ಉಡುಪಿ ಸಮಾಜೋತ್ಸವ : ಸಾಧ್ವಿ ಬಾಲಿಕಾಗೆ ಆಹ್ವಾನ
ಉಡುಪಿ, ಮಾ.8 : ಉಡುಪಿ ಹಿಂದೂ ಸಮಾಜೋತ್ಸವಕ್ಕೆ ಸಿದ್ಧವಾಗುತ್ತಿದೆ. ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಉಡುಪಿ ಪ್ರವೇಶಿಸದಂತೆ ಪೊಲೀಸರು ನಿರ್ಬಂಧ ಹೇರಿರುವ ಹಿನ್ನಲೆಯಲ್ಲಿ ಸಾಧ್ವಿ ಬಾಲಿಕಾ ಸರಸ್ವತಿ ಅವರು ಸಮಾಜೋತ್ಸವಕ್ಕೆ ಆಗಮಿಸುವ ಸಾಧ್ಯತೆ ಇದೆ.
ಉಡುಪಿಯ ಎಂಜಿಎಂ ಕಾಲೇಜು ಮೈದಾನದಲ್ಲಿ ಸೋಮವಾರ ಮಧ್ಯಾಹ್ನ ಹಿಂದೂ ಸಮಾಜೋತ್ಸವ ನಡೆಯಲಿದೆ. ಉಡುಪಿಯ ರಸ್ತೆಗಳು ಕೇಸರಿ ಮಯವಾಗಿದ್ದು, ಸ್ವಾಗತ ಕಾಮಾನುಗಳು, ಕೇಸರಿ ಧ್ವಜಗಳು ಜನರನ್ನು ಸ್ವಾಗತಿಸುತ್ತಿವೆ. [ಉಡುಪಿ ಪ್ರವೇಶಿಸದಂತೆ ಪ್ರವೀಣ್ ತೊಗಾಡಿಯಾಗೆ ನಿಷೇಧ]
ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಉಡುಪಿಯ ಹಿಂದೂ ಸಮಾಜೋತ್ಸವ ಉದ್ದೇಶಿಸಿ ಮಾತನಾಡಬೇಕಾಗಿತ್ತು. ಆದರೆ, ಮಾ. 7ರಿಂದ 13ರ ತನಕ ತೊಗಾಡಿಯಾ ಅವರು ಉಡುಪಿ ಪ್ರವೇಶಿಸದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ನಿಷೇಧ ಹೇರಿದ್ದಾರೆ. [ಮಂಗಳೂರು ಹಿಂದೂ ಸಮಾಜೋತ್ಸವದ ಚಿತ್ರಗಳು]

ಆದ್ದರಿಂದ ಸಾಧ್ವಿ ಬಾಲಿಕಾ ಸರಸ್ವತಿ ಅವರನ್ನು ಸಮಾಜೋತ್ಸವಕ್ಕೆ ಬರುವಂತೆ ಹಿಂದೂ ಸಂಘಟನೆಗಳು ಆಹ್ವಾನಿಸಿವೆ. ಮಾರ್ಚ್ 1ರಂದು ಮಂಗಳೂರಿನಲ್ಲಿ ನಡೆದ ಸಮಾಜೋತ್ಸವಕ್ಕೆ ಸಾಧ್ವಿ ಅವರು ಆಗಮಿಸಿ ಭಾಷಣ ಮಾಡಿದ್ದರು. ಆದ್ದರಿಂದ ಸೋಮವಾರವೂ ಅವರು ಆಗಮಿಸುವ ಸಾಧ್ಯತೆ ಇದೆ.
ಭಾಷಣ ಪ್ರಸಾರ : ಬೆಂಗಳೂರಿನಲ್ಲಿ ಫೆ.9ರಂದು ನಡೆದ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸದಂತೆ ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ಹೇರಲಾಗಿತ್ತು. ಆದರೆ, ಅಂದು ಅವರ ವಿಡಿಯೋ ಭಾಷಣವನ್ನು ಪ್ರಸಾರ ಮಾಡಲಾಗಿತ್ತು. ಉಡುಪಿಯಲ್ಲಿಯೂ ಇದೇ ರೀತಿ ಮಾಡಲಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications