ಖಾಸಗಿ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಾರಿಗೆ ಇಲಾಖೆ ಹದ್ದಿನ ಕಣ್ಣು!
ಬೆಂಗಳೂರು, ಜೂ.6: ಸರ್ಕಾರದ ಅಧಿಕೃತ ವಾಹನಗಳನ್ನು ಬಿಟ್ಟರೆ, ಸಚಿವರು ಸೇರಿದಂತೆ ಖಾಸಗಿ ವಾಹನಗಳಿಗೆ ಸರ್ಕಾರಿ ಲಾಂಛನ ಹಾಗೂ ಕರ್ನಾಟಕ ಸರ್ಕಾರ ಹೆಸರಿನ ನಾಮ ಫಲಕಗಳನ್ನು ಬಳಸುವುದು ಅಪರಾಧ. ಬಳಸಿದವರಿಗೆ ದಂಡ ಬೀಳಲಿದೆ. ಜತೆಗೆ ನಾಮಫಲಕ ಹಾಗೂ ಲಾಂಛನಗಳನ್ನು ಅರ್‌ಟಿಓ ಅಧಿಕಾರಿಗಳು ಕಿತ್ತೊಗೆಯಲಿದ್ದಾರೆ. ಜತೆಗೆ ದಂಡ ಹಾಕಲಿದ್ದಾರೆ.
ಕೇಂದ್ರ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ನಾಮಫಲಕ ಅಳವಡಿಕೆ ಹಾಗೂ ಸರ್ಕಾರಿ ಇಲಾಖೆಗಳ ಲಾಂಛನ ದುರ್ಬಳಕೆ ಮಾಡಿಕೊಂಡಿರುವ ವಾಹನಗಳ ವಿರುದ್ಧ ಕ್ರಮ ಜರುಗಿಸಲು ಸಾರಿಗೆ ಇಲಾಖೆ ಹೊಸ ಅಭಿಯಾನ ಶುರು ಮಾಡಿದೆ.
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ ನಾಮಫಲಕ ಹಾಗೂ ಸರ್ಕಾರಿ ಇಲಾಖೆಗಳ ಲಾಂಛನ ದುರ್ಬಳಕೆ ಮಾಡಿಕೊಂಡಿರುವ ಖಾಸಗಿ ವಾಹನಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸುವಂತೆ ಹೊಸ ಅಭಿಯಾನ ಶುರುಮಾಡಿದೆ. ಅಧಿಕೃತ ಸರ್ಕಾರಿ ವಾಹನ ಹೊರತು ಪಡಿಸಿ ಸಿಎಂ ಸೇರಿದಂತೆ ಯಾವ ದೊಣ್ಣೆ ನಾಯಕ ಸಹ ಸರ್ಕಾರಿ ಲಾಂಚನ, ಕರ್ನಾಟಕ ಸರ್ಕಾರದ ಹೆಸರು, ನಂಬರ್ ಪ್ಲೇಟ್ ಬಳಸುವಂತಿಲ್ಲ. ಬಳಸಿದ್ದು ಕಂಡು ಬಂದರೆ ಅಂತಹ ವಾಹನದ ಚಿತ್ರ ತೆಗೆದು ಸಾರಿಗೆ ಇಲಾಖೆಯ ವಾಟ್ಸಪ್ ನಂಬರ್ ಗೆ ರವಾನಿಸಿದರೆ, ಇಲಾಖೆಯೇ ಕ್ರಮ ಕೈಗೊಳ್ಳಲಿದೆ. ಈ ಕುರಿತು ಸಾರಿಗೆ ಇಲಾಖೆ ಆಯುಕ್ತ ಟಿ.ಕೆ.ಎಚ್. ಕುಮಾರ್ ಅವರು ಎಚ್ಚರಿಕೆ ಪ್ರಕಟಣೆ ನೀಡಿದ್ದಾರೆ.

ಸಾರಿಗೆ ಇಲಾಖೆ ಎಚ್ಚರಿಕೆ ನೋಟಿಸ್ :
ವಾಟ್ಸಪ್ ಸಂದೇಶ ರವಾನಿಸಿ: ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು, ಸರ್ಕಾರೇತರ ಸಂಸ್ಥೆಗಳಲ್ಲಿ ಬಳಸುವ ಯಾವುದೇ ಖಾಸಗಿ ವಾಹನಗಳಲ್ಲಿ ಸ್ಥಳೀಯ ಸಂಸ್ಥೆಗಳ ಹೆಸರು, ಚಿನ್ಹೆ, ಲಾಂಛನಗಳನ್ನು ನೋಂದಣಿ ಫಲಕದ ಮೇಲೆ ಬಳಸುವುದು ಕೇಂದ್ರ ಮೋಟಾರು ವಾಹನ ನಿಯಮ 1989 ರ ನಿಯಮ 50 ಮತ್ತು 51 ರಲ್ಲಿ ನಿಗದಿ ಪಡಿಸಿದ ನಿಯಮಗಳಿಗೆ ವಿರುದ್ಧವಾದುದು. ಅಲ್ಲದೇ ಕಂದ್ರದ ಎಂಬ್ಲಮ್ ಆಫ್ ಇಂಡಿಯಾ ನಿಯಂತ್ರಣ ಕಾಯ್ದೆ ಕಲಂ 3,4 ಮತ್ತು ಐದರ ಉಲ್ಲಂಘನೆ. ಇಂತಹ ನೋಂದಣಿ ಫಲಕಗಳನ್ನು ತೆರವುಗೊಳಿಸಬೇಕು. ಈ ನಿಯಮ ಉಲ್ಲಂಘನೆ ಮಾಡಿ ಸರ್ಕಾರಿ ಚಿನ್ಹೆ,ಲಾಂಛನ, ಸ್ಥಳೀಯ ಸಂಸ್ಥೆಗಳ ಹೆಸರನ್ನು ಖಾಸಗಿ ವಾಹನಗಳಿಗೆ ಬಳಿಸಿ ದುರುಪಯೋಗ ಮಾಡಿಕೊಂಡಿರುವ ಸಂಬಂಧ ಈಗಾಗಲೇ ಹೈಕೋರ್ಟ್ ಮಹತ್ವ ತೀರ್ಪು ನೀಡಿದೆ. ನಿಯಮ ಉಲ್ಲಂಘಿಸಿದ ವಾಹನಗಳ ಮೇಲೆ ಕ್ರಮಕ್ಕೆ ನ್ಯಾಯಾಲಯ ಸೂಚನೆ ನೀಡಿದೆ. ಹೀಗಾಗಿ ಸಚಿವರು ಸೇರಿದಂತೆ ಯಾರೇ ಆಗಲಿ ಖಾಸಗಿ ವಾಹನಗಳ ಮೇಲೆ ಸ್ಥಳೀಯ ಸಂಸ್ಥೆ ಹೆಸರು, ಚಿನ್ಹೆ, ಲಾಂಛನ, ಖಾಸಗಿ ವಾಹನಗಳ ನಾಮಫಲಕ ಮೇಲೆ ಅಳವಡಿಸುವಂತಿಲ್ಲ ಎಂದು ಸೂಚಿಸಲಾಗಿದೆ. ಈ ಕುರಿತು ಸಾರ್ವಜನಿಕ ಪ್ರಕಟಣೆಯನ್ನು ಸಾರಿಗೆ ಇಲಾಖೆ ಹೊರಡಿಸಿದೆ.

ಸರ್ಕಾರದ ಲಾಂಛನ ದುರ್ಬಳಕೆ ಮಾಡಿಕೊಂಡ್ರೆ ದಂಡ:
ಮುಖ್ಯಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಆಗಿರಲಿ ಸರ್ಕಾರದ ಅಧಿಕೃತ ವಾಹನಗಳ ಮೇಲೆ ನಾಮಫಲಕ ಹಾಗೂ ಕರ್ನಾಟಕ ಸರ್ಕಾರದ ಲಾಂಛನ, ಚಿನ್ಹೆ ಬಳಿಸಿದ್ದರೆ ತಪ್ಪಲ್ಲ. ಮುಖ್ಯಮಂತ್ರಿ ಸೇರಿದಂತೆ ಯಾರೂ ಸಹ ಖಾಸಗಿ ವಾಹನ ಹಾಗೂ ನಾಮಫಲಕಗಳ ಮೇಲೆ ಸರ್ಕಾರಿ ಲಾಂಛಣ, ಸರ್ಕಾರಿ ಚಿನ್ಹೆ ಹಾಗೂ ಸಂಘ ಸಂಸ್ಥೆಗಳ ಹೆಸರನ್ನು ಹಾಕುವಂತಿಲ್ಲ. ನಿಗಮ ಮಂಡಳಿಯ ಸದಸ್ಯರು, ಅಧ್ಯಕ್ಷರು ಸಹ ತಮ್ಮ ಕಾರುಗಳಿಗೆ ಸರ್ಕಾರದ ಲಾಂಛನ ಬಳಸುವಂತಿಲ್ಲ. ಸರ್ಕಾರ ವಾಹನ ಪ್ರವೇಶಕ್ಕಾಗಿ ನೀಡಿರುವ ಪಾಸ್ ಹೊರತು ಪಡಿಸಿದ್ರೆ ಬೇರೆ ಯಾವ ಸ್ಟಿಕ್ಕರ್ ಕೂಡ ಹಾಕುವಂತಿಲ್ಲ. ಶಾಸಕರು ಶಾಸಕರ ಭವನ, ವಿಧಾಸೌಧ ಪ್ರವೇಶ ಪಾಸು ಹೊರತು ಪಡಿಸಿದ್ರೆ ತಮ್ಮ ಸ್ವಂತ ವಾಹನಗಳಿಗೆ ಯಾವುದೇ ಚಿನ್ಹೆ, ಶಾಸಕರು ಎಂಬ ನಾಮಫಲಕ, ಕರ್ನಾಟಕ ಸರ್ಕಾರದ ಲಾಂಛನ ಚಿನ್ಹೆ ಬಳಸುವಂತಿಲ್ಲ. ಕೇಂದ್ರ ಮೋಟಾರು ವಾಹನ ನಾಮಫಲಕದ ನಿಯಮಗಳು ಎಲ್ಲರಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘನೆ ಮಾಡಿದ ವಾಹನ ಮಾಲೀಕರಿಗೆ 500 ರೂ. ದಂಡ ಹಾಕಿ ಆ ನಾಮ ಫಲಕವನ್ನು ಅಧಿಕಾರಿಗಳೇ ಕಿತ್ತೊಗೆಯಲಿದ್ದಾರೆ.

ಖಾಸಗಿ ವಾಹನದಲ್ಲಿ ಕರ್ನಾಟಕ ಸರ್ಕಾರ ಹೆಸರು ಇದ್ದರೆ:
ಸಿಕ್ಕ ಸಿಕ್ಕವರು ಖಾಸಗಿ ವಾಹನಗಳ ಮೇಲೆ ಮಾನವ ಹಕ್ಕು ಆಯೋಗ, ಕೆಂದ್ರ ಮಾನವ ಹಕ್ಕು ಆಯೋಗ ಒಕ್ಕೂಟ, ಕರ್ನಾಟಕ ಸರ್ಕಾರ,ಮಿಲಟರಿ, ಪ್ರೆಸ್ , ಸರ್ಕಾರಿ ಸೇವೆಯಲ್ಲಿ ಎಂಬ ಚಿನ್ಹೆ, ಲಾಂಛನಗಳನ್ನು ಲಕ್ಷಾಂತರ ಮಂದಿ ಹಾಕಿಕೊಂಡು ನಿಯಮ ಉಲ್ಲಂಘಿಸಿದ್ದಾರೆ. ಇಂತಹ ವಾಹನಗಳು ಕಂಡು ಬಂದರೆ ಸಾರ್ವಜನಿಕರು ಪೋಟೋ ತೆಗೆದು ವಾಹನ ನಂಬರ್ ಸಮೇತ, ನಿಂತಿರುವ ಜಾಗದ ವಿಳಾಸವನ್ನು ವಾಟ್ಸಪ್ ಗೆ ರವಾನಿಸಿದ್ರೆ ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಜರುಗಿಸಲಿದ್ದಾರೆ. ಯಾವುದೇ ಖಾಸಗಿ ವಾಹನದ ಮೇಲೆ ಅನಧಿಕೃತ ನೋಂದಣಿ ಫಲಕ ಹಾಕಿದ್ದರೆ, ಅವುಗಳ ಪೋಟೋ ತೆಗೆದು ಸಾರ್ವಜನಿಕರು ಸಾರಿಗೆ ಇಲಾಖೆಗೆ ರವಾನಿಸಬಹುದು. ನೋಂದಣಿ ಫಲಕ, ಸ್ಥಳ ಭಾವಚಿತ್ರ ತೆಗೆದು 9449863459 ಗೆ ಕಳಹಿಸಿದರೆ ವಾಹನ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಸೂಚಿಸಿದೆ.

ಪಾರ್ಕಿಂಗ್ ಗಾಗಿ ಸರ್ಕಾರಿ ಲಾಂಛನ ದರ್ಬಳಕೆ ಯಾರು ಮಾಡ್ತಾರೆ:
ಕೇಂದ್ರ ಮೋಟಾರು ವಾಹನ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು. ನಿಗಮ ಮಂಡಳಿಗಳ ಸದಸ್ಯರು. ಶಾಸಕರು, ಸಚಿವರು ಸಹ ತಮ್ಮ ಖಾಸಗಿ ವಾಹನಗಳ ನಂಬರ್ ಪ್ಲೇಟ್ ಗಳಿಗೆ ಕರ್ನಾಟಕ ಸರ್ಕಾರದ ಲಾಂಛನ, ಚಿನ್ಹೆ, ಬಳಸುತ್ತಿದ್ದಾರೆ.ಇವರ ಜಗೆಗೆ ಅರ್‌ಟಿಐ ಕಾರ್ಯಕರ್ತರು, ಮಾವನ ಹಕ್ಕು ಆಯೋಗದ ಕಾರ್ಯಕರ್ತರು ಸೇರಿದಂತೆ ಮೋಟಾರು ವಾಹನ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಪಾರ್ಕಿಂಗ್ ದಂಡದಿಂದ ತಪ್ಪಿಸಿಕೊಳ್ಳಲು, ಟೋಲ್ ಗಳಲ್ಲಿ ಹಣ ನೀಡದೇ ಉಚಿತ ಪ್ರಯಾಣ ಮಾಡಲು ಹಾಗೂ ತಮ್ಮ ಅಕ್ಕ ಪಕ್ಕದವರಿಗೆ ಫೋಸ್ ಕೊಡಲು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಕೆಲವು ಮಾನವ ಹಕ್ಕು ಸಂಘಟನೆಗಳಂತೂ ಸ್ವತಃ ತಾವೇ ಆಯೋಗದ ಸದಸ್ಯರು ಎಂಬಂತೆ ಮಾನವ ಹಕ್ಕು ಅಯೋಗದ ಚಿನ್ಹೆಗಳನ್ನು ದುರ್ಬಳಕೆ ಮಾಡಿಕೊಂಡಿರುವ ಸಾಕಷ್ಟು ವಾಹನ ಕಣ್ಣಿಗೆ ಕಾಣುತ್ತವೆ.

ಎಲ್ಲರೂ ಕಾನೂನು ಪರಿಪಾಲಿಸಬೇಕು
"ಕೇಂದ್ರ ಮೋಟಾರು ವಾಹನ ಕಾಯ್ದೆ ಉಲ್ಲಂಘನೆ ಮಾಡುವುದು ತಪ್ಪು. ಜನತೆಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕೆಲವರಂತೂ ಸರ್ಕಾರದ ಚಿನ್ಹೆ, ಲಾಂಛನ ದುರ್ಬಳಕೆ ಮಾಡಿಕೊಂಡು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಮೋಟಾರು ವಾಹನ ಕಾಯ್ದೆಯಲ್ಲಿ ನಾಮ ಫಲಕ ಅಳವಡಿಕೆ ಸಂಬಂಧ ಇರುವ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ," ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು 'ಒನ್ ಇಂಡಿಯಾ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.












Click it and Unblock the Notifications