ಗುಲ್ಬರ್ಗದಲ್ಲಿ ಪೊಲೀಸ್ ಗುಂಡಿಗೆ ಸುಪಾರಿ ಕಿಲ್ಲರ್ ಫಿನಿಷ್

ಗುಲ್ಬರ್ಗದ ರೋಜಾ ಪೊಲೀಸ್ ಠಾಣೆ ಸಮೀಪ ಬುಧವಾರ ಮಧ್ಯಾಹ್ನ ಈ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ ಸುಪಾರಿ ಕಿಲ್ಲರ್ ಮುನ್ನಾ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಿಂದಾಗಿ ಇಬ್ಬರು ಪೊಲೀಸ್ ಪೇದೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬ್ಯಾಂಕ್ ದರೋಡೆ ಮತ್ತು ಅಕ್ರಮವಾಗಿ ಶಸ್ತ್ರಾಸ್ತ ಹೊಂದಿದ್ದ ಆರೋಪದ ಮೇಲೆ ಮುಂಬೈ ಮೂಲದ ಸುಪಾರಿ ಕಿಲ್ಲರ್ ಮುನ್ನಾನನ್ನು ಪೊಲೀಸರು ಬುಧವಾರ ಗುಲ್ಬರ್ಗದ ರೋಜಾ ಪೊಲೀಸ್ ಠಾಣೆ ಸಮೀಪದಲ್ಲಿ ಬಂಧಿಸಲು ಮುಂದಾದರು. ಈ ಸಮಯದಲ್ಲಿ ಮುನ್ನಾ ಮತ್ತು ಆತನ ಸಹಚರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಪೊಲೀಸರು ಪ್ರತಿದಾಳಿ ನಡೆಸಿದಾಗ ಮುನ್ನಾ ಗಂಭೀರವಾಗಿ ಗಾಯಗೊಂಡಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮುನ್ನಾ ಮೇಲೆ ಆರು ಕೊಲೆ ಕೇಸುಗಳು ದಾಖಲಾಗಿದ್ದವು. ಆದರೆ, ಆತ ಎಲ್ಲಾ ಪ್ರಕರಣಗಳಲ್ಲೂ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದನು. ನಂತರ ಸುಪಾರಿ ಕಿಲ್ಲರ್ ಆಗಿ ಬದಲಾಗಿದ್ದ ಇವನು, ಶಾರ್ಪ್ ಶೂಟರ್ ಎಂದು ಭೂಗತ ಜಗತ್ತಿನಲ್ಲಿ ಹೆಸರು ಗಳಿಸಿದ್ದ.
ಕಳೆದ ಕೆಲವು ದಿನಗಳ ಹಿಂದೆ ನಡೆದಿದ್ದ ಮತ್ತೋಟ್ ಫೈನಾನ್ಸ್ ದರೋಡೆ ಪ್ರಕರಣದಲ್ಲಿ ಮುನ್ನಾ ಕೈವಾಡವಿತ್ತು ಎಂದು ಪೊಲೀಸರು ಶಂಕಿಸಿದ್ದರು. ಆದ್ದರಿಂದ ಬುಧವಾರ ಮುನ್ನಾನನ್ನು ಬಂಧಿಸಲು ಪೊಲೀಸರು ಮುಂದಾದರು. ಈ ಸಮಯದಲ್ಲಿ ಮುನ್ನಾ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಇದರಿಂದ ಸ್ಟೇಷನ್ ಬಜಾರ್ ಠಾಣೆಯ ಪಿಎಸ್ಐ ಗಳಾದ ಮುರಳಿ ಮತ್ತು ಮಲ್ಲಿಕಾರ್ಜುನ ಬಂಡೆ ಗಾಯಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮುನ್ನಾನಿಗೂ ಗಾಯಗಳಾಗಿದ್ದು ಅವನನ್ನು ಭುವನೇಶ್ವರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುನ್ನಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪಿಎಸ್ಐ ಮಲ್ಲಿಕಾರ್ಜುನ್ ಬಂಡೆ ಅವರ ಸ್ಥಿತಿಯೂ ಗಂಭೀರವಾಗಿದೆ. ಮುನ್ನಾ ಇಬ್ಬರು ಸಹಚರರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications