• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ ಎಸ್.ಆರ್.ಬೊಮ್ಮಾಯಿ

By Ashwath
|

ಬೆಂಗಳೂರು, ಜು.4: ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ರಾಜ್ಯ ಸರ್ಕಾರಗಳನ್ನು ಮಣಿಸುವ ಹುನ್ನಾರವನ್ನು ತಡೆಗಟ್ಟುವ ಸಂವಿಧಾನದ ಪರಿಚ್ಛೇದ 356 ರ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್‌‌‌‌‌ ಪ್ರಕಟಿಸಿದ ಐತಿಹಾಸಿಕ ತೀರ್ಪು ಬೊಮ್ಮಾಯಿ ಅವರ ಹೆಸರನ್ನು ಶಾಶ್ವತವಾಗಿರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಪ್ರತಿಭಾವಂತ ಸಂಸದೀಯ ಪಟುಗಳು ಪುಸ್ತಕ ಮಾಲೆಯ "ಎಸ್.ಆರ್. ಬೊಮ್ಮಾಯಿ" ಕುರಿತ ಪುಸ್ತಕ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

1989 ರಲ್ಲಿ ಕೆಲವು ಶಾಸಕರು ಅಂದಿನ ರಾಜ್ಯಪಾಲರಿಗೆ ಬೊಮ್ಮಾಯಿ ಸರ್ಕಾರಕ್ಕೆ ಬೆಂಬಲ ಹಿಂಪಡೆದ ಪತ್ರ ನೀಡಿದ ಕೆಲವೇ ಗಂಟೆಗಳಲ್ಲಿ ಅವರ ಸರ್ಕಾರ ವಜಾ ಪ್ರಕರಣ ವಿರುದ್ಧ ಸಂವಿಧಾನ ಪೀಠ 1994 ರಲ್ಲಿ ಪ್ರಕಟಿಸಿದ ಈ ಮಹತ್ವದ ತೀರ್ಪು ಹಲವು ಸರ್ಕಾರಗಳಿಗೆ ಮರು ಜೀವ ದೊರಕಿಸಿ ಕೊಟ್ಟಿದೆ ಎಂದು ಮುಖ್ಯಮಂತ್ರಿಯವರು ನುಡಿದರು.

ಸಮಾರಂಭದಲ್ಲಿ ಎಸ್.ಆರ್. ಬೊಮ್ಮಾಯಿ ಅವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡ ಅವರು, ಬೊಮ್ಮಾಯಿ ಅವರು ಪಕ್ಷದೊಳಗಿನ ಜಗಳಗಳಲ್ಲಿ ರಾಜಿ ಮಾಡಿಸುವುದರಲ್ಲಿ ನಿಸ್ಸೀಮರಾಗಿದ್ದರು. ಆದರೆ ತಾವು ನಂಬಿದ ತತ್ವ ಸಿದ್ಧಾಂತಗಳೊಂದಿಗೆ ಅವರು ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ನುಡಿದರು.

ಮಾನವತಾವಾದಿ ಎಂ.ಎನ್.ರಾಯ್ ಅವರ ಅನುಯಾಯಿಯಾಗಿದ್ದ ಬೊಮ್ಮಾಯಿ ಅವರು ಗ್ರಾಮೀಣ ಬದುಕು, ರೈತರ ಬಗ್ಗೆ ಕಾಳಜಿ ಹೊಂದಿದ್ದರಲ್ಲದೆ, ಈ ಬಗ್ಗೆ ಅಪಾರ ಜ್ಞಾನವನ್ನೂ ಹೊಂದಿದ್ದರು. ಸದನದಲ್ಲಿ ಚರ್ಚಿಸುವ ವಿಷಯಗಳ ಕುರಿತು ಆಳವಾದ ಅಧ್ಯಯನ ನಡೆಸಿ, ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇಂದಿನ ಶಾಸಕರು ಈ ಅಧ್ಯಯನ ಶೀಲತೆಯನ್ನು ಬೆಳೆಸಿಕೊಂಡರೆ ಉತ್ತಮ ಸಂಸದೀಯ ಪಟುವಾಗಲು ಸಾಧ್ಯ ಎಂದು ಅವರು ಸಲಹೆ ನೀಡಿದರು.

ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ರಾಜಕಾರಣದಲ್ಲಿ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರುವವರು ಅಪರೂಪ. ಬೊಮ್ಮಾಯಿಯವರು ಅಂತಹ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು. ರಾಜಕಾರಣ ವ್ಯಾಪಾರವಾಗುತ್ತಿರುವುದು ದುಃಖಕಾರಿ ಬೆಳವಣಿಗೆ. ಈ ಸಂದರ್ಭದಲ್ಲಿ ಬೊಮ್ಮಾಯಿ ಅವರ ಕುರಿತ ಈ ಪುಸ್ತಕ ಇತರರಿಗೆ ಪ್ರೇರಣೆ ನೀಡಲಿ ಎಂದು ಆಶಿಸಿದರು.

ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಅವರು ಉತ್ತರ ಕರ್ನಾಟಕದ ಬಗೆಗಿನ ಬೊಮ್ಮಾಯಿ ಅವರ ಕಾಳಜಿಯನ್ನು ಶ್ಲಾಘಿಸಿದರು.

ವಿಧಾನ ಪರಿಷತ್ ಸಭಾಪತಿ ಶ್ರೀ ಡಿ.ಎಚ್. ಶಂಕರಮೂರ್ತಿ ಅವರು ತಾವು ಮೊದಲ ಬಾರಿ ಶಾಸಕನಾದಾಗ ಬೊಮ್ಮಾಯಿ ಅವರು ಸದನದಲ್ಲಿ ಮಾತನಾಡುವ ಬಗ್ಗೆ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿಕೊಂಡರು. ನನ್ನ ಅವಧಿಯಲ್ಲಿ ಬೊಮ್ಮಾಯಿ ಅವರ ಕುರಿತ ಪುಸ್ತಕ ಬಿಡುಗಡೆಯಾಗುತ್ತಿರುವುದು ನನ್ನ ಸೌಭಾಗ್ಯ ಎಂದು ನುಡಿದರು.

ಸಮಾರಂಭದಲ್ಲಿ ಸಚಿವರು, ಶಾಸಕರು, ಬೊಮ್ಮಾಯಿ ಅವರ ಪುತ್ರ ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಅವರ ಕುಟುಂಬದ ಇತರ ಸದಸ್ಯರು, ಹಿರಿಯ ಅಧಿಕಾರಿಗಳು ಹಾಗೂ ಪುಸ್ತಕದ ಲೇಖಕ ಚಂದ್ರಶೇಖರ ಬೆಳಗೆರೆ ಪಾಲ್ಗೊಂಡಿದ್ದರು.

English summary
Karnataka Chief Minister Siddaramaiah says S. R. Bommai was the greatest politician in Karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X