''Karnataka Budget: ಕೆಕೆಆರ್‌ಡಿಬಿ ಪುನಾರಚನೆ ಅಗತ್ಯ, ಪ್ರಾದೇಶಿಕ ತಾರತಮ್ಯ ತಡೆಗೆ ರೂ.15000 ಕೋಟಿಗೆ ಆಗ್ರಹ''
ಬೆಂಗಳೂರು: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯ ಸ್ವರೂಪ ಬದಲಾಗಬೇಕು ಎಂಬುದು ಆ ಭಾಗದ ಜನತೆ ಆಶಯವಾಗಿದೆ. ಜೊತೆಗೆ ಕರ್ನಾಟಕ ಬಜೆಟ್‌ನಲ್ಲಿ (Karnataka Budget 2026) ಪ್ರಾದೇಶಿಕ ಅಸಮತೋಲನ ಪರಿಹಾರ ಮಾಡುವ ನಿಟ್ಟಿನಲ್ಲಿ ಪ್ರೊ. ಗೋವಿಂದರಾವ್ ಸಮಿತಿ ಶಿಫಾರಸುಗಳ ಜಾರಿಗೆ ಸಿಎಂ ಸಿದ್ದರಾಮಯ್ಯ ಅವರು ಕನಿಷ್ಠ 15,000 ಕೋಟಿ ರೂ. ಅನುದಾನ ಹಂಚಿಕೆ ಮಾಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಅವಧಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಪಕ್ಷ. ಅತ್ಯಧಿಕ ಬಜೆಟ್ ಮಂಡಿಸಿರುವುದು ಸಿಎಂ ಸಿದ್ದರಾಮಯ್ಯ. ಹೀಗಾಗಿ ಪ್ರಾದೇಶಿಕ ಅಸಮತೋಲನಕ್ಕೆ ಅವರೇ ಕಾರಣ. ಆಗಿರುವ ತಪ್ಪನ್ನು ಇದೀಗ ಸರಿ ಮಾಡಲು ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಸೂಕ್ತ ಅನುದಾನ ನಿಡುವಂತೆ ಪತ್ರಿಕಾ ಹೇಳಿಕೆಯಲ್ಲಿ ಶನಿವಾರ ಒತ್ತಾಯಿಸಿದ್ದಾರೆ.

ಕೆಕೆಆರ್‌ಡಿಬಿ ಕಾರ್ಯ ಸ್ವರೂಪ ಬದಲಾಗಲಿ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (KKRDB) ಕಾರ್ಯ ಸ್ವರೂಪ ಬದಲಾಗಬೇಕು. ಮಂಡಳಿ ಪುನಃರಚನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಚುನಾಯಿತ ಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಯೋಜನೆ ರೂಪಿಸುವ ಪದ್ಧತಿ ಬದಲಾಗಬೇಕು. ತಜ್ಞರ ಸಲಹೆಯಂತೆ ಹೊಸದಾಗಿ ಮಾರ್ಗಸೂಚಿ ರೂಪಿಸಿ ಅಗತ್ಯಕ್ಕೆ ತಕ್ಕಂತೆ ಯೋಜನೆಗಳನ್ನು ವಿನ್ಯಾಸಗೊಳಿಸಿ, ಕಾಲಮಿತಿಯಲ್ಲಿ ಜಾರಿಗೊಳಿಸಬೇಕು. ಇದಕ್ಕಾಗಿ ಪ್ಲಾನಿಂಗ್ ಇಲಾಖೆಯ ಕಾರ್ಯ ಚಟುವಟಿಕೆಗಳ ಸ್ವರೂಪದಲ್ಲಿ ಬದಲಾವಣೆ ತಂದು ಗೋವಿಂದರಾವ್ ಸಮಿತಿಯು ನೀಡಿದ್ದ ಅಭಿಪ್ರಾಯಕ್ಕೆ ಒತ್ತು ನೀಡಬೇಕೆಂದರು.
ಗೋವಿಂದರಾವ್ ಸಮಿತಿ ಪ್ರಮುಖ ಶಿಫಾರಸುಗಳ ಪೈಕಿ, 'ಬಜೆಟ್‌ನಲ್ಲಿ ನಿಯಮಿತ ಅನುದಾನದ ಜತೆಗೆ ಹೆಚ್ಚುವರಿಯಾಗಿ ಸೂಚಿಸಲಾದ ಅನುದಾನ ಹಂಚಿಕೆ ಮಾಡಬೇಕು' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಿಂದುಳಿದಿರುವಿಕೆ ಆಧಾರದ ಮೇಲೆಯೇ ಅನುದಾನ ಹಂಚಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದರು.
ಅನ್ಯ ಇಲಾಖೆ ಅಥವಾ ಸಂಸ್ಥೆಗಳಿಗೆ ನೀಡುವ ಅನುದಾನವನ್ನು ಕ್ರೊಢೀಕರಿಸಿ ಇಂತಿಷ್ಟು ಮೊತ್ತ ಹಣವನ್ನು ನೀಡಿರುವುದಾಗಿ ಹಾರಿಕೆ ಭರವಸೆ ನೀಡಬಾರದು. ಕೆಕೆಆರ್‌ಡಿಬಿ ಸಹಿತ ಇತರೆ ಅಭಿವೃದ್ಧಿ ಮಂಡಳಿ ಅಥವಾ ನಿಗಮಗಳಿಗೆ ನೀಡುವ ಅನುದಾನವನ್ನು ಈ ಲೆಕ್ಕಾಚಾರಕ್ಕೆ ಸೇರಿಸಬಾರದು. ತಾರತಮ್ಯ ನಿವಾರಣೆಗಾಗಿಯೇ ವಿಶೇಷ, ಪ್ರತ್ಯೇಕ ಅನುದಾನ ಒದಗಿಸಬೇಕು. ಇಲ್ಲವಾದರೆ ನಿಮ್ಮ ಮಾತಿಗೂ ಕೃತಿಗೂ ಸಂಬಂಧವಿಲ್ಲ ಎಂದು ರಾಜ್ಯದ ಜನ ಭಾವಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಅನುದಾನ ನೀಡಿ ದಾಖಲೆ ಮಾಡಬೇಕು
ಪ್ರೊ. ಡಿ.ಎಂ. ನಂಜುಂಡಪ್ಪ ಸಮಿತಿ ಗುರುತಿಸಿದ್ದ ರಾಜ್ಯದ ಹಿಂದುಳಿದ ತಾಲ್ಲೂಕುಗಳ ಪ್ರಮಾಣ ಎರಡು ದಶಕಗಳ ಬಳಿಕವೂ ಕಡಿಮೆ ಆಗಿಲ್ಲ. ಶೇಕಡಾ 65 ರಿಂದ ಶೇಕಡಾ 72.8ಕ್ಕೆ ಹೆಚ್ಚಳ ಆಗಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಅತೀ ಹೆಚ್ಚು ಅವಧಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತು ದಿವಂಗತ ದೇವರಾಜ ಅರಸು ಅವರ ದಾಖಲೆ ಮುರಿದು ಅತ್ಯಧಿಕ ಅವಧಿಯ ಸಿಎಂ ಎಂಬ ಹೆಗ್ಗಳಿಕೆಯೊಂದಿಗೆ ಮುನ್ನುಗ್ಗುತ್ತಿರುವ ಸಿದ್ದರಾಮಯ್ಯ ಅವರೇ ಹೊಣೆ ಎಂದು ಆರೋಪಿಸಿದರು. ಹಿಂದುಳಿದ ಪ್ರದೇಶಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವುದನ್ನು ಕಾಂಗ್ರೆಸ್ ಮುಖಂಡರು ನಿಲ್ಲಿಸಬೇಕು. ಅಧಿಕಾರ ನಿಮ್ಮ ಕೈಲಿದ್ದು, ಇರುವ ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಹೆಚ್ಚು ಅನುದಾನ ನೀಡುವಂತೆ ಪುನಃರುಚ್ಚರಿಸಿದರು.
ತಾರತಮ್ಯ ನಿವಾರಣೆ ನಿಗಾ ಘಟಕಕ್ಕೆ ಆಗ್ರಹ
ದೇಶದ ದೊಡ್ಡ ರಾಜ್ಯಗಳ ಪೈಕಿ ನಿವ್ವಳ ದೇಶಿಯ ಉತ್ಪನ್ನ (ಎನ್‌ಎಸ್‌ಡಿಪಿ)ದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು ಪ್ರಾದೇಶಿಕ ಅಸಮತೋಲನಕ್ಕೆ ಕಾರಣಗಳ ಬಗ್ಗೆಯೂ ಮಾತನಾಡಬೇಕು. ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗಾಗಿ ಪ್ರೊ. ಗೋವಿಂದರಾವ್ ಸಮಿತಿ ನೀಡಿರುವ 11 ಶಿಫಾರಸ್ಸುಗಳ ಪರಿಣಾಮಕಾರಿ ಅನುಷ್ಟಾನಕ್ಕೆ 'ಪ್ರಾದೇಶಿಕ ತಾರತಮ್ಯ ನಿವಾರಣೆ ನಿಗಾ ಘಟಕ' ಸ್ಥಾಪಿಸಿ 'ಅನುದಾನ ಹಂಚಿಕೆ, ಬಳಕೆ ಮತ್ತು ಪ್ರಗತಿ' ಮೇಲೆ ನಿಗಾ ಮತ್ತು ಮೌಲ್ಯ ಮಾಪನಕ್ಕೆ ಕ್ರಮ ಜರುಗಿಸುವಂತೆ ಸಲಹೆ ನೀಡಿದರು












Click it and Unblock the Notifications