Upper Krishna Project: 'ಕೃಷ್ಣಾ ಮೇಲ್ದಂಡೆ ಯೋಜನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಮನವಿ'
ಬೆಂಗಳೂರು, ಫೆಬ್ರವರಿ 27: ಕೃಷ್ಣಾ ಮೇಲ್ದಂಡೆ ಯೋಜನೆ, ಆಲಮಟ್ಟಿ ಅಣೆಕಟ್ಟಿನ ವಿಚಾರವಾಗಿ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸುವುದು ಬಾಕಿ ಇದ್ದು, ಆದಷ್ಟು ಬೇಗ ಅಧಿಸೂಚನೆ ಹೊರಡಿಸಬೇಕು. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಬೇಕು. ಇದಕ್ಕಾಗಿ ಅಗತ್ಯ ಅನುಮತಿ ನೀಡಬೇಕು. ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳಲು ನಾವು ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಕಾಮಗಾರಿ ಆರಂಭಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಭೂಸ್ವಾಧೀನ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡಿದ್ದಾರೆ. ಯೋಜನೆ ವೆಚ್ಚ ದಿನೇ ದಿನೆ ಏರಿಕೆಯಾಗುತ್ತದೆ ಎಂಬ ಕಾರಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಮುಗಿಸಲು ತೀರ್ಮಾನಿಸಿದ್ದೇವೆ. ಕಳಸಾ ಬಂಡೂರಿ ಯೋಜನೆಗೆ ಅಗತ್ಯವಿರುವ ಅರಣ್ಯ ಇಲಾಖೆ ಅನುಮತಿ ಬಾಕಿ ಇದೆ. ಈ ಹಿಂದೆ ನಾನು ಹಾಗೂ ಮುಖ್ಯಮಂತ್ರಿಗಳು ಈ ಮಂಡಳಿಯ ನೇತೃತ್ವ ವಹಿಸಿರುವ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದೆವು. ಆಗ ಪ್ರಧಾನ ಮಂತ್ರಿಗಳು ಈ ವಿಚಾರವಾಗಿ ತೀರ್ಮಾನ ಮಾಡಲು ಜಲಶಕ್ತಿ ಸಚಿವರಿಗೆ ತಿಳಿಸಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾವು ಕೇಂದ್ರ ಸಚಿವರ ಮೇಲೆ ಒತ್ತಡ ಹಾಕುತ್ತಿದ್ದೇವೆ. ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜತೆಗೂ ಚರ್ಚೆ ಮಾಡಿದ್ದು, ಅವರು ಕೂಡ ಅರಣ್ಯ ಇಲಾಖೆ ಸಚಿವಾಲಯದ ಜತೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ನು ಸಣ್ಣ ನೀರಾವರಿ ಇಲಾಖೆಯ ಯೋಜನೆಗೆ ಸಂಬಂಧಿಸಿದಂತೆ ನಮ್ಮ ಸಚಿವರಾದ ಬೋಸರಾಜು ಅವರು ಚರ್ಚೆ ಮಾಡಿದ್ದು, 3 ಸಾವಿರ ಕೋಟಿಯಷ್ಟು ಅನುದಾನ ಕೋರಿದ್ದಾರೆ. ನೀರಾವರಿಗೆ ಹೆಚ್ಚು ಅವಕಾಶವಿರುವ ರಾಜ್ಯಗಳ ಪೈಕಿ ರಾಜಸ್ಥಾನದ ನಂತರ ಕರ್ನಾಟಕವಿದೆ. ನಮ್ಮಲ್ಲಿ ಒಣಭೂಮಿ ಹೆಚ್ಚಾಗಿದ್ದು, ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅವಕಾಶವಿದೆ. ಕೇಂದ್ರ ಜಲಶಕ್ತಿ ಸಚಿವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಇನ್ನು ಇಲಾಖೆವತಿಯಿಂದ ಎಲ್ಲಾ ಸಂಸದರಿಗೆ ಪತ್ರ ಬರೆದು ಅವರ ಕ್ಷೇತ್ರಗಳಿಗೆ ಸಂಬಂಧಿಸಿದ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು. ಅವರು ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಈ ಯೋಜನೆಗಳಿಗೆ ಅನುಮತಿ ಪಡೆಯಬಹುದು. ಕೆಲವು ಸಂಸದರು ನಮಗೆ ಈ ವಿಚಾರ ಗೊತ್ತಿಲ್ಲ, ಮಾಹಿತಿ ನೀಡಿಲ್ಲ ಎಂದು ಹೇಳುತ್ತಿರುವ ಹಿನ್ನೆಲೆಯಲ್ಲಿ ಪತ್ರ ಬರೆದು ಮಾಹಿತಿ ನೀಡಲು ಮುಂದಾಗಿದ್ದೇನೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 5,300 ಕೋಟಿ ಅನುದಾನ ವಿಚಾರವಾಗಿ ಕೇಂದ್ರ ಸಚಿವರು ತಾಂತ್ರಿಕ ಕಾರಣ ನೀಡುತ್ತಿದ್ದರು. ನಾವು ಕೇಂದ್ರ ಸರ್ಕಾರಕ್ಕೆ ಒದಗಿಸಬೇಕಾದ ಎಲ್ಲಾ ದಾಖಲೆ ಒದಗಿಸಿದ್ದು, ಅವರು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ ಎಂದು ತಿಳಿಸಿದರು.
ನಾರಾಯಣಪುರ ಅಣೆಕಟ್ಟಿನಿಂದ ತೆಲಂಗಾಣಕ್ಕೆ ರಾತ್ರೋರಾತ್ರಿ ನೀರು ಬಿಡಲಾಗಿದೆ ಎಂಬ ಆರೋಪದ ಬಗ್ಗೆ ಕೇಳಿದಾಗ, "ಇಲ್ಲಿ ಮುಚ್ಚುಮರೆ ಇಲ್ಲ. ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ನೆರೆ ರಾಜ್ಯಗಳ ಜತೆ ಪರಸ್ಪರ ಸಹಾಯ ಮಾಡಿಕೊಂಡು ಬರಲಾಗಿದೆ. ಅವರುಗಳು ಕೂಡ ಕೆಲವು ಸಂದರ್ಭದಲ್ಲಿ ನಮಗೆ ಸಹಾಯ ಮಾಡಿದ್ದು, 1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇದು ಅನಧಿಕೃತವಾಗಿ ಬಿಟ್ಟಿರುವುದಲ್ಲ. ಆ ರಾಜ್ಯದ ಸಚಿವರು ಖುದ್ದಾಗಿ ಬಂದು ಮನವಿ ಮಾಡಿದ್ದರು, ನಾನು ಅನುಮತಿ ನೀಡಿ ನೀರು ಹರಿಸಲಾಗಿದೆ. ಅವರಿಗೆ ಸಹಾಯ ಮಾಡುವ ಪರಿಸ್ಥಿತಿ ಇದ್ದಾಗ, ನಮ್ಮ ಪರಿಸ್ಥಿತಿ ನೋಡಿಕೊಂಡು ಸಹಾಯ ಮಾಡಲಾಗಿದೆ, ನಮಗೆ ನೆರವಿನ ಅಗತ್ಯ ಇದ್ದಾಗ ಅವರು ಮಾಡಿದ್ದಾರೆ" ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ಕೊಳವೆ ಬಾವಿ ಕೊರೆಯುವುದು ಸ್ಥಗಿತಗೊಳಿಸಲಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಈ ವಿಚಾರವಾಗಿ ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ಪಾಲಿಕೆ ಜತೆ ನಾನು ಚರ್ಚೆ ಮಾಡಿದ್ದೆ. ಬೆಂಗಳೂರಿನಲ್ಲಿರುವ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಜಲಮಂಡಳಿ ಸುಪರ್ದಿಗೆ ನೀಡಲು ತೀರ್ಮಾನಿಸಿದ್ದೆವು. ಕೆಲವು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಿದ್ದೇವೆ. ಜಲಮಂಡಳಿ ಈ ಎಲ್ಲಾ ಘಟಕಗಳನ್ನು ದುರಸ್ಥಿಗೊಳಿಸಲಿದೆ ಎಂದು ತಿಳಿಸಿದರು.












Click it and Unblock the Notifications