ಅತಿವೃಷ್ಟಿ ಹಾನಿ; ರೈತರಿಗೆ ಬೆಳೆ ಪರಿಹಾರ ಘೊಷಣೆ ಮಾಡಿದ ಕಂದಾಯ ಸಚಿವ ಆರ್. ಅಶೋಕ್!
ಬೆಂಗಳೂರು, ಸೆ. 04: ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಚರ್ಚೆ ನಡೆಸಿತು.
ನಂತರ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, "ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಅದರಿಂದುಂಟಾದ ಪ್ರವಾಹದಿಂದ ರಾಜ್ಯದ 15 ಜಿಲ್ಲೆಗಳ 86 ತಾಲ್ಲುಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಲಾಗಿದೆ. ಹಲವಾರು ರೈತರ ಬೆಳೆಹಾನಿ, ಕೃಷಿ ಭೂಮಿ ಹಾನಿ, ಪ್ರಾಣಿಗಳ ಸಾವು, ಸಾರ್ವಜನಿಕ ರಸ್ತೆ, ಕಟ್ಟಡಗಳು, ನೀರಾವರಿ ವ್ಯವಸ್ಥೆ ಗಳಿಗೆ ಹಾನಿಯುಂಟಾಗಿತ್ತು. ಕಂದಾಯ ಇಲಾಖೆಯು ಒಟ್ಟು ಹಾನಿಯನ್ನು ಸುಮಾರು 5,690 ಕೋಟಿ ರೂ ಎಂದು ಅಂದಾಜಿಸಿ ಪ್ರಸ್ತಾವನೆ ಸಲ್ಲಿಸಿತ್ತು. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಸುಮಾರು 765.84 ಕೋಟಿ ರೂ ಎಂದು ಅಂದಾಜಿಸಿದೆ" ಎಂದು ಮಾಹಿತಿ ನೀಡಿದ್ದಾರೆ.

ಜೊತೆಗೆ, "ಶನಿವಾರ ಕೇಂದ್ರ ಎನ್ ಡಿ ಆರ್ ಎಫ್ 3 ತಂಡಗಳು ರಾಜ್ಯಕ್ಕೆ ಬಂದಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಅವರಲ್ಲಿ ಪ್ರಮುಖವಾಗಿ ಸುಶೀಲ್ ಪಾಲ್ ನೇತೃತ್ವದ ತಂಡವು ಬೆಳಗಾವಿ ಜಿಲ್ಲೆಯಲ್ಲಿ, ಗುರುಪ್ರಸಾದ ನೇತೃತ್ವದ ತಂಡವು ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ, ವಿಜಯಕುಮಾರ ನೇತೃತ್ವದ ತಂಡವು ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದಿನಿಂದ ಸೆ. 7ರವರೆಗೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಿ ಹಾನಿಯ ಸರ್ವೇ ಕಾರ್ಯ ನಡೆಸಲಿದೆ ಎಂದು ಆರ್. ಅಶೋಕ್ ವಿವರಿಸಿದ್ದಾರೆ.

"ಪ್ರಸ್ತುತ ಕಂದಾಯ ಇಲಾಖೆ ರಾಜ್ಯದ 13 ಜಿಲ್ಲೆಗಳ 45,586 ಫಲಾನುಭವಿಗಳನ್ನು ಬೆಳೆ ಪರಿಹಾರ ನೀಡಲು ಗುರುತಿಸಿ, ಸುಮಾರು 38.65 ಕೋಟಿ ರೂಗಳನ್ನು ಪರಿಹಾರ ನೀಡಲು ಇಂದು ಅನುಮೋದನೆ ನೀಡಿದ್ದೇನೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುವುದು.ರಾಜ್ಯ ಸರ್ಕಾರ ರೈತರ ಎಲ್ಲ ಕಷ್ಟಗಳಿಗೆ ಶೀಘ್ರ ಸ್ಪಂದಿಸುತ್ತದೆ. ನಾಡಿನ ಜೀವನಾಡಿಗಳಾದ ರೈತರ ಜೊತೆ ಸದಾ ಸರ್ಕಾರ ನಿಂತಿದೆ" ಎಂದು ಭರವಸೆ ನೀಡಿದ್ದಾರೆ.












Click it and Unblock the Notifications