ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭೇಟಿಯಾದ ಸದ್ಗುರು
ಬೆಂಗಳೂರು, ಜನವರಿ 26 : ಕರ್ನಾಟಕದ ಜೀವನದಿ ಕಾವೇರಿ ನದಿ ಪಾತ್ರದ ಅರಣ್ಯಗಳನ್ನು ಅಭಿವೃದ್ಧಿ ಮಾಡುವ ಮೂಲಕ ನದಿಯನ್ನು ಪುನಶ್ಚೇತನಗೊಳಿಸಲು ಇಶಾ ಫೌಂಡೇಶನ್ ಮುಂದಾಗಿದೆ.
ಶುಕ್ರವಾರ ಇಶಾ ಫೌಂಡೇಶನ್ ಮುಖ್ಯಸ್ಥ ಹಾಗೂ ಆಧ್ಯಾತ್ಮ ಗುರು ಸದ್ಗುರು ಜಗ್ಗಿ ವಾಸುದೇವ್ ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಈ ಕುರಿತು ಚರ್ಚೆ ನಡೆಸಿದರು. ನದಿಗಳ ಸಂರಕ್ಷಣೆ ಕುರಿತು ಮಾತುಕತೆ ನಡೆಸಿದರು.
ಈಗಾಗಲೇ ಇಶಾ ಫೌಂಡೇಶನ್ ವತಿಯಿಂದ Rally for rivers ಎಂಬ ಅಭಿಯಾನವನ್ನು ಯಶಸ್ವಿಯಾಗಿ ದೇಶಾದ್ಯಂತ ನಡೆಸಲಾಗಿದ್ದು, ನೀತಿ ಆಯೋಗಕ್ಕೆ ಹಲವು ಶಿಫಾರಸುಗಳನ್ನು ಸಲ್ಲಿಸಲಾಗಿದೆ. ರಾಜ್ಯಗಳಿಗೂ ಇವುಗಳನ್ನು ಕಳುಹಿಸಲಾಗಿದೆ.

ಕರ್ನಾಟಕದಲ್ಲಿ ಕಾವೇರಿ ನದಿ ಪಾತ್ರದಲ್ಲಿ ಅರಣ್ಯ ಅಭಿವೃದ್ಧಿ ಮಾಡುವ ಮೂಲಕ ನದಿಯನ್ನು ಪುನಶ್ಚೇತನಗೊಳಿಸಲು ತಮ್ಮ ಸಂಸ್ಥೆಯು ಮುಂದಾಗಿದೆ. ಇದಕ್ಕೆ ಸರ್ಕಾರದ ಬೆಂಬಲ ಅಗತ್ಯ ಎಂದು ಜಗ್ಗಿ ವಾಸುದೇವ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ಈ.ವಿ. ರಮಣರೆಡ್ಡಿ ಉಪಸ್ಥಿತರಿದ್ದರು.












Click it and Unblock the Notifications