Vande Bharat; ಬೆಂಗಳೂರು-ಧಾರವಾಡ ರೈಲಿಗೆ 6 ನಿಲುಗಡೆ ಕೊಡಿ
ಬೆಂಗಳೂರು, ಜೂನ್ 27: ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಚಾಲನೆ ಸಿಕ್ಕಿದೆ. ಕರ್ನಾಟಕದ 2ನೇ ವಂದೇ ಭಾರತ್ ರೈಲು ಇದಾಗಿದ್ದು, ಬೆಂಗಳೂರು-ಧಾರವಾಡ ನಡುವೆ ಮಂಗಳವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನ ಸಂಚಾರ ನಡೆಸುತ್ತದೆ.
ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ರೈಲು ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಹೊರಡಲಿದೆ. ಸದ್ಯ ಈ ರೈಲಿಗೆ ಯಶವಂತಪುರ, ದಾವಣಗೆರೆ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ಮೂರು ನಿಲುಗಡೆ ಇದೆ. ರೈಲು ಪ್ರಯಾಣಿಕರು ಈ ರೈಲಿಗೆ ಹೆಚ್ಚಿನ ನಿಲುಗಡೆ ಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಚಿತ್ರದುರ್ಗದ ಸಂಸದ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ. ನಾರಾಯಣ ಸ್ವಾಮಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹೊಳಲ್ಕೆರೆ ತಾಲ್ಲೂಕಿನ ಚಿಕ್ಕಜಾಜೂರಿನಲ್ಲಿ ನಿಲುಗಡೆ ಕೋರಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಸಕಾರಾತ್ಮವಾದ ಸ್ಟಂದನೆಯೂ ಸಿಕ್ಕಿದೆ. ಆದರೆ ಅಧಿಕೃತ ಆದೇಶ ಇನ್ನೂ ಆಗಬೇಕಿದೆ.
6 ನಿಲುಗಡೆಗೆ ಕೋರಿಕೆ; ಬೆಂಗಳೂರು-ಧಾರವಾಡ ನಡುವಿನ ರೈಲು ಯಶವಂತಪುರ, ದಾವಣಗೆರೆಯಲ್ಲಿ 2 ನಿಮಿಷ ಮತ್ತು ಹುಬ್ಬಳ್ಳಿಯಲ್ಲಿ 5 ನಿಮಿಷ ನಿಲುಗಡೆ ಹೊಂದಿದೆ. ಮೂರು ನಿಲುಗಡೆ ಮಾತ್ರ ಇರುವುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲಿದೆ ಎಂದು ರೈಲು ಪ್ರಯಾಣಿಕರು ಹೇಳಿದ್ದಾರೆ.
ತುಮಕೂರು, ಬೀರೂರು ಮತ್ತು ಹಾವೇರಿಯಲ್ಲಿ ತಲಾ 2 ನಿಮಿಷ ರೈಲು ನಿಲುಗಡೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ. ಬೆಂಗಳೂರು೦-ತುಮಕೂರು ನಡುವಿನ ಹೆಚ್ಚಿನ ಪ್ರಯಾಣಿಕರು ವಂದೇ ಭಾರತ್ ದರ ಹೆಚ್ಚಾದ ಕಾರಣ ಪ್ರಯಾಣಿಸುವುದಿಲ್ಲ. ಆದರೆ ತುಮಕೂರಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ಹೋಗುವ ಜನರಿಗೆ ಅನುಕೂಲವಾಗಲಿದೆ ಎಂದು ಪ್ರಯಾಣಿಕರು ಇಲಾಖೆ ಗಮನ ಸೆಳೆದಿದ್ದಾರೆ.
ಹಾವೇರಿ ಕಡೆಯಿಂದ ಬೆಂಗಳೂರು, ತುಮಕೂರ ಕಡೆ ಹೆಚ್ಚು ಪ್ರಯಾಣಿಕರು ಸಂಚಾರ ನಡೆಸುತ್ತಾರೆ. ಹಾವೇರಿಯಲ್ಲಿ ನಿಲುಗಡೆ ನೀಡಿದರೆ ಅವರಿಗೆ ಅನುಕೂಲವಾಗಲಿದೆ. ಬೀರೂರು ಸಹ ಮಲೆನಾಡು ಸಂಪರ್ಕಿಸುವ ಪ್ರಮುಖ ಜಂಕ್ಷನ್ ಆಗಿದೆ. ವಂದೇ ಭಾರತ್ ರೈಲು ಅಲ್ಲಿ ನಿಲುಗಡೆಗೊಂಡರೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ ಜನರಿಗೆ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ನರೇಂದ್ರ ಮೋದಿ ಚಾಲನೆ; ಬೆಂಗಳೂರು-ಧಾರವಾಡ ನಡುವಿನ ವಂದೇ ಭಾರತ್ ರೈಲಿಗೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಆಗಿ ಚಾಲನೆ ನೀಡಿದ್ದಾರೆ. ಪ್ರತಿದಿನ ಒಂದು ಟ್ರಿಪ್ ಈ ರೈಲು ಮಂಗಳವಾರ ಹೊರತುಪಡಿಸಿ ವಾರದ ಉಳಿದ ದಿನ ಬೆಂಗಳೂರು-ಧಾರವಾಡ ತನಕ ಸಂಚಾರ ನಡೆಸಲಿದೆ.
* ರೈಲು ನಂಬರ್ 20661 ನಲ್ಲಿ ಕೆಎಸ್ಆರ್ ಬೆಂಗಳೂರು-ದಾವಣಗೆರೆ ಎಸಿ ಚೇರ್ ಕಾರ್ ದರ 915 ರೂ., ಎಕ್ಸಿಕ್ಯುಟಿವ್ ಕ್ಲಾಸ್ 1740 ರೂ.ಗಳು.
* ಕೆಎಸ್ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವಿನ ಎಸಿ ಚೇರ್ ಕಾರ್ ದರ 1135 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 2180 ರೂ.ಗಳು.
* ಕೆಎಸ್ಆರ್ ಬೆಂಗಳೂರು-ಧಾರವಾಡ ನಡುವಿನ ಎಸಿ ಚೇರ್ ಕಾರ್ ದರ 1165 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ ದರ 2010 ರೂ.ಗಳು.
* ರೈಲು ನಂಬರ್ 20662 ನಲ್ಲಿ ಧಾರವಾಡ-ಕೆಎಸ್ಆರ್ ಬೆಂಗಳೂರು ನಡುವಿನ ದರ ಎಸಿ ಚೇರ್ ಕಾರ್ 1330 ರೂ. ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 2440 ರೂ.ಗಳು.
* ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ನಡುವಿನ ದರ ಎಸಿ ಚೇರ್ ಕಾರ್ 1330 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 2375 ರೂ.ಗಳು.
* ದಾವಣಗೆರೆ-ಕೆಎಸ್ಆರ್ ಬೆಂಗಳೂರು ನಡುವಿನ ದರ ಎಸಿ ಚೇರ್ ಕಾರ್ 860 ಮತ್ತು ಎಕ್ಸಿಕ್ಯುಟಿವ್ ಕ್ಲಾಸ್ 1690 ರೂ.ಗಳು.












Click it and Unblock the Notifications