‘ಸಾಯಿ ಶ್ಯೂರ್’ ದೇಶದ 8 ಕೋಟಿ ಮಕ್ಕಳಿಗೆ ತಲುಪಿಸುವ ಗುರಿ: ಸದ್ಗುರು ಶ್ರೀ ಮಧುಸೂಧನ ಸಾಯಿ
ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಜಾರಿಯಲ್ಲಿರುವ 'ಸಾಯಿ ಶ್ಯೂರ್' ಪೌಷ್ಟಿಕ ಉಪಹಾರ ಯೋಜನೆಯ ದಶಮಾನೋತ್ಸವ ಸಂಭ್ರಮ ಶನಿವಾರ ನೆರವೇರಿತು.
ಸರ್ಕಾರಿ ಶಾಲಾ ಮಕ್ಕಳಲ್ಲಿನ ಹಸಿವು ಹಾಗೂ ಪೌಷ್ಟಿಕಾಂಶ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ದಶಕದ ಹಿಂದೆ ಆರಂಭವಾದ ಈ ಯೋಜನೆ ಇಂದು ದೇಶದ 25 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಿಗೆ ವಿಸ್ತರಿಸಿದೆ. ಸುಮಾರು 1.5 ಲಕ್ಷ ಸರ್ಕಾರಿ ಶಾಲೆಗಳ 1 ಕೋಟಿಗೂ ಹೆಚ್ಚು ಮಕ್ಕಳಿಗೆ ಬೆಳಗಿನ ಪೌಷ್ಟಿಕ ಉಪಹಾರ ಒದಗಿಸಲಾಗುತ್ತಿದೆ. 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್' ಆಶ್ರಯದಲ್ಲಿ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ.

ಕಾರ್ಯಕ್ರಮದಲ್ಲಿ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಸಂಸ್ಥಾಪಕರಾದ ಮಧುಸೂಧನ ಸಾಯಿ ಮಾತನಾಡಿ, "ಪೋಷಕರು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಲು ಸಾಧ್ಯವಾಗದಿದ್ದರೆ, ಅದನ್ನು ಪೂರೈಸುವುದು ಸಮಾಜದ ಜವಾಬ್ದಾರಿ. ಎಲ್ಲರನ್ನೂ ನಮ್ಮ ಕುಟುಂಬದವರಂತೆ ಕಾಣುವುದೇ 'ವಸುದೈವ ಕುಟುಂಬಕಂ'. ಇದೇ ನಮ್ಮ ಮಿಷನ್ ತತ್ತ್ವ" ಎಂದು ಹೇಳಿದರು.
"ಯಾವುದೇ ಮಗು ಹಸಿದ ಹೊಟ್ಟೆಯಲ್ಲಿ ಶಾಲೆಗೆ ಹೋಗಬಾರದು. ದೇಶದ 8 ಕೋಟಿ ವಿದ್ಯಾರ್ಥಿಗಳಿಗೆ 'ಸಾಯಿ ಶ್ಯೂರ್' ತಲುಪಿಸುವ ಮೂಲಕ ಪೌಷ್ಟಿಕಾಂಶ ಕೊರತೆಯನ್ನು ನಿವಾರಿಸುವುದು ನಮ್ಮ ಗುರಿ. ಪೌಷ್ಟಿಕತೆಯಿಂದ ಬೆಳೆದ ಮಗು ದೇಶದ ಅತ್ಯಂತ ದೊಡ್ಡ ಸಂಪತ್ತು," ಎಂದು ಅವರು ಹೇಳಿದರು. ಟ್ರಸ್ಟ್‌ನ ದಶಕದ ಸೇವಾ ಪ್ರಯಾಣವನ್ನು ಸ್ಮರಿಸಿ, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಮಹಾರಾಷ್ಟ್ರ ಸರ್ಕಾರದ ಅಪೌಷ್ಟಿಕತೆ ನಿರ್ಮೂಲನಾ ಕಾರ್ಯಪಡೆ ಅಧ್ಯಕ್ಷರಾದ ಡಾ. ದೀಪಕ್ ಆರ್. ಸಾವಂತ್ ಮಾತನಾಡಿ, "'ಸಾಯಿ ಶ್ಯೂರ್' ಯೋಜನೆ ಮಹಾರಾಷ್ಟ್ರದಲ್ಲೂ ಅಗತ್ಯವಿದೆ. ಮಹಾರಾಷ್ಟ್ರ ಸರ್ಕಾರದ ಸಹಕಾರದೊಂದಿಗೆ ಅಲ್ಲಿನ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ 'ಸಾಯಿ ಶ್ಯೂರ್' ಒದಗಿಸುವ ಪ್ರಯತ್ನ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ದೇಶದಲ್ಲಿನ ಪೌಷ್ಟಿಕಾಂಶ ಕೊರತೆಯನ್ನು ನಿವಾರಿಸಲು 'ಸಾಯಿ ಶ್ಯೂರ್' ಪರಿಣಾಮಕಾರಿ ಸಾಧನವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕದ ತಿಪಟೂರು ಭಾಗದ ಸುಮಾರು 3,000 ರೈತರು ಯೋಜನೆಗಾಗಿ ರಾಗಿ ಬೆಳೆಸುತ್ತಿದ್ದು, ಕನಿಷ್ಠ ಬೆಂಬಲ ದರಕ್ಕಿಂತ ಹೆಚ್ಚಿನ ದರದಲ್ಲಿ ಖರೀದಿ ಮಾಡುವ ಮೂಲಕ ಟ್ರಸ್ಟ್ ರೈತರಿಗೆ ಪ್ರೋತ್ಸಾಹ ನೀಡುತ್ತಿದೆ.
''Karnataka Budget: ಕೆಕೆಆರ್‌ಡಿಬಿ ಪುನಾರಚನೆ ಅಗತ್ಯ, ಪ್ರಾದೇಶಿಕ ತಾರತಮ್ಯ ತಡೆಗೆ ರೂ.15000 ಕೋಟಿಗೆ ಆಗ್ರಹ''
ಈ ಸಂದರ್ಭದಲ್ಲಿ ದಶಕದ ಅವಧಿಯಲ್ಲಿ ಟ್ರಸ್ಟ್‌ಗೆ ಬೆಂಬಲವಾಗಿ ನಿಂತ ಸರ್ಕಾರದ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು, ಸಿಬ್ಬಂದಿ, ಸ್ವಯಂಸೇವಕರು ಮತ್ತು ದಾನಿಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ವಿಶೇಷ ಕಾರ್ಯದರ್ಶಿಗಳು, ಐಎಎಸ್ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು 600 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು.












Click it and Unblock the Notifications