡೆಯಲು ಒಪ್ಪಿದೆ ಎಂದು ಕಾನೂನು ಸಚಿವ ಜಯಚಂದ್ರ ಹೇಳಿದ್ದಾರೆ. ಆದರೆ ಇದೆಲ್ಲಾ ಸತ್ಯಕ್ಕೆ ದೂರ, ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ ಎಂದು ಲಾರಿ ಮಾಲೀಕರ ಸಂಘ ಪತ್ರಿಕಾ ಪ್ರಕಟಣೆ ನೀಡಿದೆ.

ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್ ಆರ್ ರಂಗನಾಥ್ ಜೊತೆ ಮಾತನಾಡುತ್ತಿದ್ದ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳುವುದೇ ಬೇರೆ. ಸರಕಾರದ ವಿವಿಧ ಇಲಾಖೆಯ ಅಧಿಕಾರಿಗಳ ಟಾರ್ಚರ್ ನಮಗೆ ತಡೆದು ಕೊಳ್ಳಲಾಗುತ್ತಿಲ್ಲ ಎನ್ನುವ ಗಂಭೀರ ಆರೋಪ ಮಾಡುತ್ತಾರೆ.

Sand lorry owners strike enteredd into sixteenth day

PWD, RTO ಇಲಾಖೆಯ ಅಧಿಕಾರಿಗಳಿಗೆ ಲಂಚ ನೀಡಿದರೆ ಮಾತ್ರ ಲಾರಿ ಮುಂದಕ್ಕೆ ಹೋಗಲು ಸಾಧ್ಯವಂತೆ. ಲಂಚ ನೀಡದಿದ್ದರೆ ನಮ್ಮ ಲಾರಿ ಡ್ರೈವರ್ ಮೇಲೆ ಬೇಕಾಬಿಟ್ಟಿ ಕೇಸ್ ಜಡಾಯಿಸಿ ಬಂಧಿಸುತ್ತಾರೆಂದು ಷಣ್ಮುಗಪ್ಪ ಹೇಳುತ್ತಾರೆ.

ಅಧಿಕಾರಿಗಳ ಕುಮ್ಮಕ್ಕಿನಿಂದನೇ ಕರ್ನಾಟಕದ ವಿವಿಧ ಭಾಗಗಳಿಗೆ ಸಾಗ ಬೇಕಾಗಿರುವ ಸುಮಾರು ಮುನ್ನೂರು ಲೋಡ್ ಮರಳು ಅಕ್ರಮವಾಗಿ ಕೇರಳಕ್ಕೆ ಸಾಗುತ್ತಿದೆ. ಅಧಿಕಾರಿಗಳೇ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆಂದು ಷಣ್ಮುಗಪ್ಪ, ರಂಗನಾಥ್ ಜೊತೆ ನಡೆದ ಮಾತುಕತೆಯ ಸಂದರ್ಭದಲ್ಲಿ ಆರೋಪಿಸುತ್ತಾರೆ. (ಅಕ್ರಮ ಮರಳು ಗಣಿಗಾರಿಕೆ ಮಾಡಿದರೆ ಜೈಲು)

ಜನತೆಗೆ ಆಗುವ ತೊಂದರೆಯ ಬಗ್ಗೆ ನಮಗೂ ಅರಿವಿದೆ. ನಾವು ಮರಳು ಸಾಗಿಸುವ ಕೂಲಿ ಕಾರ್ಮಿಕರು, ಸರಕಾರ ಹೇಳುವುದೊಂದು ಮಾಡುವುದೊಂದು ಆಗಬಾರದು. ಎಸ್ ಎಂ ಕೃಷ್ಣ, ಕುಮಾರಸ್ವಾಮಿ ಅಧಿಕಾರದ ಅವಧಿಯಲ್ಲಿ ನಮಗೆ ತೊಂದರೆಗಳು ಇರುತ್ತಿರಲಿಲ್ಲ. ಅಶೋಕ್ ಸಚಿವರಾಗಿದ್ದಾಗಲೂ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುತ್ತಿದ್ದೆವು.

ಸಿದ್ದರಾಮಯ್ಯ ಅವರನ್ನು ಎರಡು ಬಾರಿ ಭೇಟಿ ಮಾಡಿ ನಮ್ಮ ಸಮಸ್ಯೆ ಬಹೆಗರಿಸಿ ಎಂದು ಬೇಡಿಕೊಂಡಿದ್ದೆವು. ಆಶ್ವಾಸನೆ ನೀಡಿದ ಮುಖ್ಯಮಂತ್ರಿಗಳು ಆಮೇಲೆ ಸುಮ್ಮನಾದರು. ಹಾಗಾಗಿ ಮುಷ್ಕರ ನಡೆಸದೇ ನಮಗೆ ಬೇರೆ ದಾರಿಯಿಲ್ಲ ಎನ್ನುತ್ತಾರೆ ಷಣ್ಮುಗಪ್ಪ.

ಸರಕಾರ ಮತ್ತು ಲಾರಿ ಮಾಲೀಕರ ಜಗ್ಗಾಟದಿಂದ ತೊಂದರೆ ಅನುಭವಿಸುತ್ತಿರುವವನು ಜನಸಾಮಾನ್ಯ ಎನ್ನುವುದು ಇಬ್ಬರಿಗೂ ತಿಳಿದಿರಲಿ. ಹಾಗೇ, ಮಾತೆದ್ದಿದರೆ ಮುಷ್ಕರಕ್ಕೆ ಮುಂದಾಗುವ ಲಾರಿ ಮಾಲೀಕರೂ ತಮ್ಮ ನಿಲುವನ್ನು ಬದಲಿಸಿ ಕೊಳ್ಳುವುದೂ ಸೂಕ್ತ.

ಏನಿದು ನೂತನ ಮರಳು ನೀತಿ? ರಾಜ್ಯದ 90 ತಾಲೂಕುಗಳ 7207 ಚದರ ಹೆಕ್ಟೇರ್ ಪ್ರದೇಶದಲ್ಲಿ ಮರಳುಗಾರಿಕೆ ನಡೆಯುತ್ತಿದೆ. 7.5 ದಶಲಕ್ಷ ಟನ್ ಸಾಧಾರಣ ಮರಳು, 1.5 ದಶಲಕ್ಷ ಟನ್ ಉತ್ಪನ್ನವಾಗುವ ಮರಳು ಸೇರಿ ಒಟ್ಟು 9 ದಶಲಕ್ಷ ಟನ್ ಮರಳು ಲಭ್ಯವಾಗುತ್ತಿದೆ. ಇಷ್ಟೆಲ್ಲಾ ಮರಳಿನ ಲಭ್ಯತೆ ಇದ್ದರೂ ಅಕ್ರಮ ಮರಳುಗಾರಿಕೆಯಿಂದ ಕೃತಕ ಅಭಾವವನ್ನು ಕಾಳಸಂತೆ ಕೋರರು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಿದ್ದು ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಇದರ ಅನ್ವಯ, ಜಿಲ್ಲಾ ಉಸ್ತುವಾರಿ ಸಮಿತಿಯಿಂದ ಗುರುತಿಸಲ್ಪಟ್ಟ ಮರಳು ಬ್ಲಾಕಿನಲ್ಲಿ, ನದಿ ಪಾತ್ರದಲ್ಲಿ ಮಾತ್ರ ಮರಳು ತೆಗೆಯ ಬೇಕಾಗುತ್ತದೆ.

ಹೀಗೆ ಇಲಾಖೆಯಿಂದ ಗುರುತಿಸಲ್ಪಟ್ಟ ಪ್ರದೇಶದಲ್ಲಿರುವ ಮರಳನ್ನು ವಿಲೇವಾರಿ ಮಾಡಲು ಲೋಕೋಪಯೋಗಿ ಇಲಾಖೆ ಟೆಂಡರ್ ಕರೆಯು ಬೇಕಾಗುತ್ತದೆ. ಟೆಂಡರ್ ಪ್ರಕ್ರಿಯೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ತಹಶೀಲ್ದಾರುಗಳ ಸಮ್ಮುಖದಲ್ಲೇ ನಡೆಯ ಬೇಕಾಗಿದ್ದು, ಲೋಕಪಯೋಗಿ ಇಲಾಖೆ ಅವರ ಉಪಸ್ಥಿತಿಯಲ್ಲಿ ಹರಾಜು ಹಾಕ ಬೇಕಾಗುತ್ತದೆ. ಇಲಾಖೆಯಿಂದ ಗುರುತಿಸಲ್ಪಟ್ಟ ಪ್ರದೇಶದ ಹೊರತಾಗಿ ಮರಳುಗಾರಿಕೆ ನಡೆದ ಪಕ್ಷದಲ್ಲಿ ಅಕ್ರಮ ಮರಳುಗಾರಿಕೆ ಕಾಯ್ದೆಯಡಿ ಶಿಕ್ಷೆಗೆ ಒಳಗಾಗ ಬೇಕಾಗುತ್ತದೆ.

English summary
Sand lorry owners strike entered into fifteen days. Government not calling them for meeting and Lorry owners not ending their strike until their demand fulfils.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X