ಖುಷಿಸುದ್ದಿ: ಭಾನುವಾರವೂ ತೆರೆದಿರಲಿದೆ ಸಬ್ ರಿಜಿಸ್ಟ್ರಾರ್ ಕಚೇರಿ, ಪಹಣಿಗಳಿಗೆ ಆಧಾರ್ ಜೋಡಣೆ ಆರಂಭ
ಬೆಂಗಳೂರು, ಮಾರ್ಚ್ 13: ಬೆಂಗಳೂರು ಸೇರಿ ಮಹಾನಗರ ಪಾಲಿಕೆ ವ್ಯಾಪ್ತಿಯ ನೋಂದಣಿ ಕಚೇರಿಗಳನ್ನು ಭಾನುವಾರವೂ ಸಹಿತ ಕಾರ್ಯನಿರ್ವಹಿಸುವಂತೆ ಆದೇಶ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.
ನೋಂದಣಿ ಸಮಯದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಮತ್ತು ಸರ್ಕಾರದ ಸೌಲಭ್ಯಗಳನ್ನು ರೈತರಿಗೆ ನೇರವಾಗಿ ತಲುಪಿಸುವ ಉದ್ದೇಶದಿಂದ ರಾಜ್ಯದಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

'ನನ್ನ ಆಸ್ತಿ ನನ್ನ ಗುರುತು'
'ನನ್ನ ಆಸ್ತಿ' ಯೋಜನೆಯಡಿ 'ನನ್ನ ಆಸ್ತಿ ನನ್ನ ಗುರುತು' ಎಂಬ ಉದ್ದೇಶದಿಂದ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಕೆಲವೆಡೆ ಪೈಲಟ್ ಆಗಿ ಮಾಡಲಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ. ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಈಗಾಗಲೇ ಗ್ರಾಮಾಧಿಕಾರಿಗಳು 19 ಲಕ್ಷ ರೈತರನ್ನು ಸಂಪರ್ಕಿಸಿದ್ದಾರೆ. ಅದರಲ್ಲಿ 6 ಲಕ್ಷ ಪಹಣಿಗಳಿಗೆ ಸಂಬಂಧಿಸಿದಂತೆ ಅದರ ಖಾತೆದಾರರು ಮೃತಪಟ್ಟಿದ್ದಾರೆ. ಹೀಗೆ ಮೃತಪಟ್ಟವರ ಹೆಸರಿನಲ್ಲಿ ಪಹಣಿಗಳು ಇದ್ದರೆ ದುರಪಯೋಗ ಆಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಆಧಾರ್ ಜೋಡಣೆ ಮಾಡುವುದರಿಂದ ಯಾರದ್ದೋ ಆಸ್ತಿ ಮತ್ತಾರೋ ನೋಂದಣಿ ಮಾಡಿಸಿಕೊಳ್ಳುವಂತಹ ಅಕ್ರಮಗಳಿಗೆ ಕಡಿವಾಣ ಹಾಕಬಹದು ಎಂದು ಹೇಳಿದ್ದಾರೆ.
ಆಸ್ತಿಗಳ ನೋಂದಣಿ ಸಮಯದಲ್ಲಿಯೂ ಸಹ ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತದೆ. ಆಗ ಆಧಾರ್ ಸಂಖ್ಯೆ ಕೊಡದಿದ್ದರೆ ಅದು ಅನುಮಾನಕ್ಕೆ ಕಾರಣವಾಗಿ ಅದರ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ನಂತರ ನೋಂದಣಿ ಮಾಡಿದರೆ ಒಂದಷ್ಟು ಅಕ್ರಮಗಳನ್ನು ತಡೆದಂತಾಗುತ್ತದೆ ಎಂದು ಆಧಾರ್ ಜೋಡಣೆಯ ಅಗತ್ಯತೆಯನ್ನು ವಿವರಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದರೂ ಸಹ ಅದರ ಮಧ್ಯೆಯೂ ಆಧಾರ್ ಜೋಡಣೆ ಕಾರ್ಯ ಮಾಡಬೇಕು ಎಂದು ಗ್ರಾಮಾಧಿಕಾರಿಗಳಿಗೆ ಸೂಚಿಸಲಾಗಿದೆ. ನಮ್ಮ ಗ್ರಾಮಾಧಿಕಾರಿಗಳು ಮನೆ ಮನೆಗೆ ತೆರಳಿ ಪಹಣಿ ಮತ್ತು ಆಧಾರ್ ಜೋಡಣೆ ಕಾರ್ಯ ಮಾಡುತ್ತಾರೆ. ಸಾರ್ವಜನಿಕರೂ ಸಹ ತಮ್ಮ ಸಮೀಪದ ಕಂದಾಯ ಕಚೇರಿಗೆ ತೆರಳಿ ಆಧಾರ್ ಜೋಡಣೆ ಮಾಡಿಸಲು ಸಹ ಅವಕಾಶ ನೀಡಲಾಗಿದೆ.
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಭಾನುವಾರವೂ ನೋಂದಣಿ
ಅನೇಕ ಜನರು ನೋಂದಣಿಗಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜಾ ಹಾಕಿ ಬರಬೇಕಾಗುತ್ತದೆ. ನಗರ ಪ್ರದೇಶಗಳಲ್ಲಿ ಇದರಿಂದ ಕೆಲವರಿಗೆ ಅನಾನುಕೂಲ ಆಗುತ್ತಿದೆ. ಆದ್ದರಿಂದ ಒಂದು ಕಂದಾಯ ಜಿಲ್ಲೆಯಲ್ಲಿ ಕನಿಷ್ಠ 6-7 ನೋಂದಣಾ ಕಚೇರಿಗಳು ಇರುತ್ತವೆ. ರೋಸ್ಟರ್ ಆಧಾರದ ಮೇಲೆ ಒಂದೊಂದು ವಾರ ಒಂದೊಂದು ನೋಂದಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಲಾಗಿದೆ. ಇದರ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಸ್ವಯಂಚಾಲಿತ ದಾಖಲೀಕರಣ
ಇನ್ನು, ಬ್ಯಾಂಕ್‌ಗಳಲ್ಲಿ ಸಾಲ ಪಡೆದರೆ, ಸಾಲ ತೀರುವಳಿಯಾದರೆ, ವಿಭಾಗ ಮಾಡಕೊಂಡರೆ, ಆಸ್ತಿಯನ್ನು ಅಡಮಾನ ಇಟ್ಟರೆ, ಎಸಿ ನ್ಯಾಯಾಲಯದ ಆದೇಶಗಳಾಗಿದ್ದರೆ ಹೀಗೆ ಸಣ್ಣಪುಟ್ಟ ಬದಲಾವಣೆಗಳು ಆದಾಗ ಅದರ ವಿವರವನ್ನು ಪಹಣಿಯಲ್ಲಿ ದಾಖಲಿಸುವುದನ್ನು ಸ್ವಯಂಚಾಲಿತ ಮಾಡಲಾಗಿದೆ. ಇದಕ್ಕಾಗಿ ಗ್ರಾಮಾಧಿಕಾರಿಗಳು ಧೃಢೀಕರಣ (ಥಂಬ್ ಕೊಡುವುದು) ಮಾಡುವುದು ಅಗತ್ಯವಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಆಯಾ ಪಹಣಿ ಮೇಲೆ ಬ್ಯಾಂಕ್‌ಗಳು, ನ್ಯಾಯಾಲಯಗಳು ಹೀಗೆ ವಿವಿಧ ಮೂಲಗಳಿಂದ ನೀಡುವ ಮಾಹಿತಿಯನ್ನು ನೇರವಾಗಿ ಪಡೆದು ಅದನ್ನು ಪಹಣಿಯಲ್ಲಿ ದಾಖಲಿಸಲಾಗುತ್ತದೆ. ಇದಕ್ಕಾಗಿ ರೈತರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದಾಡುವ ಅಗತ್ಯವಿಲ್ಲ. ಇದರಿಂದ ರೈತರ ಸಮಯ, ಅಧಿಕಾರಿಗಳ ಸಮಯ ಪೋಲಾಗುವುದು ಮತ್ತು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿದಂತಾಗುತ್ತದೆ ಎಂದಿದ್ದಾರೆ.












Click it and Unblock the Notifications