ಏಕಾಂಗಿಯಾಗಿ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ; ಡಿ ಕೆ ಶಿವಕುಮಾರ್ ಕಾಲಿಗೆ ಬೀಳುತ್ತೇನೆ ಎಂದು ಮುನಿರತ್ನ ಹೇಳಿದ್ಯಾಕೆ?
ಬೆಂಗಳೂರು, ಅಕ್ಟೋಬರ್ 11: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಕ್ಷೇತ್ರದ ಅನುದಾನ ಕಡಿತವಾಗಿದೆ ಎಂದು ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಧರಣಿ ನಡೆಸಿದ್ದಾರೆ.
ಇನ್ನೂ ಮುನಿರತ್ನ ಧರಣಿ ನಡೆಸಿದ ಬಳಿಕ ಆರ್ ಆರ್ ನಗರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾದ್ರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ದಿಕ್ಕಾರ ಕೂಗಿದ್ದು. ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಮುನಿರತ್ನ ಅವರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

ಇನ್ನೂ ಆರ್ ಆರ್ ನಗರ ಕ್ಷೇತ್ರದ ಅನುದಾನ ಕಡಿತದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮುನಿರತ್ನ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಅವರು 126 ಕೋಟಿ ಅನುದಾನ ಕೊಟ್ಟು ಆದೇಶ ಹೊರಡಿಸಿದ್ದರು. ನಿನ್ನೆ ಏಕಾಏಕಿ ಅನುದಾನ ಕಟ್ ಮಾಡಿದ್ದಾರೆ. ನಾನು ಸಿಎಂ ಹತ್ತಿರ ಹೋಗಲ್ಲ. ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ ಎಂದು ಹೇಳಿದ್ದಾರೆ.
ನಮ್ಮ ಕ್ಷೇತ್ರದ ಅನುದಾನವನ್ನು ಯಶವಂತಪುರ, ಬ್ಯಾಟರಾಯನಪುರ ಹಾಗೂ ಪುಲಿಕೇಶಿನಗರಕ್ಕೆ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದ ಮುನಿರತ್ನ, ಅನುದಾನದ ಬಗ್ಗೆ ಮುಖ್ಯಮಂತ್ರಿ ಅವರನ್ನು ಕೇಳುವುದಿಲ್ಲ. ಬೆಂಗಳೂರು ಅಭಿವೃದ್ಧಿ ಸಚಿವರು ಡಿಕೆ ಶಿವಕುಮಾರ್. ಹೀಗಾಗಿ ನನಗೆ ಡಿಸಿಎಂ ಅವರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಡಿಸಿಎಂ ಎಂದು ಹೇಳಿದರು.
ನಿಮ್ಮಲ್ಲಿ ನಾನು ಒಬ್ಬ. ನನ್ನನ್ನು ಬೇರೆ ಅಂತ ನೋಡಬೇಡಿ, ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ನೀವು ಕೆಲಸ ಮಾಡಿ. ನಮ್ಮ ಅಭ್ಯರ್ಥಿಗಾಗಿ ನಾನು ಕೆಲಸ ಮಾಡ್ತೀನಿ, ಅಭಿವೃದ್ಧಿಗಾಗಿ ಒಂದಾಗಿ ಹೋಗೋಣ. ನನ್ನ ಜನಕ್ಕಾಗಿ ನಾನು ಡಿ ಕೆ ಶಿವಕುಮಾರ್ ಅವರ ಕಾಲಿಗೆ ಬೀಳುತ್ತೇನೆ, ನನ್ನ ಸ್ವಂತಕ್ಕಾಗಿ ಯಾವತ್ತೂ ಕಾಲಿಗೆ ಬಿದ್ದಿಲ್ಲ, ಈಗ ಜನಕ್ಕಾಗಿ ಬೀಳುತ್ತೇನೆ ಎಂದು ಹೇಳಿದರು.
ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಆರ್ಆರ್ ನಗರಕ್ಕೆ ನೀಡಿದ್ದ ಒಟ್ಟು 126 ಕೋಟಿ ರೂ. ಅನುದಾನವನ್ನು ಇದೀಗ ಕಾಂಗ್ರೆಸ್ ಸರ್ಕಾರ ಬೇರೆ ಕ್ಷೇತ್ರಗಳಿಗೆ ನೀಡಿದೆ. ಸ್ವತಃ ಡಿಕೆ ಶಿವಕುಮಾರ್ ಅವರೇ ಆರ್ಆರ್ ನಗರ ಕ್ಷೇತ್ರದ ಅನುದಾನ ಯಶವಂತಪುರ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ್ದಾರೆ ಎಂದು ಮುನಿರತ್ನ ಅವರ ಆರೋಪವಾಗಿದೆ. ನನ್ನ ಕ್ಷೇತ್ರದ ಅನುದಾನ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿದ್ದಾರೆ.
ಪುಲಕೇಶಿ ನಗರಕ್ಕೆ 40 ಕೋಟಿ ಕೊಟ್ಟಿದ್ದಾರೆ. ಬ್ಯಾಟರಾಯಣಪುರಕ್ಕೆ 40 ಕೋಟಿ, ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೂ 40 ಕೋಟಿ ಕೊಟ್ಟಿದ್ದಾರೆ. ಇದು ನನ್ನ ಕ್ಷೇತ್ರದ ಅನುದಾನ. ನನ್ನ ಕ್ಷೇತ್ರದ ಸಂಸದ ಡಿಕೆ ಸುರೇಶ್ ಸಹ ಕೇಳಬಹುದಿತ್ತು, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕೇಳ ಬಹುದಿತ್ತು. ನನ್ನ ಕ್ಷೇತ್ರದ ಅನುದಾನ ವರ್ಗಾವಣೆ ಮಾಡಬಾರದು ಅಂತ ಒಂದು ಪತ್ರ ಬರೆಯಲಿಲ್ಲ. ಡಿಕೆ ಶಿವಕುಮಾರ್ ಗೆ ಒತ್ತಾಯ ಮಾಡ ಬಹುದಿತ್ತು. ನಿಮ್ಮದೇ ಕ್ಷೇತ್ರ ಇದು ಕೆಲಸ ಮಾಡಬೇಕಿತ್ತು. ಆರ್ ಆರ್ ನಗರದಲ್ಲಿ ಸೋತ ಅಭ್ಯರ್ಥಿ ಹೇಳಿದ್ರೆ ಕೆಲಸ ಆಗುತ್ತೆ. ಬಡವ ಮನೆ ಕಟ್ಟಲು ಸೋತ ಅಭ್ಯರ್ಥಿ ಯ ಅನುಮತಿ ಬೇಕು ಎಂದು ಹೇಳಿದರು.
ಆರ್ ಆರ್ ನಗರದಲ್ಲಿ ಸೋತ ಅಭ್ಯರ್ಥಿ ಹೇಳಿದ ಮಾತು ಕೇಳುತ್ತಾರೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿನ್ನ ಜತೆ ಇದ್ದೇನೆ ಎಂದು ಹೇಳಿದ್ದಾರೆ. ಪಕ್ಷ ನನ್ನ ಜತೆ ಇದೆ, ಧರಣಿ ಕೈ ಬಿಡುವಂತೆ ಸೂಚಿಸಿದರು. ಅವರ ಸೂಚನೆ ಮೇರೆಗೆ ಧರಣಿ ಕೈ ಬಿಡುತ್ತಿದ್ದೇನೆ. ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ಗೆಲ್ಲುವುದಕ್ಕೆ ನೀವು ಕೆಲಸ ಮಾಡಿ, ನಮ್ಮ ಅಭ್ಯರ್ಥಿ ಗಾಗಿ ನಾನು ಕೆಲಸ ಮಾಡ್ತೀನಿ. ಆದರೆ, ಅಭಿವೃದ್ಧಿಗಾಗಿ ಒಂದಾಗಿ ಹೋಗೋಣ ಎಂದು ಹೇಳಿದರು.












Click it and Unblock the Notifications