ಆ ಶಿಕ್ಷೆ ನೀಡಿದರೆ ಭ್ರಷ್ಟಾಚಾರ ಇರೋದಿಲ್ಲ.. ಸಂತೋಷ್ ಹೆಗ್ಡೆ ಖಡಕ್ ಮಾತು!
ದೇಶದಲ್ಲಿ ಎಲ್ಲೆಡೆ ಭ್ರಷ್ಟಾಚಾರ ಮಿತಿ ಮೀರಿದೆ. ಏನೇ ಮಾಡಿದ್ರೂ ಇದರ ಸದ್ದು ಅಡಗಿಸಲು ಸಾಧ್ಯವೇ ಆಗ್ತಿಲ್ಲ. ಭ್ರಷ್ಟಾಚಾರ ಮುಕ್ತ ಸಮಾಜ ಕಾಣೋದಂತೂ ಕನಸಿನ ಮಾತು ಎಂಬಂತಾಗಿದೆ. ಭ್ರಷ್ಟಾಚಾರ ತಡೆಗೆ ಹಲವು ಇಲಾಖೆಗಳು ಕೆಲಸ ಮಾಡ್ರಿದ್ರೂ ಇದಕ್ಕೆ ಕೊನೆಯೇ ಇಲ್ಲ. ಇನ್ನು ಈ ವಿಚಾರವಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಹತ್ವದ ಸಲಹೆಯೊಂದನ್ನ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಭ್ರಷ್ಟಾಚಾರ ತಡೆಯಬೇಕು ಎಂದರೆ ದೇಶದಲ್ಲಿ ಚೀನಾದಲ್ಲಿರುವ ಶಿಕ್ಷೆಯ ಪದ್ಧತಿ ಜಾರಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ರೀತಿ ನಡೆದರೆ ಮಾತ್ರವೇ ಇಲ್ಲಿನ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಾಧ್ಯ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಮ್ಮರವಾಗಿ ಬೆಳೆಯುತ್ತಿದೆ. ಸದ್ಯ ನಮ್ಮಲ್ಲಿರುವ ವಿಚಾರಣೆ ಪದ್ಧತಿ ಹಾಗೂ ಶಿಕ್ಷೆಗಳಿಗೆ ಯಾವುದೇ ಬೆಲೆ ಇಲ್ಲ ಎನ್ನುವಂತಾಗಿದೆ. ಭ್ರಷ್ಟಾಚಾರಿಗಳಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆ ನೀಡಿದರೆ ಮಾತ್ರವೇ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಆಗಲಿದೆ ಎಂದು ಸಂತೋಷ್ ಹೆಗ್ಡೆ ಹೇಳಿದ್ದಾರೆ.
ಭ್ರಷ್ಟಾಚಾರ ಮಾಡುವವರಿಗೆ ಶಿಕ್ಷೆಯ ಮೇಲೆ ಭಯವೇ ಇಲ್ಲ. ಮಹಾತ್ಮ ಗಾಂಧಿ ಅವರೇ ಜೈಲಿಗೆ ಹೋಗಿ ಬಂದಿದ್ದಾರೆ, ನಾವು ಹೋಗುವುದರಲ್ಲಿ ತಪ್ಪೇನು? ಎನ್ನುವ ಭಾವನೆ ರಾಜಕಾರಣಿಗಳಲ್ಲಿದೆ. ಜನರಲ್ಲಿ ನೈತಿಕ ಮೌಲ್ಯಗಳು ಮರೆಯಾಗುತ್ತಿವೆ. ಅಪರಾಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬರುವವರನ್ನು ಮೆರವಣಿಗೆ ಮಾಡಿ ಸ್ವಾಗತಿಸಲಾಗುತ್ತಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮನುಷ್ಯರಿಗೆ ಆಸೆ ಇರಬೇಕು, ಆದರೆ ಅದನ್ನು ತೀರಾ ಕೆಟ್ಟ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಉದಾಹರಣೆಗೆ ರಾಜ್ಯದಲ್ಲಿ ಮುಡಾ ಹಗರಣದ ಬಗ್ಗೆ ಖುದ್ದು ಉಚ್ಛ ನ್ಯಾಯಾಲಯವೇ ನಿರ್ದೇಶನ ನೀಡಿದ್ದರೂ ಮೊಂಡುತನ ಎಂಬುದು ನಿಂತಿಲ್ಲ. ಭ್ರಷ್ಟಾಚಾರದಿಂದ ಶ್ರೀಮಂತಿಕೆ ಬರಬಹುದು. ಆದ್ರೆ, ನೆಮ್ಮದಿಯ ಬದುಕು ಸಿಗಲು ಸಾಧ್ಯವೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರ ಮುಡಾ ಕೇಸ್ ಅನ್ನು ಪ್ರಸ್ತಾಪಿಸಿದ್ದಾರೆ.
ನಾನು ಈಗಾಗಲೇ ಸಾವಿರಾರು ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಯುವಜನರಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಕುರಿತಾಗಿ ಅವರಲ್ಲಿ ಜಾಗೃತಿ ಮೂಡಿಸಿದ್ದೇನೆ. ಇದರಿಂದ ಸ್ವಲ್ಪಮಟ್ಟಿಗಾದರೂ ಸಮಾಜದಲ್ಲಿ ಬದಲಾವಣೆ ಆಗಬಹುದು.
ಈ ವಿಚಾರದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದೇ ಆದಲ್ಲಿ, ದೇಶವೇ ಛಿದ್ರಗೊಳ್ಳುತ್ತೆ. ಹಾಗಾಗಿ ಯುವಜನರ ಭಾವನೆಗಳಲ್ಲಿ ಬದಲಾವಣೆ ತರಬೇಕೆಂದು ಈ ಪ್ರಯತ್ನ ನಡೆಸಿದ್ದೇನೆ. ಆದರೆ ಮುಂದಿನ ಭವಿಷ್ಯ ಜನರ ಕೈಯಲ್ಲೇ ಇದೆ ಎಂದು ಸಂತೋಷ್ ಹೆಗ್ಡೆ ಕಿವಿಮಾತು ಹೇಳಿದ್ದಾರೆ.
ಈ ಹಿಂದೆಯೂ ಸಂತೋಷ್ ಹೆಗ್ಡೆ ಅವರು ಭ್ರಷ್ಟಾಚಾರದ ಬಗ್ಗೆ ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ಭ್ರಷ್ಟ ರಾಜಕಾರಣಿಗಳ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲೆಡೆ ಮಿತಿಮೀರಿರುವ ಭ್ರಷ್ಟಾಚಾರ ನಿರ್ಮೂಲನೆ ಆದರೆ ಮಾತ್ರ ದೇಶ ಉಳಿಯುತ್ತದೆ ಎಂದು ಅವರು ಸಂದೇಶ ರವಾನಿಸಿದ್ದಾರೆ.












Click it and Unblock the Notifications