Government Employee: ನಿವೃತ್ತಿ ವೇತನ ಪರಿಷ್ಕರಣೆ ಕೋರಿದ್ದ ಅರ್ಜಿ ರದ್ದು
ಬೆಂಗಳೂರು, ಫೆಬ್ರವರಿ 18: ನಿವೃತ್ತಿ ವೇತನ ಪರಿಷ್ಕರಣೆ ಕುರಿತು ನಿವೃತ್ತ ಪ್ರಾಧ್ಯಾಪಕರು ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಸರ್ಕಾರ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ 18ಕ್ಕೂ ಅಧಿಕ ನಿವೃತ್ತ ಪ್ರಾಧ್ಯಾಪಕರು ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ.
ಹೈಕೋರ್ಟ್ ಏಕಸದಸ್ಯರ ಪೀಠ 6ನೇ ಕೇಂದ್ರಿಯ ವೇತನ ಆಯೋಗ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ವೇತನ ಪರಿಷ್ಕರಣೆಗೆ ಅನುಗುಣವಾಗಿ ನಿವೃತ್ತ ಪ್ರಾಧ್ಯಾಪಕರ ವೇತನ ಪರಿಷ್ಕರಣೆ ಮಾಡಿ ಅವರಿಗೆ 4 ತಿಂಗಳಿನಲ್ಲಿ ಪಿಂಚಣಿ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.

ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಮೂರ್ತಿ ಅನು ಶಿವರಾಮನ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಪೀಠದ ಮುಂದೆ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎಸ್. ಎ. ಅಹಮದ್ ವಾದ ಮಂಡನೆ ಮಾಡಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವೇತನ ಪರಿಷ್ಕರಣೆ ದಿನದಂದು ಉದ್ಯೋಗದಲ್ಲಿ ಇಲ್ಲದ ಕಾರಣನೌಕರರಿಗೆ ವೇತನ ಪರಿಷ್ಕರಣೆ ಲಾಭ ದೊರಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ ಮತ್ತು ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದೆ. ವೇತನ ಪರಿಷ್ಕರಣೆಗಾಗಿ ಮೈಸೂರು ಮೂಲದ ಕೆ. ಗೋಪಾಲ್ ಸೇರಿದಂತೆ 18ಕ್ಕೂ ಅಧಿಕ ನಿವೃತ್ತ ಪ್ರಾಧ್ಯಾಪಕರು ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ವಾದ-ಪ್ರತಿವಾದಗಳೇನು?; ಅರ್ಜಿಯ ವಿಚಾರಣೆ ವೇಳೆ ಸರ್ಕಾರ ರಿಟ್ ಅರ್ಜಿದಾರರ ನಿವೃತ್ತರಾಗಿದ್ದು, ಇವರ ನಿವೃತ್ತಿ ವೇತನವು ಅರ್ಜಿದಾರರ ಕೊನೆಯ ವೇತನವನ್ನ ಆಧರಿಸಿದೆ. ಆದ್ದರಿಂದ ಹಾಲಿ ನಿಯಮ ಮತ್ತು ನಿವೃತ್ತಿ ವೇತನ ಪರಿಷ್ಕರಣೆಯಲ್ಲಿ ಯಾವುದೇ ಬದಲಾವಣೆ ಆಗಿರುವುದಿಲ್ಲ ಎಂದು ಹೇಳಿತ್ತು.
ನಿವೃತ್ತಿ ವೇತನ ಪರಿಷ್ಕರಣೆಯಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಸರ್ಕಾರ ಏಕಸದಸ್ಯ ಪೀಠದ ಆದೇಶ ಜಾರಿಗೊಳಿಸಲು ಮುಂದಾದರೆ ಬೊಕ್ಕಸಕ್ಕೆ 477 ಕೋಟಿ ರೂ. ಹೊರೆಯಾಗಲಿದೆ. ಆದ್ದರಿಂದ ಆದೇಶವನ್ನು ರದ್ದುಗೊಳಿಸಬೇಕು ಎಂದು ಮೇಲ್ಮನವಿ ಅರ್ಜಿಯಲ್ಲಿ ಸರ್ಕಾರ ಮನವಿ ಮಾಡಿತ್ತು.
ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ ನೀಡುವ ಸಲಹೆ-ಸೂಚನೆಗಳು ಸರ್ಕಾರಕ್ಕೆ ಬಾಧ್ಯಸ್ಥವೇ ಹಾಗೂ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2008ರ ಡಿಸೆಂಬರ್ 21ರಂದು ನೀಡಿರುವ ನಿರ್ದೇಶನ ವೇತನ ಪರಿಷ್ಕರಣೆ ಅನುಷ್ಠಾನಗೊಳ್ಳುವ ದಿನದಂದು ನಿವೃತ್ತಿ ಹೊಂದಿದ ಪಿಂಚಣಿದಾರರಿಗೂ ಅನ್ವಯ ಆಗುತ್ತದೆಯೇ? ಎಂಬ ಪ್ರಶ್ನೆಗಳನ್ನು ಪರಾಮರ್ಶಿಸಿ ಅರ್ಜಿಯನ್ನು ರದ್ದುಗೊಳಿಸಿ ಆದೇಶಿಸಿದೆ.
ಆದೇಶದಲ್ಲಿ ಕೋರ್ಟ್ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆಗಳನ್ನು ನೀಡಬಹುದು. ಆದರೆ ನೌಕರರ ಸೇವಾ ಷರತ್ತುಗಳಿಗೆ ಸಂಬಂಧಪಟ್ಟಂತೆ ನೀಡುವ ಸಲಹೆ, ಸೂಚನೆಗಳು ಸರ್ಕಾರಕ್ಕೆ ಬಾಧ್ಯವಲ್ಲ. ವೇತನ ಪರಿಷ್ಕರಣೆಯ ದಿನದಂದು ಉದ್ಯೋಗದಲ್ಲಿ ಇಲ್ಲದ ಕಾರಣ ನೌಕರರಿಗೆ ವೇತನ ಪರಿಷ್ಕರಣೆಯ ಲಾಭ ದೊರೆಯುವುದಿಲ್ಲ ಎಂದು ಹೇಳಿದೆ.












Click it and Unblock the Notifications